ಬೀದರ: ಗಡಿ ಜಿಲ್ಲೆ ಬೀದರನಲ್ಲಿ ಮತ್ತೆ ಕೋವಿಡ್ 19 ಸೋಂಕಿನ ರಣಕೇಕೆ ಶುರುವಾಗಿದ್ದು, ಸೋಮವಾರ ಒಂದೇ ದಿನ 7 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಮಹಾಮಾರಿ ಕೋವಿಡ್ 19 ನಿಯಂತ್ರಣಕ್ಕೆ ಬರುತ್ತಿದೆ. ಎಂದು ನಿಟ್ಟಿಸುರು ಬಿಟ್ಟಿದ್ದ ಜನರಲ್ಲಿ ಮತ್ತಷ್ಟು ಭೀತಿ ಹೆಚ್ಚಿಸಿದೆ.
ಈ ಸೋಂಕಿತರೆಲ್ಲರೂ ಇತ್ತೀಚೆಗೆ ವೈರಸ್‌ನಿಂದ ಬಲಿಯಾಗಿರುವ ವೃದ್ಧನ ನಂಟು ಹೊಂದಿದ್ದಾರೆ. ಸೋಂಕಿನ ವಿರುದ್ಧ ಜಿಲ್ಲಾಡಳಿತ ಕೈಗೊಳ್ಳುತ್ತಿರುವ ಅಗತ್ಯ ಸಿದ್ಧತೆಯೊಂದಿಗೆ ಸಮರದಿಂದ ಬೀದರ ಜಿಲ್ಲೆ ಕೊರೊನಾ ಸೋಂಕು ನಿಯಂತ್ರಣದತ್ತ ಹೆಜ್ಜೆಯನ್ನಿಡುತ್ತಿತ್ತು. ಕಳೆದ ಏ. 20ರ ನಂತರ ಜಿಲ್ಲೆಯಲ್ಲಿಯಾವುದೇ ಹೊಸ ಸೋಂಕಿತರ ಪ್ರಕರಣಗಳು ಕಂಡು ಬಂದಿರಲಿಲ್ಲ. ಆದರೆ, ಏ. 28ರಂದು ಗೋಲೆಖಾನಾದ ನಿವಾಸಿ ವೃದ್ಧನ (ರೋಗಿ ಸಂ. 590) ಬಲಿ ಪಡೆದಿರುವ ಕೋವಿಡ್ 19 ಇದೀಗ ಮತ್ತೆ 7 ಜನರಿಗೆ ಒಕ್ಕರಿಸಿದೆ. ಲಾಕ್‌ಡೌನ್ ನಿಯಮ ಸಡಿಲಗೊಳಿಸಿರುವ ಈ ಸಮಯದಲ್ಲಿ ಹೊಸ ಸೋಂಕಿತ ಪ್ರಕರಣದಿಂದ ಜಿಲ್ಲೆಯಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.
ರೋಗಿ ಸಂಖ್ಯೆ 643 (35 ವರ್ಷದ ಮಹಿಳೆ), ರೋ.ಸಂ 644 (46 ವರ್ಷದ ಮಹಿಳೆ), ರೋ.ಸಂ 645 (50 ವರ್ಷದ ಮಹಿಳೆ), ರೋ.ಸಂ 646 (16 ವರ್ಷದ ಬಾಲಕ), ರೋ.ಸಂ 647 (72 ವರ್ಷದ ಮಹಿಳೆ), ರೋ.ಸಂ 648 (22 ವರ್ಷದ ಯುವಕ) ಮತ್ತು ರೋ.ಸಂ 649 (60 ವಷದ ಪುರುಷ). ಈ ಸೋಂಕಿತರೆಲ್ಲರೂ ರೋ.ಸಂ 590 ಮೃತ ವೃದ್ಧನ ಸಂಪರ್ಕಕ್ಕೆ ಬಂದಿದ್ದು, ಎಲ್ಲರೂ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೃದಯಾಘಾತದಿಂದ ಮೃತಪಟ್ಟಿರುವ ವೃದ್ಧನಿಗೆ ಐಸೋಲೇಷನ್ ಘಟಕ ಬದಲು ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಿರುವುದು ಆರೋಗ್ಯ ಸಿಬ್ಬಂದಿಗೆ ಅಪಾಯ ತಂದೊಡ್ಡಿದೆ. ಮೃತ ವ್ಯಕ್ತಿಯ ಐವರು ಸಂಬಂಧಿಕರ ಜತೆಗೆ ಬ್ರಿಮ್ಸ್‌ನ ಇಬ್ಬರು ಮಹಿಳಾ ಸಿಬ್ಬಂದಿ ಸೇರಿರುವ ಮಾಹಿತಿ ಇದ್ದು, ಆತಂಕವನ್ನು ಹೆಚ್ಚುವಂತೆ ಮಾಡಿದೆ.
ಹೊಸ ಪ್ರಕರಣಗಳಿಂದ ಜಿಲ್ಲೆಯಲ್ಲಿ ಈವರೆಗೆ ಪಾಸಿಟಿವ್‌ಗಳ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಒಂದು ಸಾವು ಸಂಭವಿಸಿದ್ದರೆ, 11 ಜನರು ಗುಣಮುಖರಾಗಿ ಡಿಸಾcರ್ಜ್ ಆಗಿದ್ದಾರೆ. ಏ. 2ರಂದು ಒಂದೇ ದಿನ ಅತಿ ಹೆಚ್ಚು 11 ಪಾಸಿಟಿವ್ ಪ್ರಕರಣಗಳು ವರದಿಯಾಗಿ ಬೀದರ ರಾಜ್ಯದಲ್ಲಿ ಗಮನ ಸೆಳೆದಿತ್ತು. ಈಗ ಮತ್ತೆ ತಿಂಗಳು ಒಳಿಕ ಒಂದೇ ದಿನ 7ಜನರಲ್ಲಿ ವೈರಸ್ ಕಂಡು ಬಂದಿದೆ. ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ಸೋಂಕು ವ್ಯಾಪಿಸುತ್ತಿರುವುದು ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ.