Advertisement

ಮುತ್ತೂಟ್‌ನಲ್ಲಿ 70 ಕೆ.ಜಿ. ಚಿನ್ನ ದರೋಡೆ

12:44 AM Dec 25, 2019 | Lakshmi GovindaRaj |

ಬೆಂಗಳೂರು: ಪುಲಕೇಶಿನಗರದ ಲಿಂಗರಾಜುಪುರ ರಸ್ತೆಯಲ್ಲಿರುವ ಮುತ್ತೂಟ್‌ ಫೈನಾನ್ಸ್‌ ಕಚೇರಿಯ ಶೌಚಾಲಯದ ಗೋಡೆ ಕೊರೆದಿರುವ ದುಷ್ಕರ್ಮಿಗಳು ಬರೋಬ್ಬರಿ 70 ಕೆ.ಜಿ. ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

Advertisement

ಶನಿವಾರ ತಡರಾತ್ರಿ ಒಂದು ಗಂಟೆ ಸುಮಾರಿಗೆ ಕೃತ್ಯ ಎಸಗಿರುವ ದುಷ್ಕರ್ಮಿಗಳು ಚೀಲದಲ್ಲಿ ಚಿನ್ನಾಭರಣ ಗಳನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಪುಲಕೇಶಿನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಟ್ಟಡದ ಭದ್ರತಾ ಸಿಬ್ಬಂದಿಯನ್ನು ಅನುಮಾನದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಇತರೆ ಆರೋಪಿಗಳ ಪತ್ತೆಗೆ ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಗ್ಯಾಸ್‌ ಕಟ್ಟರ್‌, ಡ್ರಿಲ್ಲಿಂಗ್‌ ಯಂತ್ರ ಬಳಕೆ: ಕಟ್ಟಡ ಮೊದಲ ಮಹಡಿಯಲ್ಲಿರುವ ಮೂತ್ತೂಟ್‌ ಫೈನಾನ್ಸ್‌ ಕಚೇರಿಯ ಗೋಡೆಗೆ ಹೊಂದಿಕೊಡಂತಿರುವ ಶೌಚಾಲಯದ ಬಾಗಿಲು ಮುರಿದಿರುವ ನಾಲ್ಕೈದು ಮಂದಿ ಮುಸುಕುಧಾರಿಗಳು ಶೌಚಾಲಯದ ಒಳಭಾಗದಿಂದಲೇ ಡ್ರಿಲ್ಲಿಂಗ್‌ ಯಂತ್ರ ಬಳಸಿ ಕಚೇರಿಯ ಗೋಡೆ ಕೊರೆದಿದ್ದಾರೆ. ಒಳ ಹೋಗುತ್ತಿದ್ದಂತೆ ಸಿಸಿಟಿವಿ ಕ್ಯಾಮೆರಾ ನಿಷ್ಕ್ರಿಯಗೊಳಿಸಿ, ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಿದ್ದಾರೆ.

ಅಲ್ಲದೆ ಸ್ಟ್ರಾಂಗ್‌ ಕೊಠಡಿಗೆ ಅಳವಡಿಸಿರುವ ಅಲಾರಾಂನ್ನು ಧ್ವಂಸಗೊಳಿಸಿದ್ದು, ಅದರ ಕಬ್ಬಿಣದ ಬಾಗಿಲನ್ನು ಗ್ಯಾಸ್‌ ಕಟ್ಟರ್‌ನಿಂದ ಕೊರೆದು, ನಂತರ ಒಳಭಾಗದಲ್ಲಿ ಬಾಗಿಲಿನ ಕಬ್ಬಿಣ ಸರಳುಗಳನ್ನು ಮುರಿದು ಬರೋಬರಿ 70 ಕೆ.ಜಿ. ಚಿನ್ನಾಭರಣವನ್ನು ಚೀಲದಲ್ಲಿ ತುಂಬಿಕೊಂಡು ವಾಹನಗಳ ಮೂಲಕ ಪರಾರಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ್ದ ವಸ್ತುಗಳು ಸ್ಥಳದಲ್ಲೇ ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

ರಜೆ ದಿನವೇ ಕೃತ್ಯ: ಮುತ್ತೂಟ್‌ ಫೈನಾನ್ಸ್‌ ಕಚೇರಿಗೆ ಭಾನುವಾರ ರಜೆ ಇರುವುದನ್ನು ತಿಳಿದಿರುವ ವ್ಯಕ್ತಿಗಳೇ ಬಹಳ ದಿನಗಳಿಂದ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ. ಶನಿವಾರ ರಾತ್ರಿ ಕಚೇರಿ ಬಾಗಿಲು ಹಾಕುವವರೆಗೂ ಕೆಲ ದುಷðರ್ಮಿಗಳು ಸ್ಥಳದಲ್ಲೇ ನಿಂತು ಗಮನಿಸಿದ್ದು, ತಡರಾತ್ರಿ ಒಂದು ಗಂಟೆ ನಂತರ ಕೃತ್ಯ ಆರಂಭಿಸಿ 2-3 ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕದೊಯ್ದಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement

ಭದ್ರತಾ ಸಿಬ್ಬಂದಿ ವಶಕ್ಕೆ: ಫೈನಾನ್ಸ್‌ ಕಚೇರಿ ಇರುವ ಕಟ್ಟಡಕ್ಕೆ ನೇಪಾಳ ಮೂಲದ ಪ್ರೇಮ್‌ ಕುಮಾರ್‌ ಸೇರಿ ಇಬ್ಬರನ್ನು ಭದ್ರತಾ ಸಿಬ್ಬಂದಿಯಾಗಿ ನೇಮಿಸಲಾಗಿದೆ. ಸದ್ಯ ಪ್ರೇಮ್‌ ಕುಮಾರ್‌ನನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತೂಬ್ಬ ನಾಪತ್ತೆಯಾಗಿದ್ದಾನೆ. ಆಗಾಗ ಫೈನಾನ್ಸ್‌ ಕಚೇರಿಗೆ ಆಗಮಿಸುತ್ತಿದ್ದ ಭದ್ರತಾ ಸಿಬ್ಬಂದಿಗೆ ಯಾವ ಭಾಗದಲ್ಲಿ ಸ್ಟ್ರಾಂಗ್‌ ರೂಮ್‌ ಇದೆ,

ಆಡಳಿತ ವಿಭಾಗ ಎಲ್ಲಿದೆ ಎಂಬ ಮಾಹಿತಿಯಿತ್ತು. ಹೀಗಾಗಿ ಈತನೇ ತನ್ನ ಸಹಚರರ ಮೂಲಕ ಕೃತ್ಯ ಎಸಗಿರುವ ಸಾಧ್ಯತೆಯಿದೆ. ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಸಂಬಂಧ ಫೈನಾನ್ಸ್‌ನ ವ್ಯವಸ್ಥಾಪಕರು ಸೋಮವಾರ ಬೆಳಗ್ಗೆ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.

ನಗರ ಪೊಲೀಸ್‌ ಆಯುಕ್ತರು ಭೇಟಿ: 70 ಕೆ.ಜಿ. ಚಿನ್ನಾಭರಣ ಕಳವು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಮತ್ತು ಪೂರ್ವ ವಿಭಾಗ ಡಿಸಿಪಿ ಡಾ ಶರಣಪ್ಪ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಆಯುಕ್ತರು, ಫೈನಾನ್ಸ್‌ ನಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಸಂಪೂರ್ಣ ಮಾಹಿತಿ ನೀಡುವಂತೆ ಕಚೇರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಸದ್ಯ ಕಟ್ಟಡದ ಒಬ್ಬ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ. ದುಷ್ಕರ್ಮಿಗಳು ಕಚೇರಿಗೆ ಹೊಂದಿಕೊಂಡಿರುವ ಶೌಚಾಲಯದ ಗೋಡೆ ಕೊರೆದು ಒಳ ನುಗ್ಗಿದ್ದಾರೆ. ಗ್ಯಾಸ್‌ ಕಟ್ಟರ್‌, ಡ್ರೀಲ್ಲಿಂಗ್‌ ಯಂತ್ರ ಇತರೆ ಉಪಕರಣಗಳ ಮೂಲಕ ಸ್ಟ್ರಾಂಗ್‌ ರೂಂ ಪ್ರವೇಶಿಸಿ ಕೃತ್ಯವೆಸಗಿದ್ದಾರೆ. ಆರೋಪಿಗಳ ಪತ್ತೆಗೆ ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next