Advertisement

ಬಿಬಿಎಂಪಿ ಮೈತ್ರಿ ತಿಕ್ಕಾಟಕ್ಕೆ 7300 ಕೋಟಿ ಕಾರಣ!

12:11 PM Jan 05, 2017 | |

ಬೆಂಗಳೂರು: ಬಿಬಿಎಂಪಿಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದೊಂದಿಗೆ ತೆರೆಮರೆಯಲ್ಲಿ ಸಾಕಷ್ಟು ಕಸರತ್ತುಗಳೊಂದಿಗೆ ಮೈತ್ರಿ ಸಫ‌ಲಗೊಳಿಸಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಯಲ್ಲಿ ಮೂರು ತಿಂಗಳು ಕಳೆಯುವುದರಲ್ಲಿ ಮುಸುಕಿನ ಗುದ್ದಾಟ ಕಾಣಿಸಿಕೊಂಡಿದೆ.

Advertisement

ಮೊದಲ ವರ್ಷದ ಮೈತ್ರಿಯಲ್ಲಿ ಆರು ತಿಂಗಳ ನಂತರ ತಾರತಮ್ಯದ ಅಪಸ್ವರ ಪ್ರಾರಂಭವಾದರೆ ಎರಡನೇ ವರ್ಷದ ಮೈತ್ರಿಯಲ್ಲಿ ಮೂರು ತಿಂಗಳಿಗೆ ಅಪಸ್ವರ ಪ್ರಾರಂಭವಾಗಿ ಬಿಬಿಎಂಪಿಯಲ್ಲಿ ಜೆಡಿಎಸ್‌ ಸ್ಥಿತಿ ಶೋಚನೀಯ ಎಂಬಂತಾಗಿದೆ.

ಉಪ ಮೇಯರ್‌, ನಗರ ಯೋಜನೆ, ವಾರ್ಡ್‌ ಮಟ್ಟದ ಕಾಮಗಾರಿ ಸೇರಿ ನಾಲ್ಕು ಸ್ಥಾಯಿ ಸಮಿತಿ, ಜತೆಗೆ  ಎರಡನೇ ಪ್ರತಿಪಕ್ಷ ನಾಯಕ ಸ್ಥಾನಮಾನ ಜೆಡಿಎಸ್‌ ಪಾಲಿಗೆ ದಕ್ಕಿದ್ದರೂ ಎಲ್ಲವೂ ನಾಮ್‌ಕಾವಾಸ್ತೆ. ಯಾವ ತೀರ್ಮಾನ ಕೈಗೊಳ್ಳುವಾಗಲೂ ಜೆಡಿಎಸ್‌ನವರನ್ನು ಕಾಂಗ್ರೆಸ್‌ನವರು “ಕ್ಯಾರೇ’ ಎನ್ನುತ್ತಿಲ್ಲ ಎನ್ನುವುದು ಜೆಡಿಎಸ್‌ ಸದಸ್ಯರ ಅಳಲು.

ಮೈತ್ರಿ ವಿಚಾರದಲ್ಲಿ ಆಸಕ್ತಿ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಇದೀಗ ಏನಾಗುತ್ತಿದೆ ಎಂಬುದರ ಬಗ್ಗೆ ಗಮನಹರಿಸುತ್ತಿಲ್ಲ. ಮೈತ್ರಿಗೆ ವೇದಿಕೆ ಸಿದ್ಧಪಡಿಸಿದ ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್‌ ಸಹ ಸಮಸ್ಯೆ ಬಗೆಹರಿಸುವ  ಗೋಜಿಗೆ ಹೋಗುತ್ತಿಲ್ಲ.

ಹೀಗಾಗಿ, ಬಿಬಿಎಂಪಿಯಲ್ಲಿ ಪ್ರತಿಯೊಂದಕ್ಕೂ ಕಾಂಗ್ರೆಸ್‌-ಜೆಡಿಎಸ್‌ ನಡುವೆ ಗುದ್ದಾಡುವ ಸ್ಥಿತಿ ನಿರ್ಮಾಣವಾಗಿದ್ದು, ದೂರು ಇದೀಗ ಜೆಡಿಎಸ್‌ ವರಿಷ್ಠ  ಎಚ್‌.ಡಿ. ದೇವೇಗೌಡರಿಗೆ “ಅಂಗಳ’ ತಲುಪಿದೆ. ಜತೆಗೆ ಅಮೆರಿಕ ಪ್ರವಾಸದಲ್ಲಿರುವ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ವಾಪಸಾದ ನಂತರ ದೂರು ಕೊಡಲು ಜೆಡಿಎಸ್‌ ಸ್ಥಾಯಿ ಸಮಿತಿ ಸದಸ್ಯರು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಕಾರಣವೇನು?: ಮೈತ್ರಿಯೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವಿನ ತಿಕ್ಕಾಟದ ಮೂಲ ಕಾರಣ 7300 ಕೋಟಿ ರೂಪಾಯಿ.
 ಹೌದು, ರಾಜ್ಯ ಸರ್ಕಾರದಿಂದ ಬಿಬಿಎಂಪಿ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ 7300 ಕೋಟಿ ರೂ. ಮೊತ್ತದಲ್ಲಿ ಯಾವ ಕಾಮಗಾರಿ ಕೈಗೊಳ್ಳಬೇಕು ಎಂದು ನಿರ್ಧಾರ ಮಾಡುವ ಅಧಿಕಾರ ಸ್ಥಾಯಿ ಸಮಿತಿ, ಕೌನ್ಸಿಲ್‌ ಅಥವಾ ಆಯುಕ್ತರಿಗೆ ಇಲ್ಲ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ಮುಂದೆ ಒಪ್ಪಿಗೆ ಪಡೆದು, ನಗರ ಅಭಿವೃದ್ಧಿ ಸಚಿವರ ಅನುಮತಿ ಪಡೆಯುವುದು ಕಡ್ಡಾಯ.

ಇದು, ಜೆಡಿಎಸ್‌ಗೆ ನುಂಗಲಾರದ ತುತ್ತಾಗಿದೆ. ಈ ಮೊದಲು ರಾಜ್ಯ ಸರ್ಕಾರದ ಅನುದಾನದ ಕಾಮಗಾರಿಗಳನ್ನು ಸ್ಥಾಯಿ ಸಮಿತಿಯಲ್ಲಿ ತೀರ್ಮಾನ ಮಾಡಿ, ಕೌನ್ಸಿಲ್‌ ಸಭೆಯಲ್ಲಿ ಒಪ್ಪಿಗೆ ಪಡೆದು ಆಯುಕ್ತರ ಮೂಲಕ ಸರ್ಕಾರಕ್ಕೆ ಸಲ್ಲಿಸಿ ಒಪ್ಪಿಗೆ ಪಡೆಯಲಾಗುತ್ತಿತ್ತು. ಆದರೆ, ಇದಕ್ಕೆ ಕತ್ತರಿ ಹಾಕಿದ ಸರ್ಕಾರ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆ ಮೂಲಕ ಯೋಜನೆಗಳ ಒಪ್ಪಿಗೆ ಪಡೆದು ಜಾರಿಗೊಳಿಸಲು ಮುಂದಾಗಿದೆ.

ಇದರಿಂದಾಗಿ ಪ್ರಮುಖ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಜೆಡಿಎಸ್‌ನವರೇ ಆಗಿದ್ದರೂ ಯಾವುದೇ ಕಡತವೂ ಬರುತ್ತಿಲ್ಲ. ಇದು ಜೆಡಿಎಸ್‌ ಸದಸ್ಯರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.  ಮುಖ್ಯಮಂತ್ರಿವರೆಗೂ ದೂರು ಹೋದರೂ, ನಾನು ಮೈತ್ರಿ ಸಂದರ್ಭದಲ್ಲಿ ಇರಲಿಲ್ಲ, ಇದ್ದವರನ್ನು ಕರೆಸಿ ಮಾತಾಡ್ತೇನೆ ಎಂದು ಸಾಗ ಹಾಕಿದ್ದಾರೆ. ಹೀಗಾಗಿ, ಇದೀಗ ದೂರು ದೇವೇಗೌಡರವರೆಗೂ ಹೋಗಿದೆ.

ಬಿಜೆಪಿ ಜಾಣ ಮೌನ
ರಾಜ್ಯ ಸರ್ಕಾರದ ವತಿಯಿಂದ ಬೆಂಗಳೂರು ಅಭಿವೃದ್ಧಿಗೆ ಮೀಸಲಿಟ್ಟಿರುವ 7300 ಕೋಟಿ ರೂ. ಕಾಮಗಾರಿ ನಿರ್ಧಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಗೆ ಕೊಟ್ಟಿರುವುದರಿಂದ ಬಿಬಿಎಂಪಿ ಅಧಿಕಾರ ಕಸಿದಿರುವುದು ಪ್ರತಿಪಕ್ಷ ಬಿಜೆಪಿಗೆ ಗೊತ್ತಿದೆ. ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಒಮ್ಮೆ ಕೌನ್ಸಿಲ್‌ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ, ಪಕ್ಷದ ನಾಯಕರು ಆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಮೈತ್ರಿ ಮಾಡಿಕೊಂಡಿರುವವರು ಕಾಂಗ್ರೆಸ್‌-ಜೆಡಿಎಸ್‌. ತೊಂದರೆ ಆಗುವುದೇ ಆದರೆ ಜೆಡಿಎಸ್‌ನವರಿಗೆ ಆಗುತ್ತದೆ. ಅನುಭವಿಸಲಿ ಬಿಡು ಎಂದು ಸುಮ್ಮನಾಗಿ ಇಬ್ಬರ ಜಗಳ ನೋಡಿ ಒಳಗೊಳಗೆ ಖುಷಿ ಪಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next