Advertisement

ಚುನಾವಣೆ ಕಣದಲ್ಲಿ ಸಪ್ತ ರಾಜಕೀಯ ಪಕ್ಷಗಳು

09:30 PM Oct 29, 2019 | Team Udayavani |

ಮಹಾನಗರ: ಮಹಾನಗರ ಪಾಲಿಕೆ ಚುನಾವಣೆ ಸಪ್ತ ರಾಜಕೀಯ ಪಕ್ಷಗಳ ಸ್ಪರ್ಧಾಕಣವಾಗಿ ಮಾರ್ಪಾಡುತ್ತಿದ್ದು, ತೀವ್ರ ರಾಜಕೀಯ ಸೆಣಸಾಟದ ಅಂಗಣವಾಗುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಜತೆಗೆ ಜೆಡಿಎಸ್‌, ಎಸ್‌ಡಿಪಿಐ, ಸಿಪಿಎಂ, ಸಿಪಿಐ, ವೆಲ್ಫೆàರ್‌ ಪಾರ್ಟಿ ಆಫ್‌ ಇಂಡಿಯಾ ಪಕ್ಷಗಳು ಸ್ಪರ್ಧಾ ಕಣಕ್ಕೆ ಧುಮುಕಿದ್ದು, ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿವೆ.

Advertisement

ಕಳೆದ ಬಾರಿಯ ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್‌ ಹಾಗೂ ವಿಪಕ್ಷವಾಗಿದ್ದ ಬಿಜೆಪಿ ಎಲ್ಲ 60 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿವೆ. ಬಿಜೆಪಿ ಈಗಾಗಲೇ ಪ್ರಥಮ ಹಂತದಲ್ಲಿ 35 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್‌ನ ಪಟ್ಟಿ ಬುಧವಾರ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಜೆಡಿಎಸ್‌ ಈ ಬಾರಿ 20 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಪ್ರಕಟಿಸಿದೆ. ಕಳೆದ ಬಾರಿ 45 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, 2 ಸ್ಥಾನಗಳನ್ನು ಗೆದ್ದು ಕೊಂಡಿತ್ತು. ಕುದ್ರೋಳಿ, ಬಂದರು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿದ್ದರು. ಪಳ್ನೀರ್‌ ವಾರ್ಡ್‌ನಲ್ಲಿ 864 ಮತಗಳನ್ನು ಗಳಿಸುವ ಮೂಲಕ ದ್ವಿತೀಯ ಸ್ಥಾನವನ್ನು ಪಡೆದಿತ್ತು. ಆದರೆ ಈ ಬಾರಿ ಆಯ್ದ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ. ಗರಿಷ್ಠ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಮುಂದಿನ ಪಾಲಿಕೆ ಆಡಳಿತದಲ್ಲಿ ಮಹತ್ವದ ಪಾತ್ರವನ್ನು ವಹಿಸುವ ದೃಷ್ಟಿಕೋನವನ್ನು ಹೊಂದಿದೆ.

ಎಸ್‌ಡಿಪಿಐ 15 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದು 6 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಕಳೆದ ಬಾರಿ ಕಾಟಿಪಳ್ಳ ಉತ್ತರ ವಾರ್ಡ್‌ನಲ್ಲಿ ಸ್ಪರ್ಧಿಸಿ ಒಂದು ಸ್ಥಾನವನ್ನು ಗಳಿಸುವ ಮೂಲಕ ಪಾಲಿಕೆ ಪರಿಷತ್‌ಗೆ ಪ್ರಥಮ ಬಾರಿಗೆ ಪ್ರವೇಶ ಮಾಡಿತ್ತು. ಈ ಬಾರಿ ಗಣನೀಯ ಸಂಖ್ಯೆಯಲ್ಲಿ ಸ್ಥಾನಗಳನ್ನು ಗೆದ್ದುಕೊಂಡು ಕಳೆದ ಅವಧಿಗಿಂತ ಹೆಚ್ಚಿನ ಸಾಧನೆ ದಾಖಲಿಸುವ ಗುರಿಯನ್ನು ಇಟ್ಟುಕೊಂಡು ಅದು ಕಾರ್ಯೋನ್ಮುಖವಾಗಿದೆ.

ಸಿಪಿಎಂ ಈ ಬಾರಿ 7 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. 2013ರ ಪಾಲಿಕೆ ಚುನಾವಣೆಯಲ್ಲಿ ಪಕ್ಷ 10 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಪಂಜಿಮೊಗರು ವಾರ್ಡ್‌ನಲ್ಲಿ ಗೆಲುವು ಸಾಧಿಸಿತ್ತು. ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಗುರಿ ಪಕ್ಷದ್ದಾಗಿದೆ. ಸಿಪಿಐ ಕಳೆದ ಬಾರಿ 2 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ, ಈ ಬಾರಿ 4 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ.

Advertisement

ನಿರ್ಣಾಯಕ ಪಾತ್ರದ ಗುರಿ
ವೆಲ್ಫೆರ್‌ ಪಾರ್ಟಿ ಆಫ್‌ ಇಂಡಿಯಾದ ಈ ಬಾರಿ ಪಾಲಿಕೆ ಚುನಾವಣೆಯಲ್ಲಿ 6 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಇದರೊಂದಿಗೆ ವೆಲ್ಫೆರ್‌ ಪಾರ್ಟಿ ಆಫ್‌ ಇಂಡಿಯಾ ಮನಪಾ ಚುನಾವಣ ಕಣವನ್ನು ಪ್ರವೇಶಿಸುತ್ತಿದೆ. ಚುನಾವಣೆಯಲ್ಲಿ ಸ್ಪಷ್ಟ ಬಹುಮತವನ್ನು ಗಳಿಸಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವ ನಿಟ್ಟಿನಲ್ಲಿ ಬಿಜೆಪಿ, ಕಾಂಗ್ರೆಸ್‌ ಬಿರುಸಿನ ರಾಜಕೀಯ ತಂತ್ರಗಳಲ್ಲಿ ತೊಡಗಿವೆ. ಇನ್ನೊಂದೆಡೆ ಅತ್ಯಧಿಕ ಸ್ಥಾನಗಳನ್ನು ಪಡೆದು ಮುಂದಿನ ಆಡಳಿತದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಗುರಿಯನ್ನು ಜೆಡಿಎಸ್‌, ಎಸ್‌ಡಿಪಿಐ, ಸಿಪಿಎಂ, ಸಿಪಿಐ, ವೆಲ್ಫೆರ್‌ ಪಾರ್ಟಿ ಆಫ್‌ ಇಂಡಿಯಾ ಪಕ್ಷಗಳು ಇರಿಸಿಕೊಂಡಿವೆ.

ಯಾವುದೇ ಪಕ್ಷ ಸ್ಪಷ್ಟ ಬಹುಮತ ಲಭಿಸದ ಸಂದರ್ಭ ಉಳಿದ ಪಕ್ಷಗಳು ಆಡಳಿತ ರಚನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಅತೀ ಹೆಚ್ಚು ಸ್ಥಾನವನ್ನು ಗಳಿಸಿರುವ ಪಕ್ಷ ಆಡಳಿತ ಸ್ಥಾನವನ್ನು ಪಡೆಯಲು ಇತರ ಪಕ್ಷಗಳ, ಪಕ್ಷೇತರರ ನೆರವು ಪಡೆಯುತ್ತವೆ.

ಕಳೆದ ಬಾರಿ 51 ಮಂದಿ ಪಕ್ಷೇತರರ ಸ್ಪರ್ಧೆ
2013ರ ಪಾಲಿಕೆ ಚುನಾವಣೆಯಲ್ಲಿ ಒಟ್ಟು 51 ಮಂದಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಇದರಲ್ಲಿ ಸುರತ್ಕಲ್‌ ಪಶ್ಚಿಮದಿಂದ ಸ್ಪರ್ಧಿಸಿದ್ದ ರೇವತಿ ಪುತ್ರನ್‌ ಜಯ ಗಳಿಸಿದ್ದರು. ಅದಕ್ಕೂ ಮೊದಲು ಅವರು ಅದೇ ವಾರ್ಡ್‌ನಲ್ಲಿ ಬಿಜೆಪಿ ಪಕ್ಷದ ಕಾರ್ಪೊರೇಟರ್‌ ಆಗಿದ್ದರು. 2007ರಲ್ಲಿ ಪಾಲಿಕೆಯಲ್ಲಿ ಇಬ್ಬರು ಪಕ್ಷೇತರ ಕಾರ್ಪೊರೇಟರ್‌ಗಳಿದ್ದರು.

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next