ಎಚ್.ಡಿ.ಕೋಟೆ: ಕಳೆದ ಒಂದು ವಾರದಿಂದ ಕೇರಳದ ವೈನಾಡು ಸೇರಿದಂತೆ ಕಬಿನಿ ಹಿನ್ನೀರು ವ್ಯಾಪ್ತಿ ಪ್ರದೇಶದಲ್ಲಿ ಮುಂಗಾರು ಮಳೆ ಚುರುಕುಗೊಂಡು ಎಡಬಿಡದೆ ಸುರಿಯುತ್ತಿರುವ ಪರಿಣಾಮ ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಕಬಿನಿ ಜಲಾಶಯದ ಒಳ ಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆ ಕಂಡು ಹೆಚ್ಚು ನೀರು ಹರಿದು ಬರುತ್ತಿದ್ದು ಜಲಾಶಯ ಭರ್ತಿಗೆ 7 ಅಡಿಗಳಷ್ಟು ಬಾಕಿ ಯಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಜಲಾಶಯದ ಸಂಗ್ರಹ ನೀರಿನ ಮಟ್ಟ 2276.77 ಅಡಿಗೆ ಏರಿಕೆ ಕಂಡಿದ್ದು, ಈಗಲೂ ಕೇರಳದ ವೈನಾಡು ಹಾಗೂ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಮಳೆ ಆರ್ಭಟಿಸುತ್ತಿದ್ದು ಜಲಾಶಯಕ್ಕೆ 17.412 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೆಚ್ಚಿನ ಮಳೆಯಾಗುತ್ತಿರುವುದರಿಂದ ರಾತ್ರಿ ವೇಳೆಗೆ ಒಳ ಹರಿವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಜಲಾಶಯದ ಪಕ್ಕದ ಸುಭಾಷ್ ವಿದ್ಯುತ್ ಘಟಕದ ಮೂಲಕ 2,500 ಕ್ಯೂಸೆಕ್ ನೀರನ್ನು ಮುಂಭಾಗದ ನದಿಗೆ ಹರಿಸಲಾಗುತ್ತಿದೆ. ಒಳ ಹರಿವು ಧಿಡೀರ್ ಹೆಚ್ಚಾದಲ್ಲಿ ಹೆಚ್ಚಿನ ನೀರನ್ನು ಹೊರ ಹರಿವು ಹೆಚ್ಚಿಸಲಾಗುವುದು ಎಂದು ಕಬಿನಿ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಇದೇ ದಿನ ಭರ್ತಿಗೊಂಡಿದ್ದ ಜಲಾಶಯ: ಸತತ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಜಲಾಶಯದ ನೀರಿನ ಮಟ್ಟ ಗಣನೀಯವಾಗಿ ಏರಿಕೆ ಕಂಡು 2276.77 ನೀರು ಸಂಗ್ರಹವಾಗಿದೆ. ಆದರೆ ಕಳೆದ ವರ್ಷ ಇದೇ ದಿನ ಜಲಾಶಯ ಗರಿಷ್ಠ ಮಟ್ಟ 2284 (19.52)ಟಿಎಂಸಿ ತಲುಪಿ ಜಲಾಶಯ ಭರ್ತಿಯಾಗಿ ಜಲಾಶಯದಿಂದ 11 ಸಾವಿರ ಕ್ಯೂಸೆಕ್ ನೀರನ್ನು ಮುಂಭಾಗದ ನದಿಗೆ ಹರಿಸಲಾಗಿತ್ತು. ಆದರೆ ಈ ಭಾರಿ ಪೂರ್ವ ಮುಂಗಾರು ಕೈಕೊಟ್ಟು ಮುಂಗಾರು ಕೂಡ ತಡವಾದ ಕಾರಣ ಜಲಾಶಯ ಕನಿಷ್ಠಮಟ್ಟ ಡೆಡ್ ಸ್ಟೋರೇಜ್ ತಲುಪಿದ್ದರ ಪರಿಣಾಮ ರಾಜ್ಯದ ಜನರ ಕುಡಿಯುವ ನೀರಿಗೂ ತಾತ್ವರ ಎದುರಾಗಿ, ಅಚ್ಚುಕಟ್ಟು ರೈತರಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಮುಂಗಾರು ತಡವಾಗದರೂ ಚುರುಕುಗೊಂಡು ಕೇರಳದ ವೈನಾಡು ಸೇರಿ ಜಲಾಶ ಯದ ಹಿನ್ನೀರು ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆ ಯಾದ ಪರಿಣಾಮ ಜಲಾಶಯ ಭರ್ತಿಗೆ ಸನಿಹವಾಗಿದೆ.
ಖಾರೀಫ್ ಬೆಳೆಗೆ ನೀರು ? ಸಾಧ್ಯತೆ, ರೈತರ ಮುಖದಲ್ಲಿ ಮಂದಹಾಸ: ಜಲಾಶಯ ಭರ್ತಿ ಯಾಗುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ಬಲದಂಡೆ ನಾಲೆಯ 1.15 ಲಕ್ಷ ಎಕ್ಟೇರ್, ಎಡದಂಡೆ ನಾಲೆಯ 3 ಸಾವಿರ ಎಕ್ಟೇರ್ ಪ್ರದೇಶದ ರೈತರ ಗದ್ದೆಗಳ ಖಾರೀಫ್ ಬೆಳೆಗೆ ನೀರು ಸಿಗುವ ಸಾಧ್ಯತೆ ಅಶಾಭಾವನೆ ಮೂಡಿದೆ, ಇದರಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ಅಚ್ಚುಕಟ್ಟು ಪ್ರದೇಶದ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಅಧಿಕಾರಿಗಳ ನಿಲ್ಲದ ಕಣ್ಣಮುಚ್ಚಾಲೇ: ಇನ್ನೂ ಜಲಾಶಯ ಭರ್ತಿಗೆ ಕೆಲವೇ ಅಡಿಗಳು ಮಾತ್ರ ಬಾಕಿಯಿದೆ, ಹಿನ್ನೀರು ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯದಿಂದ ಸುಭಾಷ್ ವಿದ್ಯುತ್ ಘಟಕದ ಮೂಲಕ 2.5 ಸಾವಿರ ಕ್ಯೂಸೆಕ್‌ಗೂ ನೀರನ್ನು ಮುಂಭಾಗದ ನದಿಗೆ ಹರಿಸಲಾಗುತ್ತಿದೆ, ಅದರೆ ಇದೇ ಪ್ರಮಾಣದ ನೀರು ಹರಿಸಬಹುದಾದ ಸಾಮರ್ಥ್ಯ ಇರುವ ಬಲದಂಡೆ ನಾಲೆ ಮೂಲಕ ಹರಿಸಿದರೇ ಅಚ್ಚುಕಟ್ಟು ಪ್ರದೇಶದ ಕೆರೆ ಕೆಟ್ಟೆಗಳು ತುಂಬಿ ಆದೆ ನೀರು ಕಿರು ನಾಲೆಗಳ ಮೂಲಕ ಮುಂಭಾಗದ ನದಿ ಸೇರುತ್ತದೆ. ಹೀಗೆ ಮಾಡಿದರೆ ನದಿಗೂ ನೀರು ಹರಿಸದಂತಾಗುತ್ತದೆ, ಕೆರೆ ಕಟ್ಟೆಗಳು ತುಂಬಿ ರೈತರ ಹೊಲ ಗದ್ದೆಗಳಲ್ಲಿರುವ ಕಳವೆ ಬಾವಿಗಳ ಅಂತರ್ಜಲದ ಪ್ರಮಾಣವೂ ವೃದ್ಧಿಯಾಗುತ್ತದೆ, ಅದರೆ ಇಲ್ಲಿನ ಅಧಿಕಾರಿಗಳು ಸುಭಾಷ್ ಪವರ್‌ನ ಅಧಿಕಾರಿಗಳು ನೀಡುವ ಹಣದಾಸೆಗೆ ಜೋತು ಬಿದ್ದು ಸುಭಾಷ್ ವಿದ್ಯುತ್ ಘಟಕದ ಮೂಲಕ ನೀರು ಹರಿಸುವ ಮೂಲಕ ರೈತರ ಹಿತ ಕಾಯುತ್ತಿಲ್ಲ ಎಂದು ಅಚ್ಚುಕಟ್ಟು ಪ್ರದೇಶದ ರೈತರು ಆರೋಪಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೇರಳದ ವೈನಾಡು ಮತ್ತು ಕಬಿನಿ ಅಣೆಕಟ್ಟು ಹಿನ್ನೀರು ವ್ಯಾಪ್ತಿಯಲ್ಲಿ ಕಳೆದ ಒಂದು ವಾರ ದಿಂದ ಸತತ ಮಳೆ ಆರ್ಭಟಿಸುತ್ತಿದೆ, ಜಲಾ ಶಯ ಇನ್ನೂ ಮೂರ್‍ನಾಲ್ಕು ದಿನದಲ್ಲಿ ಭರ್ತಿ ಆಗಲಿದೆ, ಈ ಬಾರಿ ಖಾರೀಫ್ ಬೆಳೆಗೆ ನೀರು ಸಿಗುವ ಸಾಧ್ಯತೆ ಇರುವುದರಿಂದ ಸಹಜವಾಗಿ ಅಚ್ಚುಕಟ್ಟು ರೈತರಾದ ನಮಗೆ ಖುಷಿ ಇದೆ.
● ಪುಟ್ಟಬಸವನಾಯ್ಕ, ರೈತ
ಕೇರಳದ ವೈನಾಡು ಪ್ರದೇಶ ಸೇರಿದಂತೆ ಹಿನ್ನಿರು ವ್ಯಾಪ್ತಿಯಲ್ಲೂ ಒಂದು ವಾರ ದಿಂದಲೂ ಸತತ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ 13 ಸಾವಿರ ಕ್ಯೂಸೆಕ್ ಗೂ ಹೆಚ್ಚಿನ ನೀರು ಬರುತ್ತಿರುವುದರಿಂದ ಸಂಗ್ರಹ ಮಟ್ಟ 2276.77 ಅಡಿಗಳಿಗೆ ಏರಿಕೆಯಾಗಿದೆ. ಇದೆ ರೀತಿ ಮಳೆಯಾದರೆ ಜಲಾಶಯ ನಾಲ್ಕೈದು ದಿನಗಳಲ್ಲಿ ಭರ್ತಿಯಾಗುವ ಸಾಧ್ಯತೆಯಿದೆ.
● ಜನಾರ್ದನ್. ಸಹಾಯಕ ಕಾರ್ಯಪಾಲ
-ಬಿ.ನಿಂಗಣ್ಣಕೋಟೆ