ಮೂಡಲಗಿ: ರಾಕ್ಷಸಿ ಕೃತ್ಯವೊಂದು ಪಟ್ಟಣದಲ್ಲಿ ಶುಕ್ರವಾರದಂದು ಬೆಳಕಿಗೆ ಬಂದಿದ್ದು, ಹಳ್ಳದಲ್ಲಿ ಪತ್ತೆಯಾಗಿದ್ದು ಒಂದಲ್ಲ, ಎರಡರಲ್ಲ, ಏಳು ಭ್ರೂಣಗಳ ಪತ್ತೆಯಾಗಿದ್ದು, ಇಡೀ ಬೆಳಗಾವಿ ಜಿಲ್ಲೆ ಜನರನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಭ್ರೂಣಗಳ ಹತ್ಯೆಗೈದವರು ಯಾರು? ಹಳ್ಳದಲ್ಲಿ ಎಸೆದವರು ಯಾರು? ಎಂಬುದೇ ನಿಗೂಢವಾಗಿದೆ.
ಮೂಡಲಗಿ ಪಟ್ಟಣದ ಬಸ್ ನಿಲ್ದಾಣ ಹತ್ತಿರದ ಹಳ್ಳದಲ್ಲಿ ೭ ಭ್ರೂಣಗಳನ್ನು ಐದು ಡಬ್ಬಗಳಲ್ಲಿ ಪತ್ತೆಯಾಗಿವೆ. ಇದನ್ನು ಗಮನಿಸಿದ ಸ್ಥಳೀಯರು ಮೂಡಲಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಭ್ರೂಣಗಳನ್ನು ಹಳ್ಳದಿಂದ ಹೊರತೆಗೆದು ಸ್ಥಳೀಯ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸ್ಥಳೀಯ ಆರೋಗ್ಯಾಧಿಕಾರಿಗಳು, ಮೂಡಲಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಬೆಳಗಾವಿಯ ಡಿಹೆಚ್‌ಒ ಡಾ.ಮಹೇಶ್ ಕೋಣಿ ದೌಡಾಯಿಸಿ, ಇನ್ನು ಪ್ರಕರಣ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೂಡಲಗಿ ಪಟ್ಟಣದ ಸೇತುವೆ ಕೆಳಗೆ ಐದು ಡಬ್ಬಿಯಲ್ಲಿ ಏಳು ಭ್ರೂಣಗಳು ಪತ್ತೆಯಾಗಿವೆ. ಸ್ಥಳೀಯ ಆರೋಗ್ಯಾಧಿಕಾರಿಗಳನ್ನು ಸ್ಥಳಕ್ಕೆ ಭೇಟಿ ನೀಡಿದ್ದು, ಪುರಸಭೆಯವ ಕಡೆಯಿಂದ ಪೊಲೀಸರಿಗೆ ದೂರು ನೀಡಲಾಗುವುದು. ಶುಕ್ರವಾರ ಬೆಳಗ್ಗೆ 10.30 ಕ್ಕೆ ನಮಗೆ ಗೊತ್ತಾದ ಮೇಲೆ ಸ್ಥಳಕ್ಕೆ ಸಿಬ್ಬಂದಿಗಳನ್ನು ಕಳುಹಿಸಿದೆ ಎಂದರು.
ಇದು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಎಂದು ಹೇಳಬಹುದು. ಫೋಟೋ ನೋಡಿದ್ರೆ ಪತ್ತೆಯಾದ ಭ್ರೂಣಗಳು ಐದು ತಿಂಗಳು ತುಂಬಿದ ಹಾಗೇ ಕಾಣುತ್ತಿದೆ. ಈಗಾಗಲೇ ಸ್ಥಳೀಯ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಕೇಸ್ ದಾಖಲಾದ ಬಳಿಕ ಅವುಗಳನ್ನ ಬೆಳಗಾವಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ತಂದು ಪರೀಕ್ಷೆ ನಡೆಸಲಾಗುವುದು. ಇದನ್ನ ಯಾರು ಮಾಡಿದ್ದಾರೆ, ಎಲ್ಲಿಂದ ಬಂದಿದ್ದು ಎಂಬ ಬಗ್ಗೆ ತನಿಖೆ ಮಾಡಲಾಗುವುದು. ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಒಂದು ತನಿಖಾ ತಂಡ ರಚನೆ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಪಟ್ಟಣದಲ್ಲಿ ಏಳು ಭ್ರೂಣಲಿಂಗಳು ಪತ್ತೆಯಾದ ಸುದ್ದಿ ಹರಡುತ್ತಿದ್ದಂತೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಶಿಕ್ಷಾರ್ಹ ಅಪರಾಧವಾಗಿದ್ದರೂ ಈ ರೀತಿ ಒಂದೇ ಸ್ಥಳದಲ್ಲಿ ಏಳು ಭ್ರೂಣಗಳು ಪತ್ತೆಯಾಗಿದ್ದು ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಪೊಲೀಸರ ಸಹಾಯದೊಂದಿಗೆ ಆರೋಪಿಗಳ ಪತ್ತೆಗೆ ಬಲೆ ಬೀಸಿದೆ.
ಮೂಡಲಗಿ ಪಟ್ಟಣದ ಬಸ್ ನಿಲ್ದಾಣದ ಬಳಿಯಲ್ಲಿ ಇರುವ ಹಳ್ಳಿ ಶುಕ್ರವಾರ ಪತ್ತೆಯಾದ ಏಳು ಭ್ರೂಣಗಳನ್ನು ಎಸೆದಿರುವ ಸಂಗತಿಯು ನನ್ನ ಗಮನಕ್ಕೆ ಬಂದಿದೆ. ಇದು ಹೀನ ಕೃತ್ಯವಾಗಿದ್ದು, ಸಮಾಜ ತಲೆ ತಗ್ಗಿಸುವಂತ ಸಂಗತಿಯಾಗಿದ್ದು, ಕಾನೂನು ಬಾಹಿರವಾಗಿ ಮಾಡಿರುವ ವ್ಯಕ್ತಿಗಳನ್ನು ಗುರುತಿಸಲು ಈಗಾಗಲೇ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿರುವೆ. ಈ ತರಹ ಮತ್ತೆ ನಡೆಯದಂತೆ ಆರೋಗ್ಯ ಇಲಾಖೆಯವರು ಕಟ್ಟೆಚ್ಚರ ವಹಿಸಬೇಕು ಎಂದು ಸೂಚಿಸಿರುವೆ.
ಬಾಲಚಂದ್ರ ಜಾರಕಿಹೊಳಿ, ಕೆಎಮ್‌ಎಫ್ ಅಧ್ಯಕ್ಷ, ಅರಭಾವಿ ಶಾಸಕ