ಹೈದರಾಬಾದ್: ಪಕ್ಕದ ಮನೆಯ ಟೆರೆಸ್ ಮೇಲೆ ಆಡವಾಡುತ್ತಿದ್ದ 7ವರ್ಷದ ಬಾಲಕಿಯೊಬ್ಬಳು ಆಯತಪ್ಪಿ ಬಾತ್ ರೂಂನೊಳಗೆ ಬಿದ್ದಿದ್ದಳು..ಸುಮಾರು 5 ದಿನಗಳ ಕಾಲ ಬಾತ್ ರೂಂನೊಳಗಿದ್ದು, ಬರೇ ನೀರು ಕುಡಿದುಕೊಂಡು ಬದುಕಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಏನಿದು ಘಟನೆ?
ಹೈದರಾಬಾದ್ ನಿಂದ 160 ಕಿಲೋ ಮೀಟರ್ ದೂರದಲ್ಲಿರುವ ತೆಲಂಗಾಣದ ನಾರಾಯಣ್ ಪೇಟ್ ಜಿಲ್ಲೆಯ ಮಾಕ್ಟಾಲ್ ನಗರದಲ್ಲಿ 2ನೇ ತರಗತಿ ವಿದ್ಯಾರ್ಥಿನಿ ಕುರುವಾಕಾಚೇರಿ ಅಖಿಲಾ ತಮ್ಮ ನೆರ ಮನೆಯ ಟೆರೆಸ್ ಮೇಲೆ ಆಡವಾಡುತ್ತಿದ್ದ ವೇಳೆ ಆಯತಪ್ಪಿ ಬಾತ್ ರೂಂನೊಳಕ್ಕೆ ಬಿದ್ದಿದ್ದಳು. ಬಾತ್ ರೂಂ ಮೇಲೆ ಪ್ಲಾಸ್ಟಿಕ್ ಹಾಸಲಾಗಿತ್ತು. ಆಕೆ ಪ್ಲಾಸ್ಟಿಕ್ ಮೇಲೆ ಬಿದ್ದು, ಬಾತ್ ರೂಂನೊಳಗೆ ಜಾರಿದ್ದಳು.
ಈ ಘಟನೆ ನಡೆದದ್ದು ಏಪ್ರಿಲ್ 20ರಂದು. ಬಾತ್ ರೂಂ ಅನ್ನು ಹೊರಗಿನಿಂದ ಲಾಕ್ ಮಾಡಲಾಗಿತ್ತು. ಅಷ್ಟೇ ಅಲ್ಲ ಬಾತ್ ರೂಂ ದೂರವಿತ್ತು. ಮನೆಯ ಮಾಲೀಕರು ಕೂಡಾ ಪ್ರವಾಸ ಹೋಗಿದ್ದರು. ಈಕೆ ಸಹಾಯಕ್ಕಾಗಿ ಕೂಗಿಕೊಂಡರು ಕೂಡಾ ಯಾರಿಗೂ ಕೇಳಿಸದೇ ಇದ್ದ ಪರಿಣಾಮ ಐದು ದಿನಗಳ ಕಾಲ ಬಾತ್ ರೂಂನೊಳಗೆ ಕಾಲ ಕಳೆಯುವಂತಾಗಿತ್ತು!
ಮತ್ತೊಂದೆಡೆ ಮಗಳು ಮನೆಗೆ ಬಾರದಿರುವುದನ್ನು ಕಂಡು ತಂದೆ ಸುರೇಶ್, ತಾಯಿ ಮಹದೇವಮ್ಮ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಶೋಧ ಕಾರ್ಯ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲವಾಗಿತ್ತು.
ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಪೊಲೀಸರ ತಂಡವೊಂದನ್ನು ರಚಿಸಿ ತೆಲಂಗಾಣ ಮತ್ತು ಹೈದರಬಾದ್ ನಲ್ಲಿ ಶೋಧ ನಡೆಸಿದ್ದರು. ಆದರೆ ಯಾವುದೇ ಸುಳಿವು ಸಿಕ್ಕಿರಲಿಲ್ಲವಾಗಿತ್ತು. ಏತನ್ಮಧ್ಯೆ ಪ್ರವಾಸಕ್ಕೆ ಹೋಗಿದ್ದ ಮನೆಯ ಮಾಲೀಕ ವೆಂಕಟೇಶ್ ಬುಧವಾರ ವಾಪಸ್ ಬಂದಿದ್ದರು.
ಅವರು ಮನೆಯ ಹೊರಭಾಗದಲ್ಲಿದ್ದ ಬಾತ್ ರೂಂಗೆ ಹೋದಾಗ ಹುಡುಗಿಯೊಬ್ಬಳು ಬಿದ್ದಿರುವುದನ್ನು ಕಂಡು ಶಾಕ್ ಆಗಿದ್ದರು. ಕೂಡಲೇ ನೆರೆಮನೆಯವರಿಗೆಲ್ಲ ವಿಷಯ ತಿಳಿಸಿದ್ದರು. ಬಳಿಕ ಈ ಬಾಲಕಿಯ ಗುರುತು ಪತ್ತೆಹಚ್ಚಿದ್ದರು. ತಿಂಡಿ, ಊಟೋಪಚಾರವಿಲ್ಲದೆ ತೀವ್ರ ನಿತ್ರಾಣಗೊಂಡಿದ್ದ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಆಕೆಗೆ ಇನ್ನೂ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿ ತಿಳಿಸಿದೆ.