Advertisement
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ವಿವಿಧ ವೃಂದದ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಈ ಸಂಬಂಧ ಅಗ್ನಿಶಾಮಕ ದಳದ ಡೆಪ್ಯೂಟಿ ಡೈರೆಕ್ಟರ್ ಟಿ.ಎನ್. ಶಿವಶಂಕರ್ ಅವರು ನೀಡಿದ ದೂರಿನ ಮೇರೆಗೆ ಸುಭಾಷ್ ಡಿ.ಎಚ್. ಧರಣಪ್ಪ (21), ವಿಥೋಲ್ ನಿಂಗಪ್ಪ (29), ಮೌಲಸಾಬ್ ಶಮ್ಶೆದ್ (27), ಈರಪ್ಪನ ರುದ್ರೋದಗಿ ನೀಲಪ್ಪ (24), ಮಲ್ಲಪ್ಪ ಮಾರುತಿ (27), ರಮೇಶ್ ಹಳೇನೂರು ಪ್ರಭಾಕರ್ (26), ಶರೀಫ್ ಸಾಬ್ ಯಮನೂರಸಾಬ್ (26) ಅವರ ವಿರುದ್ಧ ಭಾರತೀನಗರ ಪೊಲೀಸರು ವಂಚನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಫೈರ್‌ಮನ್ ಸೇರಿ ವಿವಿಧ ವೃಂದದ ಹುದ್ದೆಗಳಿಗೆ 2020ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ದೇಹದಾಡ್ಯìತೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಿ ಉತ್ತೀರ್ಣರಾದವರ ತಾತ್ಕಾಲಿಕ ಆಯ್ಕೆ ಪಟ್ಟಿ ತಯಾರಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆಗಳ ಪರಿಶೀಲನೆ ವೇಳೆ ಏಳು ಮಂದಿ ಆರೋಪಿಗಳು ಸಲ್ಲಿಸಿದ್ದ ಎಸೆಸೆಲ್ಸಿ ಮೂಲ ಅಂಕಪಟ್ಟಿಗಳು ನಕಲಿ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಕಾರ್ಯದರ್ಶಿಗಳು ದೃಢೀಕರಿಸಿದ್ದಾರೆ. ಹೀಗಾಗಿ ನಕಲಿ ಅಂಕಪಟ್ಟಿ ನೀಡಿ ಸರಕಾರಿ ಉದ್ಯೋಗ ಪಡೆಯಲು ಯತ್ನಿಸಿದ ಏಳು ಮಂದಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಿವಶಂಕರ್ ಅವರು ದೂರಿನಲ್ಲಿ ಉಲ್ಲೇಖೀಸಿದ್ದಾರೆ. ತನಿಖೆ ಆರಂಭಿಸಿರುವ ಭಾರತೀನಗರ ಪೊಲೀಸರು, ಏಳು ಮಂದಿ ಆರೋಪಿಗಳಿಗೆ ಸಂಪರ್ಕಿಸಿ ಅಂಕಪಟ್ಟಿಗಳ ಜತೆ ಠಾಣೆಗೆ ಹಾಜರಾಗಬೇಕು ಎಂದು ಸೂಚಿಸಿದ್ದು, ಅಸಲಿಯೋ? ಅಥವಾ ನಕಲಿಯೋ ಎಂಬ ಬಗ್ಗೆ ದಾಖಲೆ ಪರಿಶೀಲನೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.