Advertisement

ನೌಕರರ ವಿರುದ್ಧದ 7,200 ಪ್ರಕರಣ ವಾಪಸ್‌; “ಕಾರ್ಮಿಕ ದಿನಾಚರಣೆ’ಗೆ ಕೆಎಸ್‌ಆರ್‌ಟಿಸಿ ಗಿಫ್ಟ್

10:53 PM May 01, 2022 | Team Udayavani |

ಬೆಂಗಳೂರು: ಅಶಿಸ್ತಿನ ನಡೆ, ರಸ್ತೆ ಅಪಘಾತ, ಗೈರು ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣಗಳನ್ನು ಎದುರಿಸುತ್ತಿದ್ದ ಸಾರಿಗೆ ನೌಕರರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು “ಕಾರ್ಮಿಕ ದಿನಾಚರಣೆ’ಯ ಕೊಡುಗೆ ನೀಡಿದೆ.

Advertisement

ವಿವಿಧ ಕಾರಣಗಳಿಂದ ಸಾರಿಗೆ ನೌಕರರ ವಿರುದ್ಧ ದಾಖಲಾಗಿದ್ದ 7,200 ಪ್ರಕರಣಗಳನ್ನು ಏಕಕಾಲಕ್ಕೆ ಕೆಎಸ್‌ಆರ್‌ಟಿಸಿ ಹಿಂಪಡೆದಿದೆ.

ಇದರಲ್ಲಿನ ಬಹುತೇಕ ಪ್ರಕರಣಗಳು ಸುಮಾರು 25 ಸಾವಿರ ರೂ.ಗಳವರೆಗೂ ದಂಡ ವಿಧಿಸುವಂತಹವುಗಳಾಗಿವೆ. ಆದರೆ, ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಕೇವಲ 100ರಿಂದ 500 ರೂ.ವರೆಗೂ ದಂಡ ವಿಧಿಸಿ ಒಟ್ಟು 7,200 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

ಎಲ್ಲ ಸಿಬಂದಿಯ ವಿರುದ್ಧ ದಾಖಲಾಗಿದ್ದ ಶಿಸ್ತು ಕ್ರಮ ಪ್ರಕರಣ ಹಿಂಪಡೆದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಜಾಗೃತರಾಗಿರಬೇಕು ಎಂದು ರವಿವಾರ ನಡೆದ ಕಾರ್ಮಿಕ ದಿನಾಚರಣೆಯಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್‌ ಹೇಳಿದರು.

8,414 ಸಿಬಂದಿ ವಿರುದ್ಧ ಶಿಸ್ತು ಪ್ರಕರಣವಿತ್ತು
ನಿಗಮದಲ್ಲಿರುವ ಒಟ್ಟು 35,000 ಸಿಬ್ಬಂದಿ ಪೈಕಿ 8,414 ಸಿಬಂದಿಗಳ ವಿರುದ್ಧ ಶಿಸ್ತು ಪ್ರಕರಣಗಳಿದ್ದವು. ಪ್ರಕರಣ ಹಿಂಪಡೆದಿರುವ ಹಿನ್ನೆಲೆಯಲ್ಲಿ ಎಲ್ಲ ಸಿಬಂದಿ ಮುಂದಿನ ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು.

Advertisement

ಕಾರ್ಮಿಕರೇ ಸಾರಿಗೆ ಇಲಾಖೆಯ ಬೆನ್ನೆಲುಬು. ಚಾಲಕರು, ನಿರ್ವಾಹಕರು ಮತ್ತು ತಾಂತ್ರಿಕ ಸಿಬಂದಿಗಳಿಂದ ನಿಗಮ ನಡೆಯುತ್ತಿದೆ. ವಿನಾ ವ್ಯವಸ್ಥಾಪಕ ನಿರ್ದೇಶಕರಿಂದಲ್ಲ. ಸಾರಿಗೆ ಸಂಸ್ಥೆಯ ಕಾರ್ಮಿಕರು ರಕ್ಷಣೆ ಮತ್ತು ಅವರ ನೆಮ್ಮದಿ ಜೀವನ ನಮಗೆ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದರು.

ನಿಗಮವನ್ನು ಬಲಪಡಿಸೋಣ
ನಿಗಮದ ನಿತ್ಯ ಸರಾಸರಿ ಆದಾಯ 10 ಕೋಟಿ ಇರಬೇಕು. ಆದರೆ ನಮಗೆ ಸರಾಸರಿ 8 ಕೋಟಿ ಮಾತ್ರ ಬರುತ್ತಿದೆ. ಇದರಲ್ಲಿ ಶೇ. 70ರಷ್ಟು ಡೀಸೆಲ್‌ ಪಾವತಿಗೆ ಸಂದಾಯವಾಗುತ್ತಿದೆ. ಹೀಗಾಗಿ ನಿಗಮದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ. ಹಾಗಾಗಿ, ನಿಗಮ ಬಲಗೊಳ್ಳಬೇಕಾದಲ್ಲಿ ನೌಕರರರ ಸೇವೆ ಮಹತ್ವದ್ದಾಗಿದೆ. ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಲು ಎಲ್ಲ ಸಿಬಂದಿ ಕೈಜೋಡಿಸಬೇಕು ಎಂದು ಹೇಳಿದರು.

ಎಂಬಿಬಿಎಸ್‌, ಎಂಟೆಕ್‌ ಸೇರಿ ಉನ್ನತ ಮಟ್ಟದ ವಿದ್ಯಾಭ್ಯಾಸ ಮಾಡಿರುವ ನೌಕರರ ಮಕ್ಕಳನ್ನು ಪುರಸ್ಕರಿಸಲಾಯಿತು. ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next