Advertisement

ವಿಮಾನ ನಿಲ್ದಾಣದಲ್ಲಿ 7,095 ಗಿಡಮರಗಳ ಸ್ಥಳಾಂತರ

01:17 AM Jun 06, 2019 | Lakshmi GovindaRaj |

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಟರ್ಮಿನಲ್‌ -2) ರಸ್ತೆ ವಿಸ್ತರಣೆ, ಮೂಲಸೌಕರ್ಯ ಅಭಿವೃದ್ಧಿ ಹಿನ್ನೆಲೆ ನಿಲ್ದಾಣದ ಆವರಣದ 7,095 ಗಿಡ-ಮರಗಳ ಸ್ಥಳಾಂತರ ಹಾಗೂ ನಿಲ್ದಾಣ ಸೌಂದರ್ಯ ಹೆಚ್ಚಿಸಲು ಹೊಸದಾಗಿ ಸಾವಿರ ಗಿಡಗಳ ನಾಟಿ ಕಾರ್ಯಕ್ಕೆ ಬಿಐಎಎಲ್‌ (ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ) ಮುಂದಾಗಿದೆ.

Advertisement

ಸದ್ಯ ವಿಮಾನ ನಿಲ್ದಾಣದಿಂದ ವಾರ್ಷಿಕ 3 ಕೋಟಿಗೂ ಹೆಚ್ಚು ಮಂದಿ ಸಂಚರಿಸುತ್ತಿದ್ದು, ಅದರ ಸಂಖ್ಯೆ 2028ರ ಹೊತ್ತಿಗೆ 8 ಕೋಟಿಗೆ ಏರಿಕೆಯಾಗಿಲಿದೆ ಎಂದು ಅಂದಾಜಿಸಿರುವ ಬಿಐಎಎಲ್‌ ನಿಲ್ದಾಣದ ದಟ್ಟಣೆ ಕುಗ್ಗಿಸಲು ಮೊದಲ ಟರ್ಮಿನಲ್‌ ಪಕ್ಕದಲ್ಲಿ 2ನೇ ಟರ್ಮಿನಲ್‌ ನಿರ್ಮಿಸುತ್ತಿದೆ. ಈ ಎರಡನೇ ಟರ್ಮಿನಲ್‌ ಕಾಮಗಾರಿ ಹಾಗೂ ವಿಮಾನ ನಿಲ್ದಾಣದ ಮೂಲಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ 13,000 ಕೋಟಿ ರೂ. ವೆಚ್ಚದ ಯೋಜನೆ ಕೈಗೊಂಡಿದೆ.

ಈ ಯೋಜನೆಯಡಿ ಸದ್ಯ ದ್ವಿಪಥವಾಗಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಹಾಗೂ ನಿರ್ಗಮಿಸುವ ರಸ್ತೆ ಮುಂದಿನ 18 ತಿಂಗಳಲ್ಲಿ ಐದು ಪಥವಾಗಿ ವಿಸ್ತರಣೆ ಮಾಡಲಾಗುತ್ತಿದೆ. ಇನ್ನು ಈ ರಸ್ತೆಗಳ ಮಧ್ಯದಲ್ಲಿ ಮುಂದಿನ ದಿನಗಳಲ್ಲಿ ಮೆಟ್ರೊ ಕಾರಿಡಾರ್‌ ಕೂಡಾ ಬರುತ್ತಿದೆ. ರಸ್ತೆ ಹಾಗೂ ಮೆಟ್ರೊ ಕಾಮಗಾರಿ ನಡೆಯುವ ಭಾಗದಲ್ಲಿ ಈಗಾಗಲೇ ಸಾಕಷ್ಟು ಮರ ಗಿಡಗಳಿದ್ದು, ಅವುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಐಎಎಲ್‌ ನಿಲ್ದಾಣದ ಆವರಣದಲ್ಲಿಕ್ಕೆ ಆ ಗಿಡ-ಮರಗಳ ಸ್ಥಳಾಂತರ ಮಾಡುತ್ತಿದೆ.

ಈ ಕುರಿತು ಮಾಹಿತಿ ನೀಡಿದ ಬಿಐಎಎಲ್‌ ಭೂದೃಶ್ಯ ವಿಭಾಗದ ಮುಖ್ಯಸ್ಥ ಪ್ರಸನ್ನ ಮೂರ್ತಿ, ಗಿಡ-ಮರಗಳ ಸ್ಥಳಾಂತರ ಕಾರ್ಯ ಸಂಪೂರ್ಣ ವೈಜ್ಞಾನಿಕವಾಗಿ ಕೈಗೊಳ್ಳುತ್ತಿದ್ದು, ಇದಕ್ಕಾಗಿ ಮರ ವಿಜ್ಞಾನ ಇಲಾಖೆ ಹಾಗೂ ವೋಲ್ವೊ ಸಂಸ್ಥೆ ಸಹಕಾರ ಪಡೆಯಲಾಗಿದೆ. ಮೊದಲ ಹಂತದಲ್ಲಿ 1,285 ಮರಗಳನ್ನು ಸ್ಥಳಾಂತರಿಸುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ ಸುಮಾರು 5,000 ಗಿಡ-ಮರಗಳನ್ನು ಸ್ಥಳಾಂತರಿಸಲಾಗುವುದು.

ಇನ್ನು ಎಲ್ಲಾ ಗಿಡ ಮರಗಳನ್ನು ನಿಲ್ದಾಣದ ಅವರಣದಲ್ಲಿಯೇ ಮತ್ತೂಂದೆಡೆಗೆ ಸ್ಥಳಾಂತರಗೊಳಿಸಲಾಗುತ್ತಿದೆ. ಕಳೆದ ಎರಡು ತಿಂಗಳಿಂದ ಸ್ಥಳಾಂತರಿಸಿದ 200ಕ್ಕೂ ಹೆಚ್ಚು ಮರಗಳನ್ನು ಪೈಕಿ ಶೇ.95ರಷ್ಟು ಮರಗಳು ಆರೋಗ್ಯವಾಗಿವೆ. ಇನ್ನು ಸ್ಥಳಾಂತರ ನಂತರ ಸೂಕ್ತ ಆರೈಕೆ ಮತ್ತು ಸಂರಕ್ಷಣೆಯ ಅಗತ್ಯವೂ ಇರುತ್ತದೆ ಎಂದು ತಿಳಿಸಿದರು.

Advertisement

ಗಿಡ-ಮರಗಳನ್ನು ಸಂಪ್ರದಾಯ ಪದ್ಧತಿ ಹಾಗೂ ಆಧುನಿಕ ಪದ್ಧತಿಯಲ್ಲಿ ಸ್ಥಳಾಂತರ ಮಾಡಬಹುದು. ಸಂಪ್ರದಾಯಿಕ ಪದ್ಧತಿಗೆ ಸಾಕಷ್ಟು ಮಂದಿ ಕಾರ್ಮಿಕ ನೆರವು, ಹೆಚ್ಚು ಸಮಯ ಅವಶ್ಯಕ. ಆದರೆ, ಆಧುನಿಕ ಪದ್ಧತಿಯಲ್ಲಿ ವೋಲ್ವೊ ಟ್ರಕ್‌ ಸಹಾಯದಿಂದ ಎರಡು ಗಂಟೆಯಲ್ಲಿ ಒಂದು ಮರವನ್ನು ಸ್ಥಳಾಂತರ ಮಾಡಬಹುದು ಎಂದು ತಿಳಿಸಿದರು.

ಮರಗಳ ಸ್ಥಳಾಂತರ ಹೇಗೆ?: ಆಧುನಿಕ ಪದ್ಧತಿಯಲ್ಲಿ ಮೊದಲು ಮರ ಸ್ಥಳಾಂತರಕ್ಕೆ ಯೋಗ್ಯವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಆನಂತರ ವೋಲ್ವೊ ಸಂಸ್ಥೆ ಸಿದ್ಧಪಡೆಸಿರುವ ಟ್ರಕ್‌ನಲ್ಲಿ ಮರ ಸ್ಥಳಾಂತರಿಸಲು ನಿಗದಿ ಪಡಿಸಿರುವ ಜಾಗದಲ್ಲಿ ಮಣ್ಣು ತೆಗೆದು ಗುಣಿ ಮಾಡಿ ಮಣ್ಣಲ್ಲಿರುವಂತಹ ಬ್ಯಾಕ್ಟೀರಿಯಾ, ಫ‌ಂಗಸ್‌ಗಳಿಂದ ರಕ್ಷಣೆಗೆ ರಾಸಾಯನಿಕ ಸಿಂಪಡಿಸಿ ನೀರುಣಿಸಿ ಸಿದ್ಧಪಡೆಸಲಾಗಿರುತ್ತದೆ.

ಆ ಬಳಿಕ ಸ್ಥಳಾಂತರಗೊಳ್ಳಬೇಕಾದ ಮರದ ಅತಿಯಾಗಿ ಬೆಳದೆ ರಂಬೆ ಕಡಿದು ಟ್ರಕ್‌ ಸಹಾಯದಿಂದ ಮರವನ್ನು ಬೇರು ಸಮೇತ ಬೇರುಗಳಿಗೆ ಹಾನಿಯಾಗದಂತೆ ಹೊರತೆಗೆದುಕೊಂಡು ಬಂದು ಗುಣಿ ಮಾಡಿರುವ ಜಾಗಕ್ಕೆ ಊಳಲಾಗುತ್ತದೆ. ಈ ರೀತಿ ದಿನಕ್ಕೆ 17 ಮರಗಳನ್ನು ಸ್ಥಳಾಂತಿಸಲಾಗುತ್ತದೆ ಎಂದು ಅವರು ಪ್ರಸನ್ನ ಮೂರ್ತಿ ಮಾಹಿತಿ ನೀಡಿದರು.

ಬಿಐಎಎಲ್‌ನ ಮುಖ್ಯ ಯೋಜನಾಧಿಕಾರಿ ಟಾಮ್‌ ಶಿಮಿನ್‌ ಮಾತನಾಡಿ, ಉದ್ಯಾನ ನಗರಿ ವರ್ಚಸ್ಸನ್ನು ವಿಮಾನ ನಿಲ್ದಾಣದಲ್ಲಿ ಬಿಂಬಿಸಲು ಬಿಐಎಎಲ್‌ ಪ್ರಯತ್ನಿಸಿದೆ. 2ನೇ ಟರ್ಮಿನಲ್‌ನ ಬಹುತೇಕ ಪ್ರದೇಶವನ್ನು ಹಸಿರಾಗಿಸಲಾಗುತ್ತಿದ್ದು, ಮುಖ್ಯವಾಗಿ ಅಲ್ಲಿನ ನೂತನ ರನ್‌ವೇ ಸುತ್ತಮುತ್ತಲ ಪ್ರದೇಶವನ್ನು ಹಚ್ಚ ಹಸಿರಾಗಿರುವಂತೆ ಮಾಡಲಾಗುತ್ತಿದ್ದು,

ಇದಕ್ಕಾಗಿ ಮರಗಳ ಸ್ಥಳಾಂತರ ಹಾಗೂ ಹೊಸ ಸಾವಿರಾರು ಗಿಡಗಳ ನಾಟಿ ಮಾಡಲಾಗುತ್ತಿದೆ. ಇನ್ನು ರನ್‌ವೇ ಸುತ್ತಲೂ ಹಸಿರಿನ ಕಾರಿಡಾರ್‌ಗಳನ್ನು ಹೊಂದಿರುವ ಭಾರತದ ಪ್ರಥಮ ಮತ್ತು ಜಗತ್ತಿನ 3ನೇ ಮಾನ ನಿಲ್ದಾಣ ಎಂಬ ಗೌರವವನ್ನು ಬೆಂಗಳೂರು ವಿಮಾನ ನಿಲ್ದಾಣ ಪಡೆಯಲಿದೆ ಎಂದರು. ಈ ವೇಳೆ ಮರ ವಿಜ್ಞಾನ ಸಂಸ್ಥೆಯ ನಿರ್ದೇಶಕ ಮೋಹನ್‌ ಕಾರ್ನಾಡ್‌ ಉಪಸ್ಥಿತರಿದ್ದರು.

ಎರಡನೇ ಟರ್ಮಿನಲ್‌ನಲ್ಲಿ ಉದ್ಯಾನಕ್ಕೆ ಆದ್ಯತೆ: 2ನೇ ಟನಿರ್ಮಿನಲ್‌ ಮರಗಳು, ಸಣ್ಣ ಉದ್ಯಾನವನಗಳು ಮತ್ತು ಸರೋವರಗಳು ಇಲ್ಲಿರಲಿದ್ದು, ಒಳಾಂಗಣದಲ್ಲೂ ದೇಶಿ ಪ್ರಬೇಧಗಳ ಸಸ್ಯಗಳನ್ನು ನಾಟಿ ಮಾಡಲಾಗುತ್ತಿದೆ. ನಿಲ್ದಾಣದ ಭದ್ರತಾ ಪ್ರದೇಶದ ಆಗಮನ ಹಾಗೂ ನಿರ್ಗಮನ ಸ್ಥಳದಲ್ಲಿ ಹೂವುಗಳ ಸರಪಳಿ ಹೊಂದಿರುವ ಬೆಲ್‌ ಸಸ್ಯಗಳು, ಮೇಲಿನ ಸೂರಿಗೆ ಬಿದಿರಿನ ಬೊಂಬಿನಲ್ಲಿ ಅಂತಿಮ ರೂಪ ನೀಡಲಾಗುತ್ತಿದೆ. ಇನ್ನು ನಿಲ್ದಾಣದಲ್ಲಿ ಬೃಹತ್‌ ಒಳಾಂಗಣದ ಉದ್ಯಾನಗಳು ಇರಲಿದ್ದು, ಇವೆಲ್ಲ ಪ್ರಯಾಣಿಕರಿಗೆ ಅತ್ಯುತ್ತಮ ವಾತಾವರಣ ಕಲ್ಪಿಸಿಕೊಡಲಿವೆ ಎಂದು ಬಿಐಎಎಲ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next