Advertisement

“ಮಿತಿ’ಯ ಕುರಿತ 7 ಮಿತ್‌ಗಳು

12:39 PM Jun 04, 2018 | Harsha Rao |

ಸಾಮಾನ್ಯವಾಗಿ ಎಲ್ಲಾ ಬ್ಯಾಂಕುಗಳಲ್ಲಿ ಪ್ರತಿದಿನ ಹಿಂಪಡೆಯುವಿಕೆ ಕನಿಷ್ಠ ರೂ.100 ನಿಂದ ಗರಿಷ್ಠ 50,000 ರೂ. ತನಕ ಇರುತ್ತದೆ. ಚಾಲ್ತಿ ಖಾತೆಯಲ್ಲಿ 2 ಲಕ್ಷ ರೂ. ವರೆಗೆ ಹಿಂಪಡೆಯಬಹುದು. ಈ ಹಿಂಪಡೆಯುವಿಕೆ  ಖಾತೆಯಲ್ಲಿರುವ ಬ್ಯಾಲೆನ್ಸ್‌ ಅನ್ನು ಮೀರಲಾಗದು. ಈ ಮಿತಿ ಪರಿಕಲ್ಪನೆ  ಉಳಿತಾಯ ಖಾತೆದಾರರಿಗೆ ಹೆಚ್ಚು ಅನ್ವಯಿಸುತ್ತಿದ್ದು, ಚಾಲ್ತಿ ಖಾತೆದಾರರಿಗೆ ಹೆಚ್ಚು ವಿನಾಯತಿ ಇರುತ್ತದೆ. 

Advertisement

ಮಿತಿ ಈ ಪದವನ್ನು ದಿನನಿತ್ಯ, ಜೀವನದಲ್ಲಿ ಕೇಳುತ್ತಲೇ ಇರುತ್ತೇವೆ. ಬ್ಯಾಂಕಿಂಗ್‌ ವ್ಯವಹಾರದಲ್ಲೂ ಮಿತಿ ಯಾವಾಗಲೂ ಚಾಲ್ತಿಯಲ್ಲಿರುತ್ತದೆ.  ಇಲ್ಲಿ ಮಾಡುವ ಪ್ರತಿಯೊಂದು  ವ್ಯವಹಾರವೂ ಹಲವು ನಿಯಂತ್ರಣ, ನೀತಿ ನಿಯಮಾವಳಿ, ಮಿತಿಗಳಿಗೆ ಒಳಪಟ್ಟಿರುತ್ತದೆ. ಇಂತಿಷ್ಟು, ಹಣೆ ತೆಗೆದರೆ ಟ್ಯಾಕ್ಸ್‌ ಬೀಳುತ್ತದೆ ಇಂತಿಷ್ಟು ಹಣಕ್ಕೆ ಟ್ಯಾಕ್ಸ್‌ ಇಲ್ಲ. ಒಬ್ಬರ ಖಾತೆಗೆ ಒಮ್ಮೆಲೇ ಇಂತಿಷ್ಟು ಹಣ ಮಾತ್ರ ಹಾಕಬಹುದು… ಇಂಥವೇ ಹಲವು ಮಿತಿಗಳು ಬ್ಯಾಂಕಿಂಗ್‌ ಕ್ಷೇತ್ರದಲ್ಲಿವೆ. ಇದನ್ನೆಲ್ಲ ಗಮನಸಿದವರು ಖಂಡಿತ ಕೇಳುತ್ತಾರೆ. ಬ್ಯಾಂಕುಗಳಲ್ಲಿ  ಈ ಮಿತಿ (Limit) ಪರಿಕಲ್ಪನೆ ಹೇಗೆ ಕೆಲಸ ಮಾಡುತ್ತದೆ?

ಹಣ ಜಮಾವಣೆ
ಬ್ಯಾಂಕುಗಳಲ್ಲಿ ನಿಮ್ಮ ಖಾತೆಗಳಿಗೆ 49,999 ರೂ. ವರೆಗೆ ಯಾವುದೇ ಅಡೆತಡೆ ಇಲ್ಲದೇ, ಯಾವುದೇ ಪ್ರಶ್ನೆಇಲ್ಲದೇ ಹಣ ಜಮಾವಣೆ ಮಾಡಬಹುದು. ಈ ಮಿತಿಯನ್ನು ಮೀರಿ ಜಮಾ ಮಾಡಬೇಕಾದರೆ,  ಯಾವ ಖಾತೆಗೆ ಹಣ ಜಮೆ ಯಾಗುತ್ತದೆಯೋ, ಆ ಖಾತೆಗೆ ಸಂಬಂಧಪಟ್ಟ ಪಾನ್‌ ನಂಬರ್‌ ಅನ್ನು (ಪಾನ್ ಕಾರ್ಡ್‌ ಪ್ರತಿ) ನೀಡಲೇ ಬೇಕು. ಹತ್ತು ಲಕ್ಷ ಮತ್ತು ಅಧಿಕ ಹಣ ಜಮಾ ಮಾಡಿದರೆ, ಈ ನಿಟ್ಟಿನಲ್ಲಿ ಬ್ಯಾಂಕ್‌ಗಳು ರಿಸರ್ವ್‌ ಬ್ಯಾಂಕ್‌ಗೆ  ಮಾಹಿತಿ ಕೊಡಬೇಕಾಗುತ್ತದೆ. ಜಮಾ ಮಾಡುವವರ ಮತ್ತು ಜಮಾಮಾಡಿಸಿಕೊಳ್ಳುವವರ ಇಬ್ಬರ ಪಾನ್‌ನಂಬರ್‌ ಮಾಹಿತಿ ಕೇಳುವ ಸಂದರ್ಭವೂ  ಇರುತ್ತದೆ.

ಹಣ ಹಿಂಪಡೆಯುವಿಕೆ
ಬ್ಯಾಂಕ್‌ ಖಾತೆಯಿಂದ ಹಣಪಡೆಯಲು ಯಾವುದೇ ಮಿತಿ ಇರುವುದಿಲ್ಲ. ನಿಮ್ಮ ಖಾತೆಯಲ್ಲಿರುವ  ನಿಮ್ಮ ಹಣವನ್ನು ನಿಮಗೆ ಬೇಕಷ್ಟು ಹಿಂಪಡೆಯಲು ನೀವು ಸ್ವತಂತ್ರರು.  ಆದರೆ, ಯಾವುದಾದರೂ ಖಾತೆಯಿಂದ ಹತ್ತುಲಕ್ಷಕ್ಕೂ ಮೀರಿ  ಹಣ ಹಿಂಪಡೆದರೆ ಅದರ ಬಗ್ಗೆ ಸಂಬಂಧಪಟ್ಟ ಬ್ಯಾಂಕುಗಳು ರಿಸರ್ವ್‌ ಬ್ಯಾಂಕ್‌ಗೆ ಮಾಹಿತಿಯನ್ನು ಕೊಡಬೇಕಾಗುತ್ತದೆ.

ಡೆಬಿಟ್ ಕಾರ್ಡ್‌ ಮೂಲಕ ಹಣ ಹಿಂಪಡೆಯುವ ವಿಚಾರದಲ್ಲಿ ಏಕರೂಪತೆ ಇರುವುದಿಲ್ಲ. ಒಂದೊಂದು ಬ್ಯಾಂಕಿನಲ್ಲಿ ಒಂದೊಂದು ರೀತಿಯ ನಿಯಮವಿದೆ.  ಹಾಗೆಯೇ, ಅದು ಯಾವರೀತಿಯ ಕಾರ್ಡ್‌ ಎನ್ನುವುದರ ಮೇಲೂ  ಅವಲಂಭಿತಾಗಿರುತ್ತದೆ. ಸಾಮಾನ್ಯವಾಗಿ ಎಲ್ಲಾ ಬ್ಯಾಂಕುಗಳಲ್ಲಿ ಪ್ರತಿದಿನ ಹಿಂಪಡೆಯುವಿಕೆ ಕನಿಷ್ಠ ರೂ. 100 ನಿಂದ ಗರಿಷ್ಠ 50,000 ರೂ. ತನಕ ಇರುತ್ತದೆ. ಚಾಲ್ತಿ  ಖಾತೆಯಲ್ಲಿ  2 ಲಕ್ಷ ರೂ. ವರೆಗೆ ಹಿಂಪಡೆಯಬಹುದು. ಈ ಹಿಂಪಡೆಯುವಿಕೆ  ಖಾತೆಯಲ್ಲಿರುವ ಬ್ಯಾಲೆನ್ಸ್‌ ಅನ್ನು ಮೀರಲಾಗದು. ಈ ಮಿತಿ ಪರಿಕಲ್ಪನೆ  ಉಳಿತಾಯ ಖಾತೆದಾರರಿಗೆ ಹೆಚ್ಚು ಅನ್ವಯಿಸುತ್ತಿದ್ದು, ಚಾಲ್ತಿ ಖಾತೆದಾರರಿಗೆ ಹೆಚ್ಚು ವಿನಾಯತಿ ಇರುತ್ತದೆ. ಖಾತೆದಾರನ ಬ್ಯಾಂಕಿನಲ್ಲಿ ಪ್ರತಿ ತಿಂಗಳು 5 ಬಾರಿ, ಬೇರೆ ಬ್ಯಾಂಕಿನಲ್ಲಿ ಮೂರು ಬಾರಿ ಶುಲ್ಕವಿಲ್ಲದೆ ಹಣ  ಹಿಂಪಡೆಯಬಹದು. ಈ ಮಿತಿ ದಾಟಿದರೆ ಶುಲ್ಕ ಕೊಡಬೇಕಾಗುತ್ತದೆ. 

Advertisement

ಕ್ರೆಡಿಟ್ ಕಾರ್ಡ್‌ ವ್ಯವಹಾರ
ಕ್ರೆಡಿಟ್‌ ಕಾರ್ಡ್‌ ವ್ಯವಹಾರದಲ್ಲಿ ಮನಬಂದಂತೆ  ಖರೀದಿಸಲಾಗದು. ಡೆಬಿಟ್ ಕಾರ್ಡ್‌ ವ್ಯವಹಾರದಲ್ಲಿ ನಿಮ್ಮ ಖಾತೆಯಲ್ಲಿ ಇರುವ ಬ್ಯಾಲೆನ್ಸ್‌ಗೆ  ಸರಿದೂಗುವಂತೆ  ವ್ಯವಹಾರ ಮಾಡಬೇಕಾಗುತ್ತದೆ. ಇದು ಒಂದು ರೀತಿಯ ನಗದು ವ್ಯವಹಾರ. ಅದರೆ, ಕ್ರೆಡಿಟ್ ಕಾರ್ಡ್‌ ವ್ಯವಹಾರ ಸಾಲ ಸೌಲಭ್ಯದಾಗಿದ್ದು,  ಬ್ಯಾಂಕಿನವರು  ಗ್ರಾಹಕನ ಹಣಕಾಸು ಪರಿಸ್ಥಿತಿ ಮತ್ತು  ಮರುಪಾವತಿ  ಸಾಮರ್ಥ್ಯವನ್ನು ನೋಡಿ,  ಗರಿಷ್ಠ ಖರೀದಿಯ  ಮಿತಿಯನ್ನು ಹಾಗೂ ಹಣ ಹಿಂಪಡೆಯುವ  ಮೊತ್ತವನ್ನು ನಿಗದಿಪಡಿಸುತ್ತಾರೆ. ಗ್ರಾಹಕ ಈ  ಮಿತಿಯೊಳಗೆ ತನ್ನ  ಹಣ ಹಿಂಪಡೆಯುವ ಮತ್ತು ಖರೀದಿ ಮಾಡುವ ವ್ಯವಹಾರವನ್ನು ಮಾಡಬೇಕಾಗುತ್ತದೆ.

ಉಳಿತಾಯ ಖಾತೆಯಲ್ಲಿ ಹಣ ಹಿಂಪಡೆಯುವಿಕೆ
ಉಳಿತಾಯ ಖಾತೆಯಲ್ಲಿ ವರ್ಷಕ್ಕೆ 100 ಬಾರಿ ಚೆಕ್‌ ಮೂಲಕ ಹಣ ಹಿಂಪಡೆಯಬಹುದು.ಈ ಚೆಕ್‌ಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಅದರೆ, ಈ ಮಿತಿ ಮೀರಿದರೆ ಶುಲ್ಕ ವಿಧಿಸಲಾಗುವುದು.

ಯಾವುದಾದರೂ ಠೇವಣಿ ಪಕ್ವವಾಗಿದ್ದು, ಅದರ ಮೊತ್ತ 20,000 ರೂ.ಗಳನ್ನು ಮೀರಿದ್ದರೆ,  ಅದು ಗ್ರಾಹಕನ ಖಾತೆಗೆ ಜಮಾ ಆಗಬೇಕೇ ವಿನಃ, ನಗದು ದೊರಕುವುದಿಲ್ಲ. ನಗದು  ಮತ್ತು ಠೇವಣಿಯಂತೆ ಸಾಲ ಸೌಲಭ್ಯಗಳಿಗೂ ಹಲವಾರು ಮಿತಿಗಳಿವೆ. ಬ್ಯಾಂಕಿನಲ್ಲಿ ಪಡೆಯುವ ಸಾಲಗಳೂ  ಮಿತಿಗೆ ಒಳಪಟ್ಟಿವೆ.  ಸಾಮಾನ್ಯವಾಗಿ ಒಬ್ಬ ಗ್ರಾಹಕ ತನ್ನ ಚಾಲ್ತಿ ಮತ್ತು ಉಳಿತಾಯ ಖಾತೆಯಲ್ಲಿ ಇರುವ  ಪೂರ್ತಿ ಹಣವನ್ನು, ಕನಿಷ್ಠ ಕಡ್ಡಾಯ ಬ್ಯಾಲೆನ್ಸ್‌ ಅನ್ನು ಬಿಟ್ಟು ಹಿಂಪಡೆಯಬಹುದು. ಒಮ್ಮೊಮ್ಮೆ ಖಾತೆಯಲ್ಲಿ ರುವ ಬ್ಯಾಲೆನ್ಸ್‌ ಅನ್ನು ಮೀರಿ ಸ್ವಲ್ಪ ಹೆಚ್ಚು ಹಣವನ್ನು ತೆಗೆಯುವ ಸಂದರ್ಭಗಳಿರುತ್ತವೆ. ಇದನ್ನು ಬ್ಯಾಂಕಿನ ಪರಿಭಾಷೆಯಲ್ಲಿ ತತ್ಕಾಲದ ಸಾಲ ಎನ್ನುತ್ತಾರೆ. ಇದನ್ನು ಸಾಮಾನ್ಯವಾಗಿ 48 ಘಂಟೆಗಳಲ್ಲಿ ಮರುಪಾವತಿಸ ಬೇಕಾಗುತ್ತದೆ. ಈ ಸೌಲಭ್ಯ ವನ್ನು ಹಕ್ಕೆಂದು ಕೇಳಲಾಗದು.

ಇದು ಬ್ಯಾಂಕ್‌  ಮ್ಯಾನೇಜರ್‌ ವಿವೇಚನೆ ಮತ್ತು ಪರಮಾಧಿಕಾರಕ್ಕೆ ಬಿಟ್ಟ ವಿಷಯ.  ಸ್ಥಿರ ಠೇವಣಿ ಮೇಲೆ ಸಾಲ ಸೌಲಭ್ಯ ನೀಡುವುದು ಬ್ಯಾಂಕುಗಳಲ್ಲಿ ತೀರಾ ಸಾಮಾನ್ಯ.  ಈ ಸೌಲಭ್ಯದಲ್ಲಿ  ಠೇವಣಿಯ ಮೇಲೆ ಶೇ.75 ರಿಂದ ಶೇ. 90ರವರೆಗೆ ಸಾಲವನ್ನ ಪಡೆಯಬಹುದು. ಸಾಮಾನ್ಯವಾಗಿ ಶೇ.75 ರಿಂದ 80ರವರೆಗೆ  ನೀಡುತ್ತಿದ್ದು, ಕೆಲವು ಸಂದರ್ಭಗಳಲ್ಲಿ  ಬ್ಯಾಂಕ್‌ನ ವಿವೇಚನೆ ಮೇರೆಗೆ  ಶೇ.90ವರೆಗೂ ನೀಡುತ್ತಾರೆ.

 ಓವರ್‌ ಡ್ರಾಫ್ಟ್  ಮಿತಿ
ಗ್ರಾಹಕರು ನೀಡುವ ಭಧ್ರತೆ ಆಧಾರದ ಮೇಲೆ ಬ್ಯಾಂಕುಗಳು ಒಂದು ಮಿತಿಯನ್ನು ನಿಗದಿಪಡಿಸುತ್ತಿದ್ದು, ಅದರೊಳಗೆ ಸಾಲವನ್ನು ಪಡೆಯಬಹುದು. ಈ ಸಾಲ, ಗ್ರಾಹಕ ನೀಡಿದ ಭದ್ರತೆಯನ್ನು ಶೇ.75 ರಷ್ಟು ಮೀರಲಾಗದು. ಒಮ್ಮೊಮ್ಮೆ, ಅನಿರೀಕ್ಷಿತ  ಪ್ರಸಂಗಗಳಲ್ಲಿ, ಮ್ಯಾನೇಜರ್‌ ತಮ್ಮ ವಿವೇಚನೆ ಆಧಾರದ ಮೇಲೆ, ನಿಗದಿ ಪಡಿಸಿದ ಮಿತಿಯನ್ನು ಶೇ.10 ರಷ್ಟು ಮೀರಿ ಗ್ರಾಹಕನಿಗೆ ಸಾಲ ನೀಡಬಹುದು. ಆದರೆ , ಈ  ಹೆಚ್ಚುವರಿ ಹಣವು 48 ಘಂಟೆ ಒಳಗಾಗಿ ಮರುಪಾವತಿ ಆಗಬೇಕು. ಒಮ್ಮೊಮ್ಮೆ ಗ್ರಾಹಕನ ಹಣಕಾಸು ದಾಡ್ಯìತೆ ಆಧಾರದ ಮೇಲೆ, ಅವರ ಬ್ಯಾಂಕಿನ ಸಂಗಡದ  ಸಂಬಂಧ ಮತ್ತು ವ್ಯವಹಾರವನ್ನು ಪರಿಗಣಿಸಿ ಯಾವುದೇ  ಭದ್ರತೆ ಇಲ್ಲದೇ  ಈ ಸೌಲಭ್ಯವನ್ನು ನೀಡಬಹುದು. ಇದನ್ನ ಬ್ಯಾಂಕಿನ ಪರಿಭಾಷೆಯಲ್ಲಿ ಕ್ಲೀನ ಓವರ್‌ ಡ್ರಾಫ್ಟ್  ಎನ್ನುತ್ತಾರೆ.  ಈ ಸೌಲಭ್ಯ ಎಲ್ಲರಿಗೂ ದೊರಕುವುದಿಲ್ಲ ಅನ್ನೋದು ನೆನಪಿರಲಿ. 

ಗೃಹ, ಸ್ಟಾಕ್‌, ಚಿನ್ನದ ಮೇಲಿನ ಸಾಲ 
ಯಾವುದೇ ಗ್ರಾಹಕ ಎಷ್ಟೇ ಸ್ಥಿತಿವಂತರಿರಲಿ, ಪ್ರಾಜೆಕ್ಟ್ ಎಷ್ಟೇ ದೊಡ್ಡದಿರಲಿ, ಆತನಿಗೆ ದೊರಕುವ ಗೃಹ ಸಾಲದ ಗರಿಷ್ಠ ಮೊತ್ತ ಆತನ ನಿವ್ವಳ ಸಂಬಳದ 60 ಪಟ್ಟು ಅಥವಾ ಪ್ರಾಜೆಕ್ಟ್‌ನ ಶೇ. 75ರಷ್ಟು ಅಗಿರುತ್ತದೆ. ಇವುಗಳಲ್ಲಿ ಯಾವುದೋ ಕಡಿಮೆಯೋ ಅಷ್ಟು ಮಾತ್ರ ಪಡೆಯಲು ಅರ್ಹರು. ಈ ಮಿತಿಯನ್ನು ಮೀರಿ ಬ್ಯಾಂಕುಗಳು ಸಾಲ ನೀಡುವುದಿಲ್ಲ.

ಬಿಜಿನೆಸ್‌ ಮೆನ್‌ಗಳು ನೀಡುವ, ಕಚ್ಚಾ, ಸಂಸ್ಕರಣದಲ್ಲಿರುವ ಮಾಲು ಮತ್ತು ಮಾರಾಟಕ್ಕೆ ರೆಡಿಯಾದ ಮಾಲುಗಳ 
ಭದ್ರತೆ ಮೇಲೆ ಬ್ಯಾಂಕುಗಳು ಸಾಲ ನೀಡುತ್ತಿದ್ದು, ಇಲ್ಲಿಯೂ ಕೂಡ ಒಟ್ಟಾರೆ ಮೊತ್ತದ ಮೇಲೆ ಶೇ.75 ರಷ್ಟು ಮಾತ್ರ ಸಾಲವನ್ನು ನೀಡಲಾಗುವುದು.

ಬ್ಯಾಂಕ್‌ ನಿಗದಿಪಡಿಸಿದ ಬಂಗಾರದ ದರದ ಮೇಲೆ, ಶೇ. 15-25 ವರೆಗೆ ಮಾರ್ಜಿನ್‌ ಬಿಟ್ಟು ಶೇ.75ರಿಂದ 85ರ ವರೆಗೆ ಸಾಲ ನೀಡಲಾಗುವುದು. ಈ ಸಾಲ ಕೇವಲ ಒಂದು ವರ್ಷಕ್ಕೆ ಮಾತ್ರ ಮತ್ತು ಕೆಲವು ಬ್ಯಾಂಕುಗಳಲ್ಲಿ  ಒಡವೆಗಳ ಮೇಲಿನ ಸಾಲಕ್ಕೆ ಗರಿಷ್ಠ ಮಿತಿ ಇದೆ ಎಂದು ಹೇಳಲಾಗುತ್ತಿದೆ.

ವಾಹನ ಸಾಲ
ಕನಿಷ್ಠ ಎರಡು ವರ್ಷ ಸೇವೆ ಸಲ್ಲಿಸಿದ ಸರ್ಕಾರಿ ನೌಕರರು 3 ರಿಂದ 4 ಲಕ್ಷ ನಿವ್ವಳ ಸಂಬಳ ಪಡೆಯುತ್ತಿದ್ದರೆ, ಅಂಥವರಿಗೆ ವಾಹನ ಕೊಳ್ಳಲು, ವಾಹನದ invoice value ಮೇಲೆ ಶೇ. 75ರಷ್ಟು ಸಾಲ ದೊರೆಯುತ್ತದೆ. ಬ್ಯಾಂಕುಗಳು  ವಿವಿಧ ರೀತಿಯ  ಸಾಲಗಳನ್ನು ನೀಡುತ್ತಿದ್ದು, ಪ್ರತಿಯೊಂದು ಸಾಲದ ಮೊತ್ತದ ಮೇಲೆ ಒಂದು ಗರಿಷ್ಠ ಮಿತಿ ಇರುತ್ತದೆ. ಇದು ಒಂದು ರೀತಿಯಲ್ಲಿ thumb rule ಆಗಿದ್ದು,  ಮಾರ್ಜಿನಲ್  ವ್ಯತ್ಯಾಸವನ್ನು, ಸಂಬಂಧಪಟ್ಟ ಬ್ಯಾಂಕ್‌, ಶಾಖಾ ಮ್ಯಾನೇಜರ್‌ರ ವಿವೇಚನೆಗೆ ಬಿಡಲಾಗುತ್ತದೆ. 

– ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next