ಮುಂಬೈ: ಮಹಾರಾಷ್ಟ್ರದಲ್ಲಿ ಶುಕ್ರವಾರ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 100 ರ ಗಡಿಯನ್ನು ದಾಟಿದ ಹಿನ್ನೆಲೆಯಲ್ಲಿ, ಗ್ರೇಟರ್ ಮುಂಬೈ ಮಹಾನಗರ ಪಾಲಿಕೆಯು ದುಬೈನಿಂದ ಆಗಮಿಸುವ ಮುಂಬೈ ನಿವಾಸಿಗಳಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯೊಂದಿಗೆ ಏಳು ದಿನಗಳ ಹೋಮ್ ಕ್ವಾರಂಟೈನ್‌ಗೆ ಒಳಗಾಗುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ಶುಕ್ರವಾರ ಬಿಎಮ್ ಸಿ ಹೊರಡಿಸಿದ ಆದೇಶದಲ್ಲಿ, ದುಬೈನಿಂದ ಹಿಂದಿರುಗುವ ಪ್ರಯಾಣಿಕರು ಏಳನೇ ದಿನದಂದು ಕಡ್ಡಾಯವಾಗಿ ಆರ್ ಟಿಪಿಸಿಆರ್ ಪರೀಕ್ಷೆಯನ್ನು ಮಾಡಿಸಿಬೇಕು ಎಂದಿದೆ.
ಒಂದು ವೇಳೆ ಕೋವಿಡ್ ಪಾಸಿಟಿವ್ ಇದ್ದರೆ, ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ವರ್ಗಾಯಿಸಲಾಗುತ್ತದೆ. ಮಹಾರಾಷ್ಟ್ರದ ಇತರ ಭಾಗಗಳಿಂದ ಬರುವ ಪ್ರಯಾಣಿಕರು ಸಾರ್ವಜನಿಕ ಸಾರಿಗೆಯನ್ನು ತೆಗೆದುಕೊಳ್ಳಲು ಅನುಮತಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ಖಚಿತವಾಯಿತು ಚಿಕಿತ್ಸೆ; ಕೋವಿಡ್ ಗೆ ನೀಡುವ ಔಷಧವೇ ಒಮಿಕ್ರಾನ್‌ಗೆ: ಕೇಂದ್ರ
ಈತನ್ಮಧ್ಯೆ, ಒಮಿಕ್ರಾನ್ ರೂಪಾಂತರದ ಭೀತಿಯ ನಡುವೆ ಮುಂಬರುವ ಹಬ್ಬಗಳ ಸಮಯದಲ್ಲಿ ನಿರೀಕ್ಷಿತ ಜನಸಂದಣಿಯ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಸರ್ಕಾರವು ಶುಕ್ರವಾರ ಹೊಸ ಕೋವಿಡ್ 19 ಮಾರ್ಗಸೂಚಿಗಳನ್ನು ಹೊರಡಿಸಿದ್ದು, ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಐದಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ಸೇರುವುದನ್ನು ನಿಷೇಧಿಸಿದೆ. ಈ ಕ್ರಮಗಳು ಡಿಸೆಂಬರ್ 24-25 ರ ಮಧ್ಯ ರಾತ್ರಿಯಿಂದ ಅನ್ವಯಿಸುತ್ತದೆ.