Advertisement

72ರ ವೃದ್ಧನ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ: ಕಾನೂನು ಸಲಹೆ ಪಡೆಯಲು ಹೈಕೋರ್ಟ್‌ ಸೂಚನೆ

08:54 PM Mar 01, 2021 | Team Udayavani |

ಬೆಂಗಳೂರು: ಇಬ್ಬರು ನ್ಯಾಯಮೂರ್ತಿಗಳು ಹಾಗೂ ಕೆಲ ವಕೀಲರನ್ನು ಕೊಲ್ಲುವುದಾಗಿ ಬೆದರಿಸಿ ಪತ್ರ ಬೆರೆದ ಆರೋಪದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವ 72 ವರ್ಷದ ವೃದ್ಧ ಎಸ್‌.ವಿ. ಶ್ರೀನಿವಾಸ್‌ ರಾವ್‌ ಅವರ ವಯಸ್ಸು ಮತ್ತು ಆರೋಗ್ಯದ ಸ್ಥಿತಿಯನ್ನು ಪರಿಗಣಿಸಿರುವ ಹೈಕೋರ್ಟ್‌, ಪ್ರಕರಣದಲ್ಲಿ ಮುಂದುವರಿಯುವ ಮೊದಲು ಕಾನೂನು ಸಲಹೆ ಪಡೆದುಕೊಳ್ಳುವಂತೆ ಅವರಿಗೆ ಸೂಚನೆ ನೀಡಿದೆ.

Advertisement

ಶ್ರೀನಿವಾಸ್‌ ರಾವ್‌ ವಿರುದ್ಧ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ನ್ಯಾಯಾಂಗ ನಿಂದನೆ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಈ ವೇಳೆ, ಶ್ರೀನಿವಾಸರಾವ್‌ ಸಲ್ಲಿಸಿದ ಲಿಖೀತ ಆಕ್ಷೇಪಣೆಯನ್ನು ಪರಿಶೀಲಿಸಿದ ನ್ಯಾಯಪೀಠ, ನಿಮ್ಮ ಆಕ್ಷೇಪಣೆಯನ್ನು ಸಮರ್ಥಿಸಿಕೊಳ್ಳುವ ಮತ್ತು ಪ್ರಕರಣದಲ್ಲಿ ಮುಂದುವರಿಯುವ ಮೊದಲು ಒಮ್ಮೆ ಕಾನೂನು ಸಲಹೆ ಪಡೆದುಕೊಳ್ಳಿ ಎಂದು ಹೇಳಿತು.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾಗಿದ್ದ ಶ್ರೀನಿವಾಸ್‌ ರಾವ್‌ ತಮ್ಮ ವಾದವನ್ನು ಸಮರ್ಥಿಸಿಕೊಂಡರು. ನಾನು ಮಾಡಿರುವ ಪ್ರತಿಯೊಂದು ಆರೋಪಗಳನ್ನು ದಾಖಲೆ ಸಮೇತ ಸಾಬೀತುಪಡಿಸುತ್ತೇನೆ. ಈ ವಿಚಾರದಲ್ಲಿ ಯಾವ ಶಿಕ್ಷೆಯಾದರೂ ಎದುರಿಸಲು ನಾನು ಸಿದ್ಧನಿದ್ದೇನೆ ಎಂದರು.

ಇದನ್ನೂ ಓದಿ:ಎಸ್‌ಬಿಐ ಗೃಹ ಸಾಲದ ಮೇಲಿನ ಆರಂಭಿಕ ಬಡ್ಡಿ ದರ ಇಳಿಕೆ

Advertisement

ಅದಕ್ಕೆ, ಇಂತಹ ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯ ಹಿಂಜರಿಯುವುದಿಲ್ಲ. ನೀವು ನ್ಯಾಯಮೂರ್ತಿಗಳ ವಿರುದ್ಧ ಎಂತಹ ಗಂಭೀರ ಆರೋಪಗಳನ್ನು ಮಾಡಿದ್ದೀರಿ ಎಂದು ನಿಮಗೆ ತಿಳಿದಿರಲಿ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದು ನಮಗೆ ಚೆನ್ನಾಗಿ ಗೊತ್ತು. ಆದರೆ, ನಿಮ್ಮ ವಯಸ್ಸು ಮತ್ತು ಆರೋಗ್ಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವಕಾಶ ನೀಡಲಾಗುತ್ತಿದೆ. ಪ್ರಕರಣದಲ್ಲಿ ಮುಂದುವರಿಯುವ ಮೊದಲು ಕಾನೂನು ಸಲಹೆ ಪಡೆದುಕೊಳ್ಳಿ ಎಂದು ನ್ಯಾಯಪೀಠ ಹೇಳಿತು.

ಇದಕ್ಕೆ ಒಪ್ಪಿದ ಶ್ರೀನಿವಾಸ ರಾವ್‌, ಕಾನೂನು ಸಲಹೆ ಪಡೆದುಕೊಳ್ಳುವುದಾಗಿ ನ್ಯಾಯಪೀಠಕ್ಕೆ ತಿಳಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಮುಂದಿನ ವಿಚಾರಣೆ ದಿನಾಂಕದಂದು ಆಕ್ಷೇಪಣೆ ಹೇಳಿಕೆ ಬಗ್ಗೆ ಆರೋಪಿಯ ನಿಲುವು ಆಧರಿಸಿ ತೀರ್ಮಾನಿಸಲಾಗುವುದು. ಒಂದೊಮ್ಮೆ ಆಕ್ಷೇಪಣೆ ಸಮರ್ಥಿಸಿಕೊಂಡು ಪ್ರಕರಣದಲ್ಲಿ ಮುಂದುವರಿಯಲು ಬಯಸಿದರೆ, ಅವರ ವಿರುದ್ಧ ಆರೋಪಗಳನ್ನು ನಿಗದಿಪಡಿಸಲಾಗುವುದು ಎಂದು ಹೇಳಿದ ನ್ಯಾಯಪೀಠ, ವಿಚಾರಣೆಯನ್ನು ಮಾ.27ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next