ಕಲಬುರಗಿ: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ಟ್ರಕ್ ಸಮೇತ 7.8 ಟನ್‌ಗೂ ಅಧಿಕ ಅಕ್ಕಿಯನ್ನು ನಗರ ಪೊಲೀಸರು ಜಪ್ತಿ ಮಾಡಿ, ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಲಾರಿ ಚಾಲಕ, ಮಹಾರಾಷ್ಟ್ರದ ಮೂಲದ ಅನಿಲ ರಾಠೊಡ್ ಎಂಬಾತನೇ ಬಂಧಿತ ಆರೋಪಿ.
ಖಚಿತ ಮಾಹಿತಿ ಮೇರೆಗೆ ಸಬ್ ಅರ್ಬನ್ ಠಾಣೆ ಪೊಲೀಸರು ಗುರುವಾರ ರಾತ್ರಿ ಇಲ್ಲಿನ ಗುಲಾಂ ಪರ್ವೇಜ್ ಕಾಲೋನಿ ಗೇಟ್ ಸಮೀಪ ದಾಳಿ ಮಾಡಿ ಟ್ರಕ್ ಪರಿಶೀಲನೆ ಮಾಡಿದಾಗ ಅಕ್ಕಿ ಸಾಗಾಟ ಮಾಡುತ್ತಿರುವುದು ಬಯಲಾಗಿದೆ.
ಗುಲಾಂ ಪರ್ವೇಜ್ ಕಾಲೋನಿಯ ರಹೆನಾ ಬೇಗಂ ಎಂಬುವವರು ಅಕ್ಕಿ ಸಂಗ್ರಹಿಸಿ ಇಟ್ಟಿದ್ದರು. ಈ ಅಕ್ಕಿಯನ್ನು ಟ್ರಕ್ ಮೂಲಕ ಶರಣು ಬೇಳೂರ ಎಂಬಾತ ಸಾಗಾಟ ಮಾಡಿಸುತ್ತಿದ್ದ. ಆದರೆ, ಎಲ್ಲಿಗೆ ಸಾಗಾಟ ಮಾಡಲಾಗುತ್ತಿತ್ತು ಎನ್ನುವ ಕುರಿತು ನಿಖರ ಮಾಹಿತಿ ಸಿಕ್ಕಿಲ್ಲ. ಸದ್ಯ ಬಂಧಿತ ಆರೋಪಿ ಅನಿಲ ಮಹಾರಾಷ್ಟ್ರದ ಮೂಲದ ವ್ಯಕ್ತಿಯಾಗಿರುವುದರಿಂದ ಅಕ್ಕಿಯನ್ನು ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿತ್ತು ಎಂಬ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಹಾರ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಹೆನಾ ಬೇಗಂ, ಶರಣು ಬೇಳೂರ, ಅನಿಲ ರಾಠೊಡ್ ಹಾಗೂ ಟ್ರಕ್ ಮಾಲೀಕನ ವಿರುದ್ಧ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.