ನವದೆಹಲಿ: ವಿದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಏಳು ದಿನಗಳ ಹೋಂ ಕ್ವಾರಂಟೈನ್ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಶುಕ್ರವಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.
ಅದು ಜ.11ರಿಂದ ಜಾರಿಯಲ್ಲಿರಲಿದೆ. 19 ದೇಶಗಳನ್ನು ಹೈ ರಿಸ್ಕ್ ದೇಶಗಳೆಂದು ಪರಿಗಣಿಸಲಾಗಿದ್ದು, ಅಲ್ಲಿಂದ ಬರುವ ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ ಏಳು ದಿನಗಳ ಕಾಲ ಹೋಂ ಕ್ವಾರಂಟೈನ್ ಆಗಬೇಕು. ಎಂಟನೇ ದಿನ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು. ಒಂದು ವೇಳೆ ಆ ಪರೀಕ್ಷೆಯಲ್ಲಿ ಕೊರೊನಾ ದೃಢಪಟ್ಟರೆ ಅವರನ್ನು ಕೊರೊನಾ ಐಸೋಲೇಷನ್ ಕೇಂದ್ರಕ್ಕೆ ಕಳುಹಿಸಲಾಗುವುದು.
ವಿಮಾನದಲ್ಲಿ ಅವರೊಂದಿಗೆ ಕುಳಿತವರು ಹಾಗೂ ವಿಮಾನದ ಸಿಬ್ಬಂದಿಯನ್ನು ಸೋಂಕಿತರ ಪ್ರಾರ್ಥಮಿಕ ಸಂಪರ್ಕ ಎಂದು ಪರಿಗಣಿಸಲಾಗುವುದು. ಒಂದು ವೇಳೆ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಕೊರೊನಾ ದೃಢವಾಗದಿದ್ದರೆ, ಅವರು ಇನ್ನೂ ಏಳು ದಿನಗಳ ಕಾಲ ಸ್ವಯಂ ಮೇಲ್ವಿಚಾರಣೆಗೆ ಒಳಗಾಗಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲಕ್ಕೆ ಕೃಷ್ಣಾಪುರ ಮಠಾಧೀಶರ ಭೇಟಿ
ಹಾಗೆಯೇ ಹೈ ರಿಸ್ಕ್ ಅಲ್ಲದ ದೇಶಗಳಿಂದ ಬರುವ ಪ್ರಯಾಣಿಕರಲ್ಲಿ ಪ್ರತಿ ವಿಮಾನದ ಶೇ.2 ಪ್ರಯಾಣಿಕರನ್ನು ರ್‍ಯಾಂಡಮ್ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುವುದು. ಅವರೂ ಕೂಡ ಹೈ ರಿಸ್ಕ್ ದೇಶಗಳ ಪ್ರಯಾಣಿಕರಿಗಿರುವ ಮಾರ್ಗಸೂಚಿಯನ್ನು ಅನುಸರಿಸಬೇಕೆಂದು ಮಾರ್ಗಸೂಚಿಯಲ್ಲಿ ಪ್ರಕಟಿಸಲಾಗಿದೆ.