Advertisement

Dharmasthala ಹೊಸ ರೂಪ ಪಡೆದ ಸವಾರ ಮತ್ತೆ ಹಳೆ ಸರದಾರ

11:06 PM Oct 20, 2023 | Team Udayavani |

ತೆಕ್ಕಟ್ಟೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಮೂಲೆ ಸೇರಿದ್ದ 75 ವರ್ಷಗಳ ಹಿಂದಿನ ಫೋರ್ಡ್‌ ಕಂಪೆನಿಯ ವಿ8 ಸಿರೀಸ್‌ ವಾಹನಕ್ಕೆ ತೆಕ್ಕಟ್ಟೆ ಸಮೀಪದ ಮಲ್ಯಾಡಿ ಶ್ರೀ ಗಜಾನನ ಟ್ರಕ್‌ ಬಾಡಿ ಬಿಲ್ಡರ್‌ ಆ್ಯಂಡ್‌ ವೆಲ್ಡಿಂಗ್‌ ವರ್ಕ್ಸ್ ಮಾಲಕ ಮಂಜುನಾಥ ಆಚಾರ್ಯ ಮರುಜೀವ ನೀಡಿದ್ದು, ನವೀಕೃತ ವಾಹನವು ಶುಕ್ರವಾರ ಮತ್ತೆ ಧರ್ಮಸ್ಥಳ ಸೇರಿದೆ.

Advertisement

1948ನೇ ಇಸವಿಯ ಈ ಮಿನಿ ಲಾರಿ ಶ್ರೀ ಕ್ಷೇತ್ರದ ಸರಕು ಸಾಗಾಣಿಕೆಯಲ್ಲಿ 30 ವರ್ಷಗಳ ಕಾಲ, ಬಳಿಕ ಹಲವು ವರ್ಷ ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿತ್ತು. 20 ವರ್ಷಗಳಿಂದ ಮಂಜುಷಾ ಮ್ಯೂಸಿಯಂನ ಶೆಡ್‌ನ‌ಲ್ಲಿ ನಿಂತಿದ್ದ ವಾಹನವನ್ನು ನೋಡಿದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಲಾರಿಯನ್ನು ಮರು ವಿನ್ಯಾಸ ಮಾಡುವ ನಿರ್ಧಾರ ಮಾಡಿ ಇದಕ್ಕೂ ಮೊದಲೇ ಮ್ಯೂಸಿಯಂನ 2 ಹಳೆಯ ವಾಹನಗಳಿಗೆ ಮರುಜೀವ ನೀಡಿದ್ದ ಮಲ್ಯಾಡಿಯ ಶ್ರೀ ಗಜಾನನ ಟ್ರಕ್‌ ಬಾಡಿ ಬಿಲ್ಡರ್‌ ಆ್ಯಂಡ್‌ ವೆಲ್ಡಿಂಗ್‌ ವರ್ಕ್ಸ್ ಗೆ ಒಪ್ಪಿಸಿದ್ದರು.

ಕಾರ್ಯದಕ್ಷತೆ ವೃದ್ಧಿ
ಲಾರಿಯ ಟಿಂಕರಿಂಗ್‌ ಕೆಲಸವನ್ನು ಲಾರೆನ್ಸಾ ಬೊರೆಟ್ಟೊ, ಬಾಡಿ ಕೆಲಸವನ್ನು ಮಂಜುನಾಥ ಆಚಾರ್ಯರ ಪುತ್ರರಾದ ವಿಘ್ನೇಶ್‌ ಆಚಾರ್ಯ, ನಿತೀಶ್‌ ಆಚಾರ್ಯ, ಹರೀಶ್‌ ಆಚಾರ್ಯ, ವರ್ಣ ವಿನ್ಯಾಸವನ್ನು ಲಕ್ಷ್ಮಣ ಕುಂಭಾಶಿ ಅವರ ತಂಡ ನಿರ್ವಹಿಸಿದೆ. ಎಲೆಕ್ಟ್ರಿಕಲ್‌ ಕೆಲಸವನ್ನು ಶ್ರೀ ಲಕ್ಷ್ಮೀ ಎಲೆಕ್ಟ್ರಿಕಲ್‌ನ ಮಂಜುನಾಥ ಮಣೂರು ಹಾಗೂ ಟಯರ್‌ನ ಕಾರ್ಯದಕ್ಷತೆ ಹೆಚ್ಚಿಸುವಲ್ಲಿ ಹರೀಶ್‌ ಶ್ರಮಿಸಿದ್ದಾರೆ. ಕಲಾವಿದ ನಾಗರಾಜ್‌ ಬೀಜಾಡಿ ಅವರು ತೈಲ ವರ್ಣದ ಮೂಲಕ ಕಲಾತ್ಮಕ ಬರಹ ಹಾಗೂ ಚಿತ್ತಾರದ ಮೂಲಕ ವಾಹನದ ಮೆರುಗನ್ನು ಹೆಚ್ಚಿಸಿದ್ದಾರೆ.

ಧರ್ಮಸ್ಥಳ ಮಂಜುಷಾ ಮ್ಯೂಸಿ ಯಂನ ಕಾರ್ಯ ನಿರ್ವಹಣಾ ಧಿಕಾರಿ ದಿವಾಕರ ಪ್ರಭು ಅವರ ವಿಶೇಷ ಮುತುವರ್ಜಿಯಲ್ಲಿ ಲಾರಿಯ ಸಂಪೂರ್ಣ ಮರು ವಿನ್ಯಾಸ ಗೊಂಡಿದ್ದು, ಮಂಜುಷಾ ಮ್ಯೂಸಿಯಂ ನಲ್ಲಿ ಸಾರ್ವಜನಿಕರಿಗೆ ಕಾಣಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next