ದಾವಣಗೆರೆ: ದಲಿತ ವಿದ್ಯಾರ್ಥಿಗಳು ಸಮಾಜದ ಏಳಿಗೆಗೆ ದುಡಿಯಲು ಅಂಬೇಡ್ಕರ್, ಬುದ್ಧ, ವಚನಕಾರರ ಹಾದಿ ತುಳಿಯುವುದಾದರೆ ತಮ್ಮ ಮೋಜು ಮರೆಯಬೇಕು ಎಂದು ಪ್ರೊ| ಸಿ.ಕೆ. ಮಹೇಶ್ ಅಭಿಪ್ರಾಯಪಟ್ಟಿದ್ದಾರೆ. ರೋಟರಿ ಬಾಲಭವನದಲ್ಲಿ ಗುರುವಾರ ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಮಿತಿ, ಸಂವಿಧಾನ ಸಮರ್ಪಣಾ ದಿನದ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ದಲಿತ ಸಮುದಾಯ ಇಂದಿಗೂ ಸಹ ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿದೆ.
ಇದರ ನಿವಾರಣೆಗೆ ಹೋರಾಟಗಳು ಬೇಕಿದೆ. ಆದರೆ, ಹೋರಾಟಕ್ಕೆ ಇಳಿಯುವವರು ಬುದ್ಧ, ಬಸವಾದಿ ಶರಣರು, ಅಂಬೇಡ್ಕರರ ದಾರಿಯಲ್ಲಿ ಸಾಗಬೇಕಿದೆ. ಹಾಗೆ ಸಾಗಲು ನಿಮ್ಮ ವೈಯುಕ್ತಿಕ ಮೋಜು ಬಿಡಬೇಕು ಎಂದರು. ದಲಿತ ಹೋರಾಟಗಾರರು ತಮ್ಮ ಕುಟುಂಬ ಸಾಕುವ ಜೊತೆ ಜೊತೆಗೆ ಸಮಾಜ, ಸಮುದಾಯದ ಒಳಿತಿಗೆ ದುಡಿಯಬೇಕು. ಬುದ್ಧ, ಬಸವ, ಅಂಬೇಡ್ಕರರು ತಮ್ಮ ಪ್ರತೀ ಕೆಲಸವನ್ನು ಸಮುದಾಯಕ್ಕೆ ಮೀಸಲಿಟ್ಟರು. ದಮನಿತರು, ಶೋಷಿತರ ಒಳಿತಿಗೆ ಹಗಲಿರುಳು ಶ್ರಮಿಸಿದರು.
ಅಂತಹ ಮಹಾನ್ ನಾಯಕರ ಹಾದಿ ತುಳಿಯುವುದು ಇಂದು ನಿಮ್ಮೆಲ್ಲರ ಅನಿವಾರ್ಯತೆ. ಇಂದು ನೀವು ಇಟ್ಟಿರುವ ಹೆಜ್ಜೆ ಆರಂಭವಷ್ಟೇ. ಮುಂದೆ ಸಾಗುವ ದೃಢ ನಿಶ್ಚಯ ಹೊಂದಿ ಎಂದು ಅವರು ಕಿವಿಮಾತು ಹೇಳಿದರು. ನಮ್ಮ ದೇಶಕ್ಕೆ ಸ್ವಾತಂತ್ರ ಬಂದು 70 ವರ್ಷ ಕಳೆದರೂ ಸ್ಥಿತಿ ಬದಲಾಗಿಲ್ಲ. ಇರುವ ಸಂಪತ್ತಿನ ಶೇ.60ರಷ್ಟು ಆದಾಯ, ಆಸ್ತಿಯನ್ನು ಶೇ.1ರಷ್ಟು ಜನ ಮಾತ್ರ ಅನುಭವಿಸುತ್ತಿದ್ದಾರೆ. ಶೇ.85ರಷ್ಟು ಜನ ಇಂದಿಗೂ ಬಡತನದಲ್ಲಿಯೇ ಇದ್ದಾರೆ.
ಅದರಲ್ಲೂ ಶೇ.50ರಷ್ಟು ಸರ್ಕಾರವೇ ವಿಧಿಸಿರುವ ಬಡತನ ರೇಖೆಗಿಂತ ಕೆಳಗಿದ್ದಾರೆ. ಅಂಬೇಡ್ಕರ್‌ರ ಸಂವಿಧಾನದಿಂದ ಸಿಕ್ಕ ಮೀಸಲಾತಿ ಲಾಭ ಪಡೆದುಕೊಂಡ ಶೇ.0.1ರಷ್ಟು ಹಿಂದುಳಿದವರು ಇದೀಗ ಒಂದಿಷ್ಟು ಸುಧಾರಣೆ ಕಂಡಿದ್ದಾರೆ. ಆದರೆ, ಸಂಪೂರ್ಣ ಸುಧಾರಣೆ ಇನ್ನೂ ಆಗಿಲ್ಲ ಎಂದು ಅವರು ತಿಳಿಸಿದರು. ಇಷ್ಟು ವರ್ಷ ದೇಶ ಆಳಿದ ಯಾವ ಸರ್ಕಾರವೂ ಸಂವಿಧಾನದ ಆಶಯಗಳನ್ನು ಪೂರ್ಣವಾಗಿ ಜಾರಿಮಾಡಿಲ್ಲ.
ಅಂಬೇಡ್ಕರ್ ರಚಿತ ಸಂವಿಧಾನದ ಆಶಯ ಸಕಾರಗೊಳಿಸುವ ಬಹು ದೊಡ್ಡ ಹೊಣೆಗಾರಿಕೆ ದಲಿತ ವಿದ್ಯಾರ್ಥಿಗಳ ಮೇಲಿದೆ. ಆದ್ದರಿಂದ ವಿದ್ಯಾರ್ಥಿಗಳು ಸಂಘಟಿತರಾಗಬೇಕು. ಶಿಕ್ಷಣ ಪಡೆಯುವ ಮೂಲಕ ಕುಟುಂಬ, ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಸಲಹೆ ನೀಡಿದರು. ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯ ಡಾ| ಎಚ್. ವಿಶ್ವನಾಥ್ ಮಾತನಾಡಿ, ಅಂಬೇಡ್ಕರ್ ಶಿಕ್ಷಣವೆಂಬ ಅಸ್ತ್ರದ ಮೂಲಕ ವಿಶ್ವದ ಎಲ್ಲಾ ಕಾನೂನು ಅಧ್ಯಯನ ಮಾಡಿ, ದೇಶಕ್ಕೆ ಇಷ್ಟು ದೊಡ್ಡ ಸಂವಿಧಾನ ನೀಡಿದ್ದಾರೆ.
ಆದರೆ, ದಲಿತರಿಗೆ ರಕ್ಷಣೆ ಇಲ್ಲವಾಗಿದೆ. ನಿರಂತರವಾಗಿ ದಲಿತರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಇದನ್ನು ತಡೆಯಲು ಸಂವಿಧಾನದ ಜೊತೆಗೆ ನಮ್ಮ ಜನರಲ್ಲಿ ಜ್ಞಾನ ಬೆಳೆಯಬೇಕಾದ ಅನಿವಾರ್ಯತೆ ಇದೆ. ಸರ್ಕಾರದ ಕಿವಿ ಹಿಂಡುವ ಮಟ್ಟಕ್ಕೆ ನಮ್ಮ ಜನರು ಬೆಳೆಯಬೇಕಿದೆ ಎಂದರು. ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಎಚ್.ಬಿ. ಮಂಜುನಾಥ್ ಕಬ್ಬೂರು, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಚ್. ಮಲ್ಲೇಶ್, ವರದಿಗಾರರ ಕೂಟದ ಜಿಲ್ಲಾಧ್ಯಕ್ಷ ಬಸವರಾಜ್ ದೊಡ್ಮನಿ, ಚಿಂತಕ ಮರುಡಪ್ಪ, ತಿಪ್ಪಣ್ಣ ಕತ್ತಲಗೆರೆ, ಸಿದ್ರಾಮಣ್ಣ ಬುಳ್ಳಸಾಗರ ಇತರರು ವೇದಿಕೆಯಲ್ಲಿದ್ದರು.