ಬೆಂಗಳೂರು: ಹೃದಯ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಹಾರ್ಟ್ ಸರ್ಜನ್ ಸೋಗಿನಲ್ಲಿ ಕರೆ ಮಾಡಿದ ಸೈಬರ್ ಕಳ್ಳ ಬರೋಬ್ಬರಿ 7 ಸಾವಿರ ರೂ. ಲಪಟಾಯಿಸಿದ್ದಾನೆ.
ಹೊಸಪಾಳ್ಯದ ನಿವಾಸಿ ವೇದಾವತಿ (43) ವಂಚನೆಗೊಳಗಾದವರು.
ವೇದಾವತಿ ಹೃದಯ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದಾರೆ. 2002ರಲ್ಲಿ ಹೃದಯ ಸಂಬಂಧಿತ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದರು. ಇಷ್ಟಾದರೂ ಅವರಿಗೆ ಹೃದಯಕ್ಕೆ ಸಂಬಂಧಿತ ಸಮಸ್ಯೆ ಕಾಡುತ್ತಿತ್ತು. ಅ.4ರಂದು ಅಪರಿಚಿತ ನಂಬರ್ ನಿಂದ ವೇದಾವತಿಗೆ ಕರೆ ಬಂದಿತ್ತು. ಕರೆ ಸ್ವೀಕರಿಸಿದಾಗ ಅಪರಿಚಿತನೊಬ್ಬ ತನ್ನನ್ನು ಹಾರ್ಟ್ ಸರ್ಜನ್ ಎಂದು ಪರಿಚಯಿಸಿಕೊಂಡಿದ್ದ. ನಮ್ಮ ಆಸ್ಪತ್ರೆಯಿಂದ ನಿಮಗೆ ಒಳ್ಳೆಯ ಚಿಕಿತ್ಸೆ ನೀಡುವುದಾಗಿ ನಂಬಿಸಿದ್ದ. ಮುಂಗಡ ಹಣ ನೀಡಬೇಕೆಂದು ಒಂದಿಷ್ಟು ದುಡ್ಡನ್ನು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದ. ಇದಾದ ಬಳಿಕ ಮುಂಗಡವಾಗಿ ನೀಡಿದ ದುಡ್ಡು ಪಡೆಯಲು ಮತ್ತೆ ದುಡ್ಡು ನೀಡಬೇಕೆಂದು ಹೇಳಿ ಹಂತವಾಗಿ ಬರೋಬ್ಬರಿ 7 ಸಾವಿರ ರೂ. ಅನ್ನು ಹಾಕಿಸಿಕೊಂಡಿದ್ದ. ಇದರಿಂದ ನೊಂದ ವೇದಾವತಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಜಾಡು ಹಿಡಿಯಲು ಮುಂದಾಗಿದ್ದು, ಆತನಿಗೆ ವೇದಾವತಿ ನಂಬರ್ ಹೇಗೆ ಸಿಕ್ಕಿದೆ ಎಂಬುದರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.