ಲಾಪಜ (ಬೊಲಿವಿಯ): ಮನುಷ್ಯನ ವಯಸ್ಸು 50 ದಾಟುತ್ತಿದ್ದಂತೆ ಆತನಿಗೆ ತನ್ನಸಾವಿನ ದಿನಗಳು ಹತ್ತಿರಾಗಿವೆ ಎಂದು ಅನಿಸಲು ಶುರುವಾಗುತ್ತದೆ. 60, 70 ಆದಮೇಲಂತೂ ಯಾವತ್ತು ಎದೆಬಡಿತ ನಿಲ್ಲುತ್ತದೆ ಎಂದು ಚಿಂತಿಸುವವರೇ ಹೆಚ್ಚು. ಈ ಬೊಲಿವಿಯ ಅಜ್ಜಿಯನ್ನು ನೋಡಿ, ಆಕೆ ತನ್ನ 70ನೆ ವಯಸ್ಸಿನಲ್ಲಿ ಅಸಾಮಾನ್ಯ ಸಾಧನೆ ಮಾಡಿದ್ದಾರೆ.
ಸಾವಿನ ಹೆದ್ದಾರಿ ಎಂದೇ ಕರೆಸಿಕೊಳ್ಳುವ ಬೊಲಿವಿಯದ ಸ್ಪೈರಲ್ ಸ್ಕೈವಾರ್ಡ್ ರಸ್ತೆಯಲ್ಲಿ ಸೈಕ್ಲಿಂಗ್ ನಡೆಸಿ ಅದರ ಮೇಲುದಿಯನ್ನು ತಲುಪಿದ್ದಾರೆ. ಸದಾ
ಹಿಮಪಾತ, ಮಳೆ, ಕಲ್ಲುಕುಸಿತವಾಗುವ, ಕಣಿವೆಯ ಆಸುಪಾಸಲ್ಲೇ ಸಾಗುವ ಈ ರಸ್ತೆಯಲ್ಲಿ 70ರ ಅಜ್ಜಿ ಯುವಕರಿಗೂ ನಾಚಿಕೆ ಹುಟ್ಟಿಸುವಂತೆ ಸೈಕಲ್ ತುಳಿದಿದ್ದಾರೆ. ಆಕೆಯ ಹೆಸರು ಮಿರ್ಥಾ ಮನೋಜ್.
ಬೊಲಿವಿಯದ ಆಂಡಿಸ್ ಪರ್ವತದಲ್ಲಿ 11 ಸಾವಿರ ಅಡಿ ಎತ್ತರದಲ್ಲಿ ಈ ರಸ್ತೆಯಿದೆ. ಪಕ್ಕಾ ಉಬ್ಬುರಸ್ತೆ. ಇಲ್ಲಿ ನಡೆಯುವುದೇ ಕಷ್ಟ, ಸೈಕಲ್ ತುಳಿಯುವುದಂತೂ ಅಸಾಧ್ಯದ ಮಾತು. ಪಕ್ಕಾ ಕಚ್ಚಾ ರಸ್ತೆ. ಅಂತಹ ಜಾಗದಲ್ಲಿ 60 ಕಿ.ಮೀ. ಬಿಡುವಿಲ್ಲದೇ ಅಜ್ಜಿ ಸೈಕಲ್ ತುಳಿದು, ಪರ್ವತದ ಶೃಂಗಕ್ಕೆ ತಲುಪಿದ್ದಾರೆ. ತನ್ನ ಜೀವನದಲ್ಲಿ ಈ ಸಾಧನೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಅಜ್ಜಿ ಮಿರ್ಥಾ ಹೇಳಿಕೊಳ್ಳುತ್ತಾರೆ. ಅಂದಹಾಗೆ ಈ ಅಜ್ಜಿ, ಇಂತಹ ಭಯಾನಕ ಕೂಟದಲ್ಲಿ ಭಾಗವಹಿಸಿದ ಅತಿಹಿರಿಯ ವ್ಯಕ್ತಿ!
ಮಗನ ಸಾವಿನ ನೋವು ಮರೆಯಲು ಸೈಕಲ್ ಹತ್ತಿದ್ರು ಇಂತಹ ಭಯಾನಕ ಸಾಹಸವನ್ನು ಮಾಡುವ ಉತ್ಸಾಹ ಈ ಅಜ್ಜಿಗೆ ಹೇಗೆ ಬಂತು ಎಂಬ ಪ್ರಶ್ನೆ ಸಹಜ. ಕೆಲವು ವರ್ಷಗಳ ಹಿಂದೆ ಮಿರ್ಥಾ ಸೈಕಲ್ ತುಳಿಯಲು ಆರಂಭಿಸಿದರು. ಅದಕ್ಕೆ ಕಾರಣ ತನ್ನ ಪುತ್ರನ ಸಾವು. ಅಚಾನಕ್ಕಾಗಿ ಮಗ ಸತ್ತು ಹೋಗಿದ್ದರಿಂದ ಮಿರ್ಥಾ ಹತಾಶೆಗೊಂಡಿದ್ದರು.
ಆಗ ಮನಃಶಾಸ್ತ್ರಜ್ಞ, ಗೆಳೆಯನೊಬ್ಬ ಸೈಕಲ್ ತುಳಿಯಲು ಸಲಹೆ ನೀಡಿದರು. ಹಾಗೆ ಶುರುವಾದ ಈ ಪಯಣ, ಇದೀಗ ಅಜ್ಜಿಗೆ ಮರುಜನ್ಮ ನೀಡಿದೆ. ಆಕೆಯ 6 ಮೊಮ್ಮಕ್ಕಳೂ ಅಜ್ಜಿಯೊಂದಿಗೆ ಸೈಕಲ್ ತುಳಿಯುತ್ತಾರೆ. 18 ವರ್ಷದ ಹಿರಿಯ ಮೊಮ್ಮಗ ಸದ್ಯದಲ್ಲೇ ತನ್ನ ದಾರಿಯನ್ನೇ ಆಯ್ದುಕೊಳ್ಳುವ ವಿಶ್ವಾಸ ಅಜ್ಜಿಗಿದೆ.
ಇದೊಂದು ಎತ್ತರದ ಜಾಗ. ಇಲ್ಲಿ ಮೇಲೇರಬೇಕು, ಏರಬೇಕು, ಏರುತ್ತಲೇ ಇರಬೇಕು. ವಿಶ್ರಾಂತಿಯೇ ಇರುವುದಿಲ್ಲ. ಇಂತಹ ಜಾಗವನ್ನು ಕ್ರಮಿಸಿರುವುದು ನನ್ನ ಜೀವನದಲ್ಲಿ ಮರೆಯಲಾರದ ಸಾಧನೆ.
ಮಿರ್ಥಾ ಮನೋಜ್, 70ರ ಅಜ್ಜಿ