Advertisement

CCB: ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀಗೆ 7 ತಾಸು ಸಿಸಿಬಿ ಗ್ರಿಲ್‌

12:21 PM Dec 03, 2024 | Team Udayavani |

ಬೆಂಗಳೂರು: ಭೋವಿ ನಿಗಮದ ಅಕ್ರಮ ಪ್ರಕರಣದ ವಿಚಾರಣೆಗೆ ಹಾಜರಾಗಿದ್ದ ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀ ಸೋಮವಾರ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದರು.

Advertisement

ಪ್ರಕರಣ ಸಂಬಂಧ ಸಿಸಿಬಿ ವಿಶೇಷ ವಿಚಾರಣಾ ವಿಭಾಗದ ಹಿರಿಯ ಅಧಿಕಾರಿಗಳು ಡಿವೈಎಸ್ಪಿ ಕನಕಲಕ್ಷ್ಮೀ ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಶಾಂತಿನಗರ ದಲ್ಲಿರುವ ಸಿಸಿಬಿ ಕಚೇರಿಗೆ ಹಾಜರಾಗಿದ್ದ ಕನಕಲಕ್ಷ್ಮೀಯನ್ನು ಸಂಜೆ 6 ಗಂಟೆವರೆಗೂ ವಿಚಾರಣೆ ನಡೆಸಲಾಯಿತು.

ವಕೀಲೆ ಜೀವಾಗೆ ವಿಚಾರಣೆಗೆ ಕರೆಯಲು ಕಾರಣವೇನು, ಸ್ಥಳ ಮಹಜರು ನಡೆಸಲಾಗಿತ್ತೆ, ಜೀವಾ ಮತ್ತು ಅವರ ಸಹೋದರಿ ಸಂಗೀತಾಗೆ ಸಂಬಂಧಿಸಿದ ಬ್ಯಾಂಕ್‌ ಖಾತೆಗೆ ಎಷ್ಟು ಕೋಟಿ ಹಣ ವರ್ಗಾವಣೆ ಆಗಿತ್ತು, ವಿಚಾರಣೆಗಾಗಿ ಅವರು ಎಷ್ಟು ಬಾರಿ ಸಿಐಡಿ ಕಚೇರಿಗೆ ಬಂದಿದ್ದರು, ಇನ್ನು ಜೀವಾ ಸಹೋದರಿ ಸಂಗೀತಾ ದೂರಿನಲ್ಲಿ ಆರೋಪಿಸಿದಂತೆ ಜೀವಾರನ್ನು ವಿವಸ್ತ್ರಗೊಳಿಸಲಾಗಿತ್ತೆ, ಹಾಗಾದರೆ, ಯಾವ ಕಾರಣಕ್ಕೆ ವಿವಸ್ತ್ರಗೊಳಿಸಲಾಗಿತ್ತು, ಉದ್ದೇಶಪೂರ್ವಕವಾಗಿಯೇ ಈ ರೀತಿ ನಡೆದುಕೊಂಡಿದ್ದಿರಾ ಎಂದೆಲ್ಲ ಸೇರಿ ಹಲವು ಪ್ರಶ್ನೆಗಳನ್ನು ತನಿಖಾಧಿಕಾರಿ ಕೇಳಿದ್ದಾರೆ. ಈ ಪೈಕೆ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ ಕನಕಲಕ್ಷ್ಮೀ, ಇನ್ನು ಕೆಲ ಪ್ರಶ್ನೆಗಳಿಗೆ ಗೊಂದಲದ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ದಾಖಲೆಗಳ ಸಲ್ಲಿಕೆ: ಪ್ರಕರಣಕ್ಕೆ ಸಂಬಂಧಿ ಸಿದಂತೆ ತನಿಖೆಯ ದಾಖಲಾತಿಗಳೊಂದಿಗೆ ಆಗಮಿಸಿದ ಕನಕಲಕ್ಷ್ಮೀ ಅವರು ಅದನ್ನು ತನಿಖಾಧಿಕಾರಿಗೆ ಸಲ್ಲಿಸಿದ್ದಾರೆ. ಜತೆಗೆ ಜೀವಾ ಅವರನ್ನು ತನಿಖೆ ನಡೆಸಿದ್ದು ತನಿಖೆಯ ಭಾಗವಾಗಿ ಪೀಣ್ಯಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಲಾಗಿತ್ತು ಎಂದು ಹೇಳಿಕೆ ನೀಡಿದ್ದಾರೆ.

ಭೋವಿ ನಿಗಮದ ಮಾಜಿ ಜನರಲ್‌ ಮ್ಯಾನೇಜರ್‌ ಬಿ.ಕೆ. ನಾಗರಾಜಪ್ಪ ನೀಡಿದ್ದ ದಾಖಲಾತಿಗಳು, ಜೀವಾ ಹೆಸರಿನಲ್ಲಿದ್ದ ಅನಿಕಾ ಎಂಟರ್‌ ಪ್ರೈಸಸ್‌ ಕಂಪನಿಯ ಖಾತೆಗೆ 7.16 ಕೋಟಿ ರೂ. ಹಾಗೂ ಈಕೆಯ ಸಹೋದರಿ ಸಂಗೀತಾ ಹೆಸರಿನ ಹರ್ನಿತಾ ಕ್ರಿಯೇಷನ್‌ ಕಂಪನಿ ಖಾತೆಗೆ 3.79 ಕೋಟಿ ರೂ. ವರ್ಗಾವಣೆ ಆಗಿರುವ ಬಗ್ಗೆ ಬ್ಯಾಂಕ್‌ ಸ್ಟೇಟ್‌ ಮೆಂಟ್‌ಗಳ ದಾಖಲಾತಿಗಳು ಸೇರಿ ಇದುವರೆಗೂ ಸಿಐಡಿ ಮಾಡಿದ್ದ ಎಲ್ಲಾ ತನಿಖೆಯ ದಾಖಲಾತಿಗಳನ್ನು ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.

Advertisement

ಏನಿದು ಪ್ರಕರಣ?: ಭೋವಿ ನಿಗಮದ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ವಕೀಲೆ ಜೀವಾ ಬ್ಯಾಂಕ್‌ ಖಾತೆಗೆ ಭೋವಿ ನಿಗಮದ ಸಾಕಷ್ಟು ಹಣ ವರ್ಗಾವಣೆಯಾಗಿದೆ ಎಂಬ ಆರೋಪದಡಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿದ್ದ ಜೀವಾ, ಡೆತ್‌ ನೋಟ್‌ ಬರೆದಿಟ್ಟು ನ.22ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಡೆತ್‌ನೋಟ್‌ನಲ್ಲಿ ಉಲ್ಲೇಖೀಸಿರುವ ಅಂಶ, ಜೀವಾ ಸಹೋದರಿ ಬನಶಂಕರಿ ಠಾಣೆಯಲ್ಲಿ ನೀಡಿರುವ ದೂರಿನನ್ವಯ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next