ಯಾದಗಿರಿ: ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್-19 ಮಹಾಸ್ಪೋಟ ಸಂಭವಿಸಿದ್ದು, ಬರೋಬ್ಬರಿ 74 ಜನರಲ್ಲಿ ಸೋಂಕು ದೃಡವಾಗಿದೆ
5 ವರ್ಷದ ಬಾಲಕಿ ಪಿ-4396, ಇಬ್ಬರು 8 ವರ್ಷದ ಬಾಲಕಿಯರಾದ ಪಿ- 4407 ಮತ್ತು ಪಿ- 4447 ಹಾಗು 6 ವರ್ಷದ ಬಾಲಕ 4452 ಸೇರಿದಂತೆ 14 ಜನ ಅಪ್ರಾಪ್ತರು ಸೋಂಕಿಗೆ ತುತ್ತಾಗಿದ್ದಾರೆ.
ಇನ್ನೊಂದೆಡೆ ಸೋಂಕು ಸಮುದಾಯಕ್ಕೆ ವ್ಯಾಪಿಸುತ್ತಿದೆಯೇ ಎನ್ನುವ ಆತಂಕ ಎದುರಾಗಿದ್ದು 29 ವರ್ಷದ ಪುರುಷ ಸೋಂಕಿತ ಪಿ- 4446 ಗೆ ಸೋಂಕು ದೃಢವಾಗಿದ್ದು ಸೋಂಕಿನ ಮೂಲವೇ ಗೊತ್ತಾಗಿಲ್ಲ. ಈ ವ್ಯಕ್ತಿ ಯಾರ ಸಂಪರ್ಕಕ್ಕೆ ಬಂದಿದ್ದಾನೆ ಎನ್ನುವುದು ಪತ್ತೆ ಹಚ್ಚಲಾಗುತ್ತಿದೆ. ಸದ್ಯ ವ್ಯಕ್ತಿ ಹೋಂ ಕ್ವಾರಂಟೈನ್ ನಲ್ಲಿದ್ದಾನೆ.
ಜಿಲ್ಲೆಯಲ್ಲಿ ಈವರೆಗ 299 ಇದ್ದ ಸೋಂಕಿತರ ಸಂಖ್ಯೆ 373ಗೆ ಏರಿಕೆಯಾಗಿದೆ. ಒಂದಂಕಿಗೆ ಇಳಿದಿದ್ದ ಸೋಂಕಿತರ ಸಂಖ್ಯೆ ಏಕಾಏಕಿ 74 ಜನರಲ್ಲಿ ಪತ್ತೆಯಾಗಿ ಕೋವಿಡ್-19 ಬಾಂಬ್ ಸ್ಪೋಟವಾದಂತಾಗಿದೆ.
ರಾಜ್ಯದಲ್ಲಿ ಇಂದು 515 ಹೊಸ ಸೋಂಕು ಪ್ರಕರಣಗಳು ದೃಢವಾಗಿದ್ದು, ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 4835ಕ್ಕೆ ಏರಿಕೆ ಕಂಡಿದೆ. ಇದುವರೆಗೆ ಒಟ್ಟು 1688 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 57 ಜನರು ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ. ಇಬ್ಬರು ಸೋಂಕಿತರು ಕೋವಿಡ್ ಅಲ್ಲದ ಕಾರಣದಿಂದ ಮರಣ ಹೊಂದಿದ್ದಾರೆ.