Advertisement

ಪ್ರತಿ ವಾರ್ಡ್‌ಗೂ 75 ಲಕ್ಷ ಮೇಯರ್‌ ಅನುದಾನ

03:27 PM Jul 29, 2023 | Team Udayavani |

ಮೈಸೂರು: ಅಭಿವೃದ್ಧಿ ಕೈಗೊಳ್ಳಲು ಮಹಾನಗರ ಪಾಲಿಕೆಯ 65 ವಾರ್ಡ್‌ಗೆ ತಲಾ 75 ಲಕ್ಷ ರೂ. ಮೇಯರ್‌ ಅನುದಾನ ನೀಡಲು ಶುಕ್ರವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಒಪ್ಪಿಗೆ ದೊರೆಯಿತು. ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್‌ ಸಭಾಂಗಣದಲ್ಲಿ ಮೇಯರ್‌ ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಸದಸ್ಯರ ಒತ್ತಾಯದ ಮೇರೆಗೆ ನಿರ್ಣಯ ಕೈಗೊಳ್ಳಲಾಯಿತು.

Advertisement

ಅನುದಾನ ನೀಡಿ: ಕಾರ್ಯಸೂಚಿ ಮಂಡನೆಗೂ ಮುನ್ನವೇ 1 ಕೋಟಿ ರೂ. ಅನುದಾನ ನೀಡುವಂತೆ ಬಿಜೆಪಿ, ಜೆಡಿಎಸ್‌ ಸದಸ್ಯರು ಮೇಯರ್‌ ಶಿವಕುಮಾರ್‌ ರನ್ನು ಒತ್ತಾಯಿಸಿದರು. 2022-23ರ ಅವಧಿಯಲ್ಲಿ ನೀಡಿರುವ 75 ಲಕ್ಷ ರೂ. ಅನುದಾನಕ್ಕೆ ಈಗ ಟೆಂಡರ್‌ ಪೂರ್ಣಗೊಂಡಿದೆ. ಪಾಲಿಕೆ ಈ ಅವಧಿ ಪೂರ್ಣಗೊಳ್ಳಲು ಕೆಲವೇ ತಿಂಗಳು ಬಾಕಿಯಿದ್ದು, ಈಗ ಅನುದಾನ ನೀಡಿದರೆ ಮಾತ್ರ ಬಳಸಲು ಸಾಧ್ಯವಾಗುತ್ತದೆ ಎಂದು ಆಗ್ರಹಿಸಿದರು.

ಈ ಸಂಬಂಧ ಪ್ರತಿಕ್ರಿಯೆ ನೀಡಿದ ಪಾಲಿಕೆ ನೂತನ ಆಯುಕ್ತ ಅಷಾದ್‌ ಉರ್‌ ರೆಹಮಾನ್‌ ಷರೀಫ್, ನಿನ್ನೆಯಷ್ಟೇ ಅಧಿಕಾರ ಸ್ವೀಕರಿಸಿದ್ದೇನೆ. ಅಧಿಕಾರಿಗಳ ಸಭೆ ಮಾಡಲು ಸಾಧ್ಯವಾಗಿಲ್ಲ. ಪಾಲಿಕೆ ಆರ್ಥಿಕ ಪರಿಸ್ಥಿತಿ ಪರಿಶೀಲಿಸಲು ಸಮಯಬೇಕಾಗುತ್ತದೆ. ತಕ್ಷಣಕ್ಕೆ 25 ಲಕ್ಷ ರೂ. ನೀಡಲಾಗುವುದು. ಮುಂದಿನ ವಾರವೇ ಮತ್ತೂಂದು ಸಭೆ ಕರೆಯುವುದಾಗಿ ಹೇಳಿದರು.

ಅನುದಾನ ಕೇಳಿ: ಇದಕ್ಕೆ ಒಪ್ಪದ ಸದಸ್ಯರು ಈಗ 75 ಲಕ್ಷ ರೂ. ನೀಡಿ, ಮುಂದಿನ ಸಭೆಯಲ್ಲಿ 25 ಲಕ್ಷ ರೂ. ನೀಡುವಂತೆ ಒತ್ತಾಯಿಸಿದರು. ಬಿಜೆಪಿ ಸದಸ್ಯ ರಮೇಶ್‌ 50 ಲಕ್ಷ ರೂ. ನೀಡಿದರೆ ಸಾಕೆಂದು ಪ್ರತಿಕ್ರಿಯಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಕಾಂಗ್ರೆಸ್‌ ಸದಸ್ಯ ಅಯೂಬ್‌ ಖಾನ್‌ ಪಾಲಿಕೆ ಆರ್ಥಿಕ ಸ್ಥಿತಿ ಗಮನದಲ್ಲಿರಿಸಿಕೊಂಡು ಅನುದಾನ ಕೇಳಬೇಕಿದೆ ಎಂದರು. ಈ ವೇಳೆಯೂ ಬಿಜೆಪಿ, ಜೆಡಿಎಸ್‌ ಸದಸ್ಯರು 1 ಕೋಟಿ ರೂ. ನೀಡುವಂತೆ ಆಗ್ರಹಿಸಿದರು. ಆಯುಕ್ತ ರೊಂದಿಗೆ ಚರ್ಚಿಸಿದ ಮೇಯರ್‌ ಶಿವಕುಮಾರ್‌ ಪ್ರತಿ ಸದಸ್ಯರಿಗೆ 75 ಲಕ್ಷ ರೂ. ನೀಡುವುದಾಗಿ ಪ್ರಕಟಿಸಿ, ಶೀಘ್ರದಲ್ಲಿ ಟೆಂಡರ್‌ ಕರೆದು ವರ್ಕ್‌ ಆರ್ಡರ್‌ ನೀಡುವಂತೆ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಅವರಿಗೆ ಸೂಚಿಸಿದರು.

Advertisement

ಅನುಪಯುಕ್ತ ಟ್ಯಾಬ್‌: ಪಾಲಿಕೆ ಸದಸ್ಯರಿಗೆ ನೀಡಿರುವ ಟ್ಯಾಬ್‌ ನಿರ್ವಹಣೆ ಕುರಿತಂತೆ ಸದಸ್ಯ ಕೆ.ವಿ.ಶ್ರೀಧರ್‌ ಸಭೆಯ ಗಮನ ಸೆಳೆದರು. ಟ್ಯಾಬ್‌ ಅನುಪಯುಕ್ತವಾಗಿದ್ದು, ಜನತೆ ಹಣ ವ್ಯರ್ಥವಾಗುತ್ತಿದೆ. ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು. ಈ ವೇಳೆ ಪರ ವಿರೋಧ ವ್ಯಕ್ತವಾಯಿತು.

ಅಜೆಂಡಾಗೆ ಆಗ್ರಹ: ಅಜೆಂಡಾ ನೀಡದೆ ಸಭೆ ನಡೆಸುತ್ತಿರುವುದಕ್ಕೆ ಜೆಡಿಎಸ್‌ ಸದಸ್ಯ ಎಸ್‌ಬಿಎಂ ಮಂಜು ಆಕ್ರೋಶ ವ್ಯಕ್ತಪಡಿಸಿ ಕೌನ್ಸಿಲ್‌ ಕಾರ್ಯದರ್ಶಿ ಉತ್ತರಿಸಬೇಕೆಂದು ಒತ್ತಾಯಿಸಿದರು. ಮೇಯರ್‌ ಶಿವಕುಮಾರ್‌ ಮಾತನಾಡಿ, ನನ್ನ ಅವಧಿ ಸೆಪ್ಟೆಂಬರ್‌ಗೆ ಮುಗಿಯಲಿದೆ. ಮುಂದಿನ ಸಭೆಯಲ್ಲಿ ಅಜೆಂಡದ ಮೇಲೆ ಚರ್ಚೆ ಮಾಡೋಣ ಎಂದು ಸಮಾಧಾನಪಡಿಸಿದರು.

ಹೆಚ್ಚುವರಿ ಪೌರ ಕಾರ್ಮಿಕರ ನೇಮಕ: ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರ ಕೊರತೆ ಇದೆ. 5ರಿಂದ 10 ಪೌರಕಾರ್ಮಿಕರು ಪ್ರತಿನಿತ್ಯ ಕರ್ತವ್ಯಕ್ಕೆ ಗೈರಾಗುತ್ತಿದ್ದಾರೆ. ಇದರಿಂದ ಕಸ ವಿಲೇವಾರಿ ಕಷ್ಟವಾಗಿದೆ ಎಂದು ವಿರೋಧ ಪಕ್ಷದ ನಾಯಕ ಆಯೂಬ್‌ ಖಾನ್‌ ಸಭೆಯ ಗಮನಸೆಳೆದು ಪ್ರಥಮ ಸ್ಥಾನ ಪಡೆಯಲು ಎಲ್ಲರೂ ಸಂಘಟಿತರಾಗಿ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಮೇಯರ್‌ ಶಿವಕುಮಾರ್‌ ಪ್ರತಿಕ್ರಿಯಿಸಿ, ಇಂಧೋರ್‌ ಅಧ್ಯಯನ ಪ್ರವಾಸದ ವೇಳೆ ಪೌರ ಕಾರ್ಮಿಕರು 2 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರು ವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಸುದೀರ್ಘ‌ವಾಗಿ ಚರ್ಚೆ ಮಾಡಿದ್ದೇವೆ. ಪ್ರತಿ ವಾರ್ಡಿಗೆ ಮೂವರು ಪೌರಕಾರ್ಮಿಕರನ್ನು ಕೊಡಬಹುದು. ಈ ಬಗ್ಗೆ ಚರ್ಚಿಸಿ ನಿರ್ಣಯಿಸುವುದಾಗಿ ತಿಳಿಸಿದರು.

ಆಡಳಿತ ಪಕ್ಷದ ನಾಯಕರ ನೇಮಕ: ಇದಕ್ಕೂ ಮುನ್ನ ಸಭೆ ಯಲ್ಲಿ ಆಡಳಿತ ಪಕ್ಷದ ನಾಯಕರನ್ನಾಗಿ ವಾರ್ಡ್‌ ಸಂಖ್ಯೆ 55ರ ಸದಸ್ಯ ಮ.ವಿ.ರಾಮಪ್ರಸಾದ್‌ರನ್ನು ನೇಮಕ ಮಾಡಲಾಯಿತು. ಉಪ ಮೇಯರ್‌ ಡಾ.ಜಿ.ರೂಪಾ, ಶಾಸಕ ಟಿ.ಎಸ್‌. ಶ್ರೀವತ್ಸ ಮತ್ತಿತರರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next