Advertisement

72 ದೇಸಿ ತಳಿ ರಾಗಿ ಸಂರಕ್ಷಣೆ-ಸಂವರ್ಧನೆ

05:57 PM Nov 09, 2021 | Team Udayavani |

ಹುಬ್ಬಳ್ಳಿ: ಹೈಬ್ರಿಡ್‌ ಅಬ್ಬರಕ್ಕೆ ಸಿಲುಕಿ ದೇಸಿ ತಳಿಗಳು ಕಣ್ಮರೆಯಾಗುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಅನೇಕ ಯತ್ನಗಳು ನಡೆಯುತ್ತಿದ್ದು, ಇದರ ಭಾಗವಾಗಿಯೇ ಕುಂದಗೋಳ ತಾಲೂಕಿನ ಮತ್ತಿಗಟ್ಟಿಯ ರೈತರೊಬ್ಬರು ಸುಮಾರು 72 ದೇಸಿ ತಳಿ ರಾಗಿ ಸಂರಕ್ಷಿಸುವ ಪ್ರಯೋಗ
ಕೈಗೊಂಡಿದ್ದು, ದೇಸಿ ತಳಿ ರಾಗಿಯನ್ನು ಇತರೆ ರೈತರಿಗೆ ಪಸರಿಸಲು, ಯಾವ ತಳಿ ಯಾವುದಕ್ಕೆ ಮಹತ್ವ ಎಂಬುದರ ಮಾಹಿತಿ ನೀಡಲು ಮುಂದಾಗಿದ್ದಾರೆ.

Advertisement

ಸಿರಿಧಾನ್ಯಗಳನ್ನು ಸಂರಕ್ಷಿಸುವ, ಉತ್ತೇಜಿಸುವ ಕಾರ್ಯ ಸರಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳು, ವಿವಿಧ ಸಂಸ್ಥೆಗಳಿಂದ ನಡೆಯುತ್ತಿದೆ. ಸಿರಿಧಾನ್ಯಗಳಲ್ಲಿ ಒಂದಾದ ರಾಗಿಯ ದೇಸಿ ತಳಿಗಳ ಸಂರಕ್ಷಣೆ ಹಾಗೂ ಸಂವರ್ಧನೆ ಕಾರ್ಯ ನಡೆಯುತ್ತಿದೆ. ವಿವಿಧ ಭಾಗಗಳಲ್ಲಿ ಅಷ್ಟು ಇಷ್ಟು ಉಳಿದಿರುವ ವಿವಿಧ ದೇಸಿ ತಳಿ ರಾಗಿ ಸಂಗ್ರಹಿಸಿ ಅವುಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹಿಸುವ, ಒಂದೇ ಕಡೆ ವಿವಿಧ ತಳಿಗಳ ಪ್ರಾಯೋಗಿಕ ಬಿತ್ತನೆ ಕಾರ್ಯ ಕೈಗೊಳ್ಳಲಾಗುತ್ತಿದೆ.

ಹೈದರಾಬಾದ್‌ನ ಭಾರತೀಯ ಸಿರಿಧಾನ್ಯಗಳ ಸಂಶೋಧನಾ ಸಂಸ್ಥೆ (ಐಐಎಂಆರ್‌), ಆರ್‌.ಆರ್‌.ಎ.ನೆಟ್‌ವರ್ಕ್ಸ್ ಹಾಗೂ ಸಹಜ ಸಮೃದ್ಧ ಸಂಸ್ಥೆ ಮಹತ್ವದ ಕಾರ್ಯಕ್ಕೆ ಮುಂದಡಿ ಇರಿಸಿವೆ.

20 ಗುಂಟೆಯಲ್ಲಿ 72 ತಳಿ: ಮತ್ತಿಗಟ್ಟಿಯ ಈಶ್ವರಗೌಡ ಬಸನಗೌಡ ಪಾಟೀಲರು ದೇಸಿ ತಳಿ ರಾಗಿ ಬೆಳೆಯಲು ಮುಂದಾಗಿದ್ದರು. ಐಐಎಂಆರ್‌ ಹಾಗೂ ಸಹಜ ಸಮೃದ್ಧ ಸಂಸ್ಥೆಯವರು ದೇಸಿ ರಾಗಿ ಬೀಜ ನೀಡಿದ್ದರು. ಪಾಟೀಲರ ಸುಮಾರು 20 ಗುಂಟೆ ಜಾಗದಲ್ಲಿ ಒಟ್ಟು 80 ತಳಿ ದೇಸಿ ರಾಗಿ ಬಿತ್ತನೆ ಮಾಡಲಾಗಿತ್ತು. ಅದರಲ್ಲಿ ಸುಮಾರು 8 ತಳಿಗಳು ಹೆಚ್ಚಿನ ಫಲಿತಾಂಶ ನೀಡಿಲ್ಲವಾಗಿದ್ದು, ಸಾವಯವ ಪದ್ಧತಿಯಲ್ಲಿ ಬೆಳೆದ 72 ತಳಿಗಳು ಸಮೃದ್ಧವಾಗಿ ಬೆಳೆದು ನಿಂತಿವೆ.

ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆಯವರು ಸುಮಾರು 35 ದೇಸಿ ತಳಿ ಬೀಜ ನೀಡಿದ್ದರೆ, ಸಹಜ ಸಮೃದ್ಧದವರು ಮೈಸೂರು ಭಾಗದ ರೈತರು ಸೇರಿದಂತೆ ವಿವಿಧ ಕಡೆಯಿಂದ ಸಂಗ್ರಹಿಸಿದ ಸುಮಾರು 37 ತಳಿ ದೇಸಿ ರಾಗಿ ಬೀಜಗಳು ಇದೀಗ ಕೊಯ್ಲಿಗೆ ಬಂದಿವೆ. ಮುದ್ದೆ ರಾಗಿ, ಉಂಡೆ ರಾಗಿ, ದೊಡ್ಡ ರಾಗಿ, ಜಗಳೂರು ರಾಗಿ ಸೇರಿದಂತೆ 72 ದೇಸಿ ತಳಿ ರಾಗಿ ರೈತರನ್ನು ಆಕರ್ಷಿಸುತ್ತಿವೆ.

Advertisement

20 ಗುಂಟೆ ಜಾಗದಲ್ಲಿ 72 ದೇಸಿ ತಳಿ ರಾಗಿಯನ್ನು ನಾಟಿ ಮಾಡಲಾಗಿದೆ. ಜುಲೈ ಮೊದಲ ವಾರದಲ್ಲಿ ಮಡಿಗಳಲ್ಲಿ ರಾಗಿ ಬೀಜಗಳನ್ನು ಪ್ರತ್ಯೇಕವಾಗಿ ಬಿತ್ತನೆ ಮಾಡಲಾಗಿತ್ತು. ನಂತರ ಸಸಿ ಬಂದ ನಂತರ ಅವುಗಳನ್ನು ತೆಗೆದು ಪ್ರತ್ಯೇಕ ಮಡಿಗಳಲ್ಲಿ ನಾಟಿ ಮಾಡಲಾಗಿದೆ. ಒಂದು ತಳಿ ಸುಮಾರು 150-250 ಸಸಿಗಳವರೆಗ ನಾಟಿ ಮಾಡಲಾಗಿದೆ. ಐದಾರು ತಳಿಗಳು ಮಾತ್ರ 40-45 ಸಸಿಗಳು ನಾಟಿಯಾಗಿವೆ.

ಬ್ಯಾಡಗಿ ಸುತ್ತಮುತ್ತ ಹೆಚ್ಚಿನ ರೀತಿಯಲ್ಲಿ ಬೆಳೆಯುವ ಉಂಡೆ ರಾಗಿ ಎಕರೆಗೆ ಸುಮಾರು 15 ಕ್ವಿಂಟಲ್‌ ಫಸಲು ಬಂದರೆ, ಉತ್ತಮ ಮೇವು ನೀಡುತ್ತದೆ. ಉಳಿದವುಗಳು ಎಕರೆಗೆ 10-12 ಕ್ವಿಂಟಲ್‌ ಬರುತ್ತವೆ. ನಾಟಿ ಮಾಡಿದರೆ ಫಸಲು ಹೆಚ್ಚು ಬಂದರೆ, ಬಿತ್ತನೆ ಮಾಡಿದರೆ ತುಸು ಕಡಿಮೆ ಬರುತ್ತವೆ.

ದೇಸಿ ತಳಿ ರಾಗಿ ಬಿತ್ತನೆ ಹಾಗೂ ಬೆಳೆಗೆ ಐಐಎಂಆರ್‌ ಹಾಗೂ ಸಹಜ ಸಮೃದ್ಧ ಸಂಸ್ಥೆಯವರ ನಿರಂತರ ಮಾರ್ಗದರ್ಶನ, ಉಸ್ತುವಾರಿ ಇತ್ತು. ಇದೀಗ ರಾಗಿ ಬೆಳೆ ಕೊಯ್ಲಿಗೆ ಬಂದಿದೆ. ಕೆಲವೊಂದು ರಾಗಿ ಬೆಳೆ ಇನ್ನು 8-10 ದಿನಗಳಲ್ಲಿ ಕೊಯ್ಲು ಮಾಡಬಹುದಾಗಿದೆ. ಒಟ್ಟಾರೆ 8-30 ದಿನದೊಳಗೆ ಎಲ್ಲ 72 ತಳಿ ದೇಸಿ ರಾಗಿ ಬೆಳೆ ಕೊಯ್ಲು ಆಗಲಿದೆ.

ರೈತರಿಂದಲೇ ತಳಿ ಆಯ್ಕೆ: ಮತ್ತಿಗಟ್ಟಿಯಲ್ಲಿ 20 ಗುಂಟೆಯಲ್ಲಿ ಕೈಗೊಂಡ 72 ದೇಸಿ ತಳಿ ರಾಗಿಯ ಕ್ಷೇತ್ರೋತ್ಸವ ಮಂಗಳವಾರ ನಡೆಯಲಿದ್ದು, ತಳಿಗಳ ಆಯ್ಕೆಯನ್ನು ರೈತರು ಹಾಗೂ ರೈತ ಮಹಿಳೆಯರಿಂದಲೇ ಕೈಗೊಳ್ಳಲಾಗುತ್ತದೆ. ರೈತರು ಹಾಗೂ ರೈತ ಮಹಿಳೆಯರಿಗೆ ಪ್ರತ್ಯೇಕ ಬಣ್ಣದ ಐದು ರಿಬ್ಬನ್‌ ನೀಡಲಾಗುತ್ತದೆ. ರೈತರು ರಾಗಿ ಫಸಲು, ತೆನೆ, ಬೆಳೆ ಎತ್ತರ, ಮೇವಿನ ಪ್ರಮಾಣ ಇನ್ನಿತರೆ ತಮ್ಮ ಅನುಭವ ಆಧಾರದಲ್ಲಿ ಐದು ತಳಿಗಳನ್ನು ಆಯ್ಕೆ ಮಾಡುತ್ತಾರೆ. ಯಾವ ತಳಿಗೆ ಹೆಚ್ಚು ರಿಬ್ಬನ್‌ಗಳನ್ನು ಕಟ್ಟಲಾಗುತ್ತದೆಯೋ ಆ ತಳಿಯ ಬೀಜಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವ, ಅದೇ ತಳಿಯನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಬೀಜೋತ್ಪಾದನೆಗೆ ಮುಂದಾಗುವ ಕಾರ್ಯ ಕೈಗೊಳ್ಳಲಾಗುತ್ತದೆ.

ಹನುಮನಹಳ್ಳಿ, ಮತ್ತಿಗಟ್ಟಿ ಸೇರಿದಂತೆ ಸುಮಾರು 10-15 ಗ್ರಾಮಗಳಲ್ಲಿ ಅಂದಾಜು 300-400 ಎಕರೆ ಪ್ರದೇಶದಲ್ಲಿ ರಾಗಿ ಬೆಳೆಯಲಾಗುತ್ತದೆ. ಅನೇಕರು ಕೆಲ ಸಾಂಪ್ರದಾಯಿಕ ರಾಗಿ ಬಿತ್ತನೆ ಮಾಡುತ್ತಿದ್ದು, ಇಳುವರಿಯಲ್ಲಿ ಹೆಚ್ಚಳ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಳ ನಿಟ್ಟಿನಲ್ಲಿ ಹೊಸ ತಳಿ ನೀಡಿಕೆ ಜತೆಗೆ ದೇಸಿ ತಳಿ ಸಂರಕ್ಷಣೆಗೆ ಐಐಎಂಆರ್‌, ಸಹಜ ಸಮೃದ್ಧ ಮುಂದಾಗಿದೆ.

ರೈತರಲ್ಲಿ ದೇಸಿ ರಾಗಿ ಬಗ್ಗೆ ತಿಳಿವಳಿಕೆ ಹಾಗೂ 20 ಗುಂಟೆಯಲ್ಲಿ 72 ದೇಸಿ ತಳಿ ರಾಗಿ ಬಿತ್ತನೆಯಿಂದ ಹಿಡಿದು ಬೆಳೆ ಬರುವವರೆಗೆ ಅಗತ್ಯ ಮಾರ್ಗದರ್ಶನ, ಉಸ್ತುವಾರಿ ಕಾರ್ಯವನ್ನು ಸಹಜ ಸಮೃದ್ಧ ಸಂಸ್ಥೆ ಕ್ಷೇತ್ರ ಸಂಯೋಜಕ ಮೃತ್ಯುಂಜಯ ರಾಮಜಿ, ಮೆಹಬೂಬ ಹುಲಗೂರು ಕೈಗೊಂಡಿದ್ದು, ಇದೀಗ ಈಶ್ವರಗೌಡ ಪಾಟೀಲ ಹೊಲದಲ್ಲಿ ಪ್ರಯೋಗಾತ್ಮಕವಾಗಿ ಬೆಳೆದು ನಿಂತ 72 ದೇಸಿ ತಳಿ ರಾಗಿ, ವಿವಿಧ ರೈತರ ಹೊಲ ಸೇರಲು, ತಮ್ಮ ವಂಶ ವೃದ್ಧಿಸಿಕೊಳ್ಳಲು ಸಜ್ಜಾಗಿವೆ.

ದೇಸಿ ತಳಿ ಸಂರಕ್ಷಣೆ
ನನ್ನ ಜಮೀನಿನಲ್ಲಿ 72 ತಳಿ ರಾಗಿ ಬಿತ್ತನೆ ಮಾಡಲಾಗಿದ್ದು, ಬೆಳೆ ಕೊಯ್ಲಿಗೆ ಬಂದಿದೆ. ಐಐಎಂಆರ್‌ ಹಾಗೂ ಸಹಜ ಸಮೃದ್ಧ ಸಹಕಾರದೊಂದಿಗೆ ದೇಸಿ ತಳಿಗಳನ್ನು ಉಳಿಸಿದ ತೃಪ್ತಿ ತಂದಿದೆ. ರೈತರು ಪ್ರತ್ಯಕ್ಷವಾಗಿ 72 ದೇಸಿ ತಳಿ ರಾಗಿ ನೋಡಬಹುದಾಗಿದೆ. ಮಾಹಿತಿ ಪಡೆಯಬಹುದಾಗಿದೆ. ಒಂದು ಎಕರೆ ರಾಗಿ ಬೆಳೆಯಲು ಸುಮಾರು 10-12 ಸಾವಿರ ರೂ.ವೆಚ್ಚ ಬರಲಿದ್ದು, ಎಕರೆಗೆ 10-15 ಕ್ವಿಂಟಲ್‌ ರಾಗಿ ಬರುತ್ತಿದ್ದು, ಉತ್ತಮ ಆದಾಯ ತಂದು ಕೊಡಲಿದೆ. ನನ್ನ ಜಮೀನಿನಲ್ಲಿ ಬೆಳೆ ರಾಗಿಯನ್ನು ಸಹಜ ಸಮೃದ್ಧದವರು ಖರೀದಿಸಿ, ರೈತರಿಗೆ ನೀಡಲಿದ್ದಾರೆ. ಈ ಹಿಂದೆ 24 ದೇಸಿ ತಳಿ ರಾಗಿ ಬಿತ್ತನೆ ಮಾಡಿದ್ದೆ. ಇದೀಗ 72 ತಳಿ ಬಿತ್ತನೆ ಮಾಡಿದ್ದು, ರಾಜ್ಯದಲ್ಲಿಯೇ ಇದು ಮೊದಲ ಎನ್ನಬಹುದಾಗಿದೆ.
ಈಶ್ವರಗೌಡ ಬಸನಗೌಡ ಪಾಟೀಲ,
ಮತ್ತಿಗಟ್ಟಿ ರೈತ

ವೈವಿಧ್ಯಮಯ ತಳಿ
ಮತ್ತಿಗಟ್ಟಿಯ ರೈತ ಈಶ್ವರಗೌಡ ಪಾಟೀಲರ ಹೊಲದಲ್ಲಿ ಬೆಳೆಯಲಾದ 72 ದೇಸಿ ತಳಿ ರಾಗಿ ವೈವಿಧ್ಯಮಯವಾಗಿವೆ. ಸಾವ¿ವ ಪದ್ಧತಿಯಲ್ಲಿ ಬೆಳೆಯಲಾಗಿದ್ದು, ಕೊಟ್ಟಿಗೆ ಗೊಬ್ಬರ ಹಾಕಲಾಗಿದೆ. ಜೀವಾಮೃತ ಸಿಂಪರಿಸಲಾಗಿತ್ತು. ಕೆಲವೊಂದು ತಳಿಗೆ ರೋಗ ಕಾಣಿಸಿಕೊಂಡಿತ್ತಾದರೂ ಮಜ್ಜಿಗೆ ಸಿಂಪರಣೆಯೊಂದಿಗೆ ರೋಗ ನಿಯಂತ್ರಿಸಲಾಯಿತು. ಈ ಪ್ರಯೋಗದಿಂದ ತಿಳಿದಿದ್ದು, 72 ತಳಿಗಳಲ್ಲಿ ಬಹುತೇಕ ತಳಿಗಳು ರೋಗ ನಿರೋಧಕ ಶಕ್ತಿ ಹೊಂದಿವೆ. ಇದರಲ್ಲಿ ಉತ್ತಮ ಫಸಲು ಬರುವ, ಹೆಚ್ಚಿನ ಮೇವು ಒದಗಿಸುವ, ಎತ್ತರ ಬೆಳೆಯುವ ಹೀಗೆ ವೈವಿಧ್ಯತೆ ಹೊಂದಿದ್ದು, ರೈತರು ತಮಗೆ ಯಾವ ತಳಿ ಬೇಕು ಎಂಬುದನ್ನು ಪ್ರತ್ಯಕ್ಷವಾಗಿ ನೋಡಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ನಿಶಾಂತ ಬಂಕಾಪುರ,
ಸಂಶೋಧನಾ ಸಂಯೋಜಕ

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next