ಬರ್ಲಿನ್ : ಚರ್ಚ್ ವೊಂದರಲ್ಲಿ ಗುಂಡಿನ ದಾಳಿ ನಡೆಸಿದ ಪರಿಣಾಮ ಕನಿಷ್ಠ 7 ಮಂದಿ ಮೃತಪಟ್ಟು, ಹತ್ತಾರು ಮಂದಿ ಗಾಯಗೊಂಡಿರುವ ಘಟನೆ ಜರ್ಮನಿಯ ಹ್ಯಾಂಬರ್ಗ್ ನಲ್ಲಿ ಗುರುವಾರ ರಾತ್ರಿ ( ಮಾ. 9 ರಂದು) ನಡೆದಿದೆ.
ಮೂರು ಅಂತಸ್ತಿನ ಕಟ್ಟಡದಲ್ಲಿ ಬೈಬಲ್ ಅಧ್ಯಯನ ಮಾಡಲು ಗುಂಪೊಂದು ಒಟ್ಟುಗೂಡಿತ್ತು. ಈ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಸದ್ದು ಕೇಳಿ ಅಲ್ಲಿದ್ದ ಜನರೆಲ್ಲ ಏಕಾಏಕಿ ಅತ್ತಿತ್ತ ಓಡಿದ್ದಾರೆ. ಈ ವೇಳೆ ಕೆಲವರಿಗೆ ಗಾಯವಾಗಿದ್ದು, ಇನ್ನು ಕೆಲವರು ಮೃತಪಟ್ಟಿದ್ದಾರೆ. ಅಂದಾಜು 7 ಮಂದಿ ಮೃತಪಟ್ಟಿರಬಹುದೆಂದು ಸ್ಥಳೀಯ ದಿನಪತ್ರಿಕೆ ʼಹ್ಯಾಂಬರ್ಗರ್ ಅಬೆಂಡ್‌ಬ್ಲಾಟ್ʼ ವರದಿ ಮಾಡಿದೆ.
ತುರ್ತು ಕರೆ ಬಂದ ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದ್ದಾರೆ. ಈ ವೇಳೆ ಅನೇಕರು ಗಾಯಗೊಂಡು ಬಿದ್ದುಕೊಂಡಿರುವುದನ್ನು ನೋಡಿದ್ದಾರೆ. ಒಬ್ಬ ಬಂಧೂಕುದಾರಿ ಕೂಡ ಈ ಘಟನೆಯಲ್ಲಿ ಮೃತಪಟ್ಟಿದ್ದಾನೆ. ಎಷ್ಟು ಮಂದಿ ಮೃತಪಟ್ಟಿದ್ದಾರೆ ಎನ್ನುವುದನ್ನು ಪೊಲೀಸರು ಹೇಳಿಲ್ಲ. ಆದರೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಹಲವಾರು ಜನರು ಗಂಭೀರವಾಗಿ ಗಾಯಗೊಂಡರು, ಕೆಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಘಟನೆಯ ಹಿಂದಿನ ಕಾರಣವೇನು ಎನ್ನುವುದು ಗೊತ್ತಾಗಿಲ್ಲ. ಜನರು ಮನೆಯಿಂದ ಹೊರಬರಬೇಡಿ ಏನೇ ಅಪಾಯದ ಮುನ್ಸೂಚನೆ ಕಂಡರೂ ತುರ್ತು ಕರೆ ಮಾಡಿ ಎಂದು ಪೊಲೀಸರು ಟ್ವೀಟ್ ಮಾಡಿ ಹೇಳಿದ್ದಾರೆ.
ಈ ಹಿಂದೆಯೂ ಜರ್ಮನಿಯಲ್ಲಿ ಇಂತಹ ಭೀಕರ ಗುಂಡಿನ ದಾಳಿಯ ಘಟನೆಗಳು ನಡೆದಿದೆ. ಇಸ್ಲಾಂಮಿಕ್ ಉಗ್ರರು 2016 ರ ಡಿಸೆಂಬರ್ ನಲ್ಲಿ ಬರ್ಲಿನ್ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ದಾಳಿ ನಡೆಸಿದ ಪರಿಣಾಮ 12 ಮಂದಿ ಮೃತಪಟ್ಟಿದ್ದರು.