ಮುಂಬಯಿ : ಎರಡು ದಿನಗಳ ಹಿಂದೆ ಸ್ಪೈಸ್ ಜೆಟ್ ಪ್ರಯಾಣಿಕರ ವಿಮಾನ ರನ್ ವೇ ಯಿಂದ ಜಾರಿದ ಪರಿಣಾಮವಾಗಿ ಮುಖ್ಯ ರನ್ ವೇ ಮುಚ್ಚಲಾದ ಕಾರಣ ಇಂದು ಬುಧವಾರ ಮುಂಬಯಿ ವಿಮಾನ ನಿಲ್ದಾಣದಲ್ಲಿ ಸುಮಾರು 75 ವಿಮಾನಗಳ ಹಾರಾಟವನ್ನು ರದ್ದು ಪಡಿಸಲಾಯಿತು.
ಮುಖ್ಯ ರನ್ ವೇ ಬಂದ್ ಮಾಡಿರುವ ಪ್ರಯುಕ್ತ ಮುಂಬಯಿ ವಿಮಾನ ನಿಲ್ದಾಣ ನಿರ್ವಾಹಕರು ಇಂದು ಬುಧವಾರ ಮಧ್ಯರಾತ್ರಿಯ ತನಕ NOTAM – ನೊಟೀಸ್ ಟು ಏರ್ ಮನ್ – ಪಡೆದುಕೊಂಡಿದ್ದು ಆ ಪ್ರಕಾರ ಏರಿಂಡಿಯಾ ಇಂಜಿನಿಯರ್‌ಗಳು ಮತ್ತು ತಂತ್ರಜ್ಞರು ಕಳೆದ ಸೋಮವಾರ ರಾತ್ರಿ ರನ್ ವೇ ಯಿಂದ ಜಾರಿದ ಬೋಯಿಂಗ್ 737-800 ವಿಮಾನವನ್ನು ತೆರವು ಗೊಳಿಸುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.
ನೊಟೀಸ್ ಟು ಏರ್‌ಮನ್ (NOTAM) ಜಾರಿಗೊಳಿಸುವುದರ ಮುಖ್ಯ ಉದ್ದೇಶ ಈ ವಾಯು ಮಾರ್ಗದಲ್ಲಿ ಸಂಭಾವ್ಯ ಅಪಾಯವಿದೆ ಎಂಬುದನ್ನು ಪೈಲಟ್‌ಗಳು ಮತ್ತು ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಜಾಹೀರು ಮಾಡುವುದೇ ಆಗಿದೆ.
ಇಂದು ಬುಧವಾರ ಮುಂಬಯಿ ವಿಮಾನ ನಿಲ್ದಾಣದಲ್ಲಿ ಒಟ್ಟು 75 ವಿಮಾನ ಹಾರಾಟಗಳನ್ನು ರದ್ದುಪಡಿಸಲಾಗಿದ. ಈ ಪೈಕಿ 40 ವಿವಿಧ ಸಂಸ್ಥೆಗಳ ಆಗಮನ ವಿಮಾನಗಳಾಗಿದ್ದು 35 ನಿರ್ಗಮನ ವಿಮಾನಗಳಾಗಿವೆ.
ಈ ರದ್ದತಿಯ ಹೊರತಾಗಿ ವಿಮಾನ ನಿಲ್ದಾಣದಲ್ಲಿನ ಇತರೇ ಹಾರಾಟ ನಿರ್ವಹಣೆಗಳು, ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿವೆ ಎಂದು ಮುಂಬಯಿ ವಿಮಾನ ನಿಲ್ದಾಣ ನಿರ್ವಾಹಕರ ಅಧಿಕೃತ ಪ್ರಕಟನೆ ತಿಳಿಸಿದೆ.
ಸೋಮವಾರ ರಾತ್ರಿಯಿಂದಲೇ ಮುಂಬಯಿ ವಿಮಾನ ನಿಲ್ದಾಣದ ಎರಡನೇ ರನ್ ವೇ ಮೂಲಕ ಹಾರಾಟ ಕಾರ್ಯಗಳು ಸುಗಮವಾಗಿ ನಡೆಯುತ್ತಿವೆ. ರನ್ ವೇ ಯಿಂದ ಜಾರಿರುವ ವಿಮಾನವನ್ನು ತೆರವುಗೊಳಿಸುವ ಕೆಲಸಕ್ಕೆ ಇನ್ನಷ್ಟು ಸ್ವಲ್ಪ ಸಮಯ ಹಿಡಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.