Advertisement

ಹುಣಸೂರು: ಅಕ್ರಮವಾಗಿ ವ್ಯಾಪಾರ ಮಾಡುತ್ತಿದ್ದ 75 ನಗರಸಭೆ ಮಳಿಗೆಗಳಿಗೆ ಬೀಗ

12:36 PM Dec 04, 2022 | Team Udayavani |

ಹುಣಸೂರು: ಹುಣಸೂರು ನಗರದ ವಿವಿಧೆಡೆ ನಿರ್ಮಿಸಿರುವ ನಗರಸಭೆಯ ವಾಣಿಜ್ಯ ಮಳಿಗೆಗಳು ಹರಾಜು ಆಗಿ 9 ತಿಂಗಳು ಕಳೆದಿದ್ದರೂ ಬಾಡಿಗೆದಾರರು ಖಾಲಿ ಮಾಡದ ಪರಿಣಾಮ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ನಗರಸಭೆ ಪೌರಾಯುಕ್ತೆ ಎಂ.ಮಾನಸರ ನೇತೃತ್ವದಲ್ಲಿ ಹಲವರ ವಿರೋಧದ ನಡುವೆಯೂ ಕಾರ್ಯಾಚರಣೆ ನಡೆಸಿ 75 ಮಳಿಗೆಗಳನ್ನು ತೆರವುಗೊಳಿಸಿ ಬೀಗ ಜಡಿದು ವಶಕ್ಕೆ ಪಡೆದರು.

Advertisement

ಶನಿವಾರ ಮುಂಜಾನೆ 6 ಗಂಟೆಯಿಂದ ಸಂಜೆವರೆಗೂ ಕಾರ್ಯಾಚರಣೆಗಿಳಿದ ಪೌರಾಯುಕ್ತೆ ಎಂ.ಮಾನಸ, ಪರಿಸರ ಇಂಜಿನಿಯರ್ ರೂಪಾ, ಕಂದಾಯಾಧಿಕಾರಿ ಪಂಪಾ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಸಿಬ್ಬಂದಿಗಳು ನಗರದ ಸಂತೆ ಮಾಳದಲ್ಲಿದ್ದ 71, ಅಕ್ಷಯ ಬಂಡಾರ್ ವೃತ್ತದಲ್ಲಿ 2 ಹಾಗೂ ಎಚ್.ಡಿ.ಕೋಟೆ ವೃತ್ತದಲ್ಲಿ 2 ಸೇರಿದಂತೆ ಒಟ್ಟು 75 ಮಳಿಗೆಗಳಲ್ಲಿ ಅಕ್ರಮವಾಗಿ ಮಳಿಗೆಗಳಲ್ಲಿ ವ್ಯಾಪಾರ ನಡೆಸುತ್ತಿದ್ದವರಿಗೆ ತೆರವುಗೊಳಿಸುವಂತೆ ಸೂಚಿಸಿದರು.

ಕೆಲವರು ಒಪ್ಪಿ ತಾವೇ ತೊರವುಗೊಳಿಸಿದರೆ, ಇನ್ನೂ ಹಲವರು ವಿರೋಧ ವ್ಯಕ್ತಪಡಿಸಿ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿಗಿಳಿದು ಖಾಲಿ ಮಾಡಲು ಮತ್ತಷ್ಟು ಸಮಯಾವಕಾಶ ನೀಡಿ, ಕೋರ್ಟಿಗೆ ಹೋಗಿ ತಡೆಯಾಜ್ಞೆ ತರುತ್ತೇವೆಂಬ ಮನವಿಗೆ ಅಧಿಕಾರಿಗಳು ಒಪ್ಪದಿದ್ದಾಗ ವ್ಯಾಪಾರಸ್ಥರು ಪ್ರತಿಭಟನೆಗೆ ಮುಂದಾದರೂ ಅಧಿಕಾರಿಗಳು, ಪೊಲೀಸರು ಅವಕಾಶ ನೀಡಲಿಲ್ಲ.

ನಂತರ ತೆರವುಗೊಳಿಸಲು ಹಿಂದೇಟು ಹಾಕಿದ ಮಳಿಗೆಗಳಲ್ಲಿದ್ದ ವಸ್ತುಗಳನ್ನು ವಿಡಿಯೋ ಚಿತ್ರಿಕರಣಗೊಳಿಸಿ, ತೆರವುಗೊಳಿಸಿ ಬೀಗ ಹಾಕಿ ಸೀಲ್ ಹಾಕಿ ನಗರಸಭೆ ಸುಪರ್ದಿಗೆ ಪಡೆದರು.

ಕಾರ್ಯಾಚರಣೆಯಲ್ಲಿ ಮೈಸೂರಿನ ಯೋಜನಾ ಪ್ರಾಧಿಕಾರ ಕಚೇರಿಯ ಅಧಿಕಾರಿ ಸೋಮನಾಥ್, ಸಾಯಿಶಂಕರ್, ಕಂದಾಯಾಧಿಕಾರಿಗಳಾದ ಸಿದ್ದರಾಜು, ಸುರೇಂದ್ರ, ಹಿರಿಯ ಆರೋಗ್ಯಾಧಿಕಾರಿ ಸತೀಶ್, ಚಂದ್ರು, ನಗರಸಭೆ ವಕೀಲ ನಂದನ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Advertisement

ಅಕ್ರಮವಾಗಿ ಕುಳಿತಿದ್ದ ಮಳಿಗೆಯವರಿಗೆ ಹಲವು ಬಾರಿ ನೋಟಿಸ್‌ ನೀಡಲಾಗಿತ್ತಾದರೂ ತೆರವುಗೊಳಿಸಿರಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕಾರ್ಯಾಚರಣೆ ನಡೆಸಲಾಗಿದೆ. ನಗರಸಭೆಯ 103 ಮಳಿಗೆಗಳ ಪೈಕಿ ಮೂರು ಮಳಿಗೆ ಹರಾಜಾಗಿಲ್ಲ. 12 ಮಳಿಗೆಯವರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ತೆರವುಗೊಳಿಸಿಲ್ಲ. 13 ಮಂದಿ ಹರಾಜಾಗಿರುವ ಮಳಿಗೆಗಳಲ್ಲೇ ಮುಂದುವರೆದಿರುವುದರಿಂದ ಉಳಿದ 75 ಮಳಿಗೆಗಳನ್ನು ತೆರವುಗೊಳಿಸಲಾಗಿದೆ.

ಈ ಸಂಬಂಧ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ, ನಿರ್ಣಯಿಸಿ  ಹರಾಜಿನಲ್ಲಿ ಮಳಿಗೆ ಪಡೆದಿರುವವರಿಗೆ ನಿಯಮಾನುಸಾರ ಮಳಿಗೆಗಳನ್ನು ಹಸ್ತಾಂತರಿಸಲಾಗುವುದೆಂದು ಪೌರಾಯುಕ್ತೆ ಉದಯವಾಣಿಗೆ ಎಂ.ಮಾನಸ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next