Advertisement

Maharashtra ಚುನಾವಣೆಗೆ ಕರ್ನಾಟಕದ 700 ಕೋ.ರೂ. ಲೂಟಿ: ಮೋದಿ ಹೇಳಿದ್ದೇನು?

12:45 AM Nov 10, 2024 | Team Udayavani |

ಮುಂಬಯಿ: ಮಹಾರಾಷ್ಟ್ರ ಚುನಾ ವಣೆಯನ್ನು ಗೆಲ್ಲುವುದಕ್ಕಾಗಿ ಕರ್ನಾಟಕದ ಮದ್ಯ ಉದ್ಯಮದಿಂದ 700 ಕೋಟಿ ರೂ.ಗಳನ್ನು ಕಾಂಗ್ರೆಸ್‌ ಪಕ್ಷವು ಲೂಟಿ ಹೊಡೆದು ಬಳಸುತ್ತಿದೆ ಎಂದು ಪ್ರಧಾನಿ ಮೋದಿ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಕಾಂಗ್ರೆಸ್‌ ಸರಕಾರವಿರುವ ರಾಜ್ಯಗಳೆಲ್ಲವೂ “ಶಾಹಿ ಪರಿವಾರ’ (ಗಾಂಧಿ ಕುಟುಂಬ)ಕ್ಕೆ ಎಟಿಎಂ ಆಗಿಬಿಟ್ಟಿವೆ ಎಂದು ಕಿಡಿಕಾರಿದ್ದಾರೆ.

Advertisement

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆ ಯಲ್ಲಿ ಅಕೋಲಾದಲ್ಲಿ ಪ್ರಧಾನಿ ಚುನಾವಣ ರ್ಯಾಲಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿ, ಕಾಂಗ್ರೆಸ್‌ ತನ್ನನ್ನು ಬಲಪಡಿಸಿ ಕೊಳ್ಳುವುದಕ್ಕಾಗಿ ದೇಶವನ್ನೇ ದುರ್ಬಲ ಗೊಳಿಸಲು ಹಿಂಜರಿಯುವುದಿಲ್ಲ. ಎಲ್ಲೆಲ್ಲಿ ಕಾಂಗ್ರೆಸ್‌ ಸರಕಾರವಿದೆಯೋ ಆ ರಾಜ್ಯಗಳೆಲ್ಲ “ಶಾಹಿ ಪರಿವಾರ’ಕ್ಕೆ ಎಟಿಎಂ ಆಗಿವೆ. ಕರ್ನಾಟಕ ದಿಂದ 700 ಕೋಟಿ ರೂ. ತಂದು ಇಲ್ಲಿನ ಚುನಾವಣೆಗೆ ಬಳಸಲಾಗುತ್ತಿದೆ. ತೆಲಂಗಾಣ, ಹಿಮಾಚಲ ಪ್ರದೇಶಗಳೂ ಶಾಹಿ ಪರಿವಾರದ ಎಟಿಎಂ ಆಗಿಬಿಟ್ಟಿವೆ. ಆದರೆ ಮಹಾರಾಷ್ಟ್ರವನ್ನು ಈ ಪರಿವಾರದ ಎಟಿಎಂ ಆಗಲು ನಾವು ಬಿಡುವುದಿಲ್ಲ ಎಂದಿದ್ದಾರೆ.

ಜತೆಗೆ ಚುನಾವಣೆ ಗೆಲ್ಲುವುದಕ್ಕಾಗಿ ಇಷ್ಟೊಂದು ಭ್ರಷ್ಟಾಚಾರ ನಡೆಸುವವರು ಗೆದ್ದರೆ ಇನ್ನೆಷ್ಟು ಭ್ರಷ್ಟಾಚಾರ ನಡೆಸುತ್ತಾರೆ ಎಂದು ಊಹಿಸಿನೋಡಿ ಎಂದು ಪ್ರಧಾನಿ ಜನತೆಯನ್ನು ಎಚ್ಚರಿಸಿದ್ದಾರೆ.

ಉದ್ಧವ್‌ಗೆ ಪಾಠ ಕಲಿಸಿ
ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿ ಕೂ ಟದ ಪರ ಘೋಷಣೆಗಳು ಮೊಳಗುತ್ತಿವೆ. ಈ ಬಾರಿ ಕಮಲವೇ ಅಧಿಕಾರಕ್ಕೇರುವ ಭರವಸೆಯೂ ನನಗಿದೆ. ಮಹಾರಾಷ್ಟ್ರ ದೇಶಭಕ್ತರ ರಾಜ್ಯ. ಇಲ್ಲಿ ರಾಜಕೀಯಕ್ಕಾಗಿ ದೇಶದ ಹಿತಾಸಕ್ತಿಗಳನ್ನು ಯಾರು ಮರೆಯುತ್ತಾರೋ, ಬಾಳಾ ಸಾಹೇಬ್‌ ಠಾಕ್ರೆ ಅವರ ಪರಂಪರೆಗೆ ಯಾರು ದ್ರೋಹ ಬಗೆಯುತ್ತಾರೋ ಅಂತವರಿಗೆ ಪಾಠ ಕಲಿಸಬೇಕಿದೆ ಎಂದು ಉದ್ಧವ್‌ ಠಾಕ್ರೆ ಅವರ ವಿರುದ್ಧ ಪ್ರಧಾನಿ ಪರೋಕ್ಷ ವಾಗ್ಧಾಳಿ ನಡೆಸಿದ್ದಾರೆ.

ಅಂಬೇಡ್ಕರ್‌ ಮೇಲೆ ಕಾಂಗ್ರೆಸ್‌ಗೆ ದ್ವೇಷ
ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನು ಕಾಂಗ್ರೆಸ್‌ ದ್ವೇಷಿಸುತ್ತದೆ. ಅಂಬೇಡ್ಕರ್‌ ದಲಿತರು ಹಾಗೂ ಸಂವಿಧಾನ ರಚಿಸಿದ ಕೀರ್ತಿ ಅವರಿಗೆ ಸಲ್ಲುತ್ತಿದೆ ಎಂಬುದಕ್ಕಾಗಿಯೇ ಕಾಂಗ್ರೆಸ್‌ ಅವರನ್ನು ದ್ವೇಷಿಸುತ್ತದೆ ಎಂದು ಪ್ರಧಾನಿ ಆರೋಪಿಸಿದ್ದಾರೆ. ಜತೆಗೆ, ಶಾಹಿ ಪರಿವಾರಕ್ಕೆ ನಾನು ಸವಾಲೆಸೆಯುತ್ತೇನೆ. ಅವರು ಎಂದಾದರೂ ಅಂಬೇಡ್ಕರ್‌ ಅವರ ಜನ್ಮಸ್ಥಳವಾದ ಪಂಚತೀರ್ಥಕ್ಕೆ ಹೋಗಿದ್ದಾರಾ? ಹೌದು ಎಂಬುದನ್ನು ನಿರೂಪಿಸಲಿ ನೋಡೋಣ ಎಂದು ಮೋದಿ ಸವಾ ಲೆ ಸೆ ದಿದ್ದಾರೆ. ಅಂಬೇಡ್ಕರ್‌ ಅವರ ಮೇಲೆ ತನಗೆ, ತನ್ನ ಸರಕಾರಕ್ಕೆ ಅಪಾರ ಗೌರವವಿದೆ. ಹಾಗಾಗಿಯೇ ಅಂಬೇಡ್ಕರ್‌ ನಂಟು ಹೊಂದಿರುವ ಎಲ್ಲ ಪ್ರದೇಶಗಳನ್ನೂ ನಾವು ಅಭಿವೃದ್ಧಿ ಪಡಿಸಿದ್ದೇವೆ. ಅಷ್ಟೇ ಯಾಕೆ, ಯುಪಿಐಗೂ ನಾವು ಭೀಮ್‌ ಯುಪಿಐ ಎಂದು ನಾಮಕರಣ ಮಾಡಿದ್ದೇವೆ ಎಂದಿದ್ದಾರೆ.

Advertisement

ಕಾಂಗ್ರೆಸ್‌ಗೆ ಜಾತಿ ಕಚ್ಚಾಟ ಬೇಕಿದೆ
ಎಸ್‌ಸಿ, ಎಸ್‌ಟಿ, ದಲಿತರು ಮತ್ತು ಆದಿವಾಸಿಗಳನ್ನೆಲ್ಲ ವಿಭಜಿಸಿ, ಅವರ ನಡುವಿನ ಒಗ್ಗಟ್ಟು ಮುರಿದು ಕಚ್ಚಾಟಕ್ಕೆ ದಬ್ಬುವುದೇ ಕಾಂಗ್ರೆಸ್‌ನ ಧ್ಯೇಯ. ಈ ಮೂಲಕ ತಾನು ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂಬುದು ಅದರ ಲೆಕ್ಕಾಚಾರ. ನೀವೆಲ್ಲ ಒಗ್ಗಟ್ಟಾಗಿದ್ದರಿಂದಲೇ ಕಾಂಗ್ರೆಸ್‌ ಬೆಂಬಲ ಕಳೆದುಕೊಂಡಿದೆ. ಮೇಲೆ ಕೆಂಪುಪಟ್ಟಿ ಸುತ್ತಿದ ಪುಸ್ತಕವನ್ನು ಕೈಯಲ್ಲಿ ಹಿಡಿದು ಸಂವಿಧಾನದ ಪ್ರತಿ ಎಂದು ಓಡಾಡುತ್ತಾರೆ. ಆದರೆ ಅದರ ಒಳಗಿನ ಹಾಳೆಗಳೆಲ್ಲವೂ ಖಾಲಿ. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸದೆ ಕಾಂಗ್ರೆಸ್‌ ಸಂವಿಧಾನಕ್ಕೆ ದ್ರೋಹ ಬಗೆದಿತ್ತು. ನಾವು ಆ ವಿಧಿಯನ್ನು ರದ್ದುಗೊಳಿಸಿದೆವು. ಅಲ್ಲಿ ಪ್ರಜಾಪ್ರಭತ್ವವನ್ನು ಗಟ್ಟಿಗೊಳಿಸಿದೆವು, ಅಲ್ಲಿನ ದಲಿತರು ಮೊದಲ ಬಾರಿಗೆ ತಮ್ಮ ಹಕ್ಕು ಪಡೆದರು. ಇದನ್ನು ಪಾಕಿಸ್ಥಾನ ಮತ್ತು ಕಾಂಗ್ರೆಸ್‌ ಎರಡೂ ಸಹಿಸುತ್ತಿಲ್ಲ. ಕಾಂಗ್ರೆಸ್‌ ಅಂಬೇಡ್ಕರ್‌ ಸಂವಿಧಾನದ ಬದಲು ತಮ್ಮದೇ ಸಂವಿಧಾನ ಬರೆಯಲು ಸಿದ್ಧವಾಗಿದೆ. ತುರ್ತು ಪರಿಸ್ಥಿತಿ ಮೂಲಕ ಇದರ ಮೊದಲ ಪ್ರಯತ್ನವಾಗಿತ್ತು. ಈಗ ಸಂವಿಧಾನದ ಖಾಲಿ ಪ್ರತಿ ಅದರ ಮುಂದಿನ ಪ್ರಯತ್ನ ಎಂದೂ ಪ್ರಧಾನಿ ಚಾಟಿ ಬೀಸಿದ್ದಾರೆ.

ಒಬಿಸಿಗಳನ್ನು ಕಂಡರಾಗದು
ಒಬಿಸಿ ಸಮುದಾಯದ ವ್ಯಕ್ತಿಯೊಬ್ಬ ದೇಶದ ಪ್ರಧಾನಿಯಾಗಿ 10 ವರ್ಷ ಆಡಳಿತ ನಡೆಸಿದ. ಆತ ಇನ್ನೂ ಅಧಿಕಾರದಲ್ಲಿ ಇದ್ದಾನೆ ಎಂಬುದನ್ನು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಅದು ಒಬಿಸಿ ಸಮುದಾಯವನ್ನೇ ದ್ವೇಷಿಸುತ್ತಿದೆ. ಒಬಿಸಿಗಳನ್ನೂ ವಿಭಜಿಸಿ, ಒಗ್ಗಟ್ಟು ಕಸಿದು ಅನಂತರ ಮೀಸಲು ಕಸಿಯುವ ಉದ್ದೇಶವನ್ನು ಶಾಹಿ ಪರಿವಾರ ಹೊಂದಿದೆ. ಈ ಪ್ರಯತ್ನವನ್ನು ನೆಹರೂ, ರಾಜೀವ್‌ ಗಾಂಧಿ ಕಾಲದಿಂದಲೂ ಮಾಡಲಾಗುತ್ತಿದೆ ಎಂದು ಮೋದಿ ಆರೋಪಿಸಿದ್ದಾರೆ.

ಮೋದಿ ಹೇಳಿದ್ದೇನು?
ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಕರ್ನಾಟಕದಿಂದ ಲೂಟಿ
ಹಿಮಾಚಲ ಪ್ರದೇಶ, ತೆಲಂಗಾಣ ಕೂಡ ಕಾಂಗ್ರೆಸ್‌ನ ಎಟಿಎಂ
ಒಬಿಸಿ, ಎಸ್‌ಸಿ, ಎಸ್‌ಟಿ ಒಗ್ಗಟ್ಟು ಮುರಿದು ಚುಕ್ಕಾಣಿ ಹಿಡಿಯುವ ತಂತ್ರ
ಅಂಬೇಡ್ಕರ್‌ ದಲಿತರೆಂಬುದಕ್ಕಾಗಿ ಕಾಂಗ್ರೆಸ್‌ಗೆ ಅವರ ಕಂಡರಾಗದು
ನಾನು ಒಬಿಸಿ ಎಂಬುದಕ್ಕಾಗಿ ಒಬಿಸಿಗಳ ಮೇಲೂ ದ್ವೇಷ
ಜಾತಿ ವಿಭಜಿಸಿ, ಮೀಸಲು ಕಸಿಯಲು ಹಿಂದೆಯೂ ಪ್ರಯತ್ನ

Advertisement

Udayavani is now on Telegram. Click here to join our channel and stay updated with the latest news.

Next