ಮುಂಬಯಿ:ಮಹಾರಾಷ್ಟ್ರದ ಥಾಣೆಯ ಉಲ್ಲಾಸ್ ನಗರದಲ್ಲಿ ವಸತಿ ಕಟ್ಟಡದ ಸ್ಲ್ಯಾಬ್ ಕುಸಿದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದು, ಒಂಬತ್ತು ಮಂದಿ ಅವಶೇಷಗಳಡಿ ಸಿಲುಕಿರುವ ಘಟನೆ ಶುಕ್ರವಾರ(ಮೇ 28) ನಡೆದಿದೆ ಎಂದು ವರದಿ ತಿಳಿಸಿದೆ.
ನೆಹರು ಚೌಕ್ ಪ್ರದೇಶದಲ್ಲಿರುವ ಐದು ಅಂತಸ್ತಿನ ಸಾಯಿ ಸಿದ್ಧಿ ಕಟ್ಟಡದ ಸ್ಲ್ಯಾಬ್ ಕುಸಿದು ಬಿದ್ದಿರುವ ಘಟನೆ ನಡೆದಿದೆ ಎಂದು ಉಲ್ಲಾಸ್ ನಗರ್ ಮುನ್ಸಿಪಲ್ ಕಾರ್ಪೋರೇಶನ್ ಅಧಿಕಾರಿಗಳು ತಿಳಿಸಿದ್ದಾರೆ.
ವಸತಿ ಸಮುಚ್ಛಯದ ಐದನೇ ಅಂತಸ್ತಿನ ಸ್ಲ್ಯಾಬ್ ಕುಸಿದು ಬಿದ್ದ ಪರಿಣಾಮ 8-9 ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆಗಾಗಿ ಅಗ್ನಿಶಾಮಕ ದಳ ಮತ್ತು ಎನ್ ಡಿಆರ್ ಎಫ್ ತಂಡ ಆಗಮಿಸಿರುವುದಾಗಿ ವರದಿ ತಿಳಿಸಿದೆ.
ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಏಳು ಮಂದಿಯನ್ನು ಹೊರತೆಗೆಯಲಾಗಿದ್ದು, ಎಲ್ಲರೂ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಅವಶೇಷಗಳ ಅಡಿ ಎಷ್ಟು ಮಂದಿ ಸಿಲುಕಿದ್ದಾರೆ ಎಂಬುದು ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ.
ಮೇ 15ರಂದು ಉಲ್ಲಾಸ್ ನಗರದಲ್ಲಿನ ವಸತಿ ಸಮುಚ್ಛಯದ ಸ್ಲ್ಯಾಬ್ ಕುಸಿದು ಬಿದ್ದು ಐವರು ಸಾವನ್ನಪ್ಪಿರುವ ಘಟನೆ ನಡೆದಿತ್ತು. ಇದು ಈ ತಿಂಗಳಲ್ಲಿ ನಡೆದ ಎರಡನೇ ಘಟನೆಯಾಗಿದೆ ಎಂದು ವರದಿ ತಿಳಿಸಿದೆ.