ದುಬಾೖ: ತೈಲ ಸಮೃದ್ಧ ರಾಷ್ಟ್ರ ಕತಾರ್, ತನ್ನ ಸ್ವತ್ತುಗಳನ್ನು ವಿದೇಶಿಗರಿಗೆ ಮಾರಾಟಕ್ಕಿಟ್ಟಿದೆ. ಇನ್ನು ಮುಂದೆ ವಿದೇಶಿಯರು ಕತಾರ್‌ನಲ್ಲಿ ಮನೆ ಅಥವಾ ಅಂಗಡಿಗಳನ್ನು ಖರೀದಿಸಿದರೆ ಆ ರಾಷ್ಟ್ರದ ನಿವಾಸಿಯಾಗುವ ಹಕ್ಕು ಪಡೆಯುವ ಅವಕಾಶ ಕಲ್ಪಿಸಲಾಗಿದೆ.
ಇಂಧನ ಮಾರಾಟದ ಆದಾಯದ ಮೇಲೆಯೇ ಬಹುತೇಕ ಅವಲಂಬಿತವಾಗಿರುವ ಕತಾರ್, ವಿದೇಶಿ ಹೂಡಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸುವ ಮೂಲಕ ತನ್ನ ಆರ್ಥಿಕತೆಯನ್ನು ವೈವಿಧ್ಯಗೊಳಿಸುವ ಗುರಿ ಹೊಂದಿದೆ ಎನ್ನಲಾಗಿದೆ.
ಈ ಹಿಂದೆ, ವ್ಯಕ್ತಿಯೊಬ್ಬ ಕತಾರ್‌ನ ನಿವಾಸಿಯಾಗಬೇಕೆಂದರೆ, ಆತನಿಗೆ ಅಲ್ಲಿನ ಉದ್ಯಮ ಅಥವಾ ವ್ಯಕ್ತಿಗಳು ಪ್ರಾಯೋಜಕರಾಗಬೇಕಿತ್ತು. ಆದರೆ, ಈಗ ಯಾರು ಬೇಕಾದರೂ 1.48 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿಸಿದರೆ, ಆ ಸೊತ್ತಿನ ಮಾಲಕತ್ವದ ಅವಧಿ ಮುಗಿಯುವ ವರೆಗೂ ತಾತ್ಕಾಲಿಕ ನಿವಾಸಿಯಾಗಬಹುದಾಗಿದೆ. ಒಂದು ವೇಳೆ ನೀವು ಕತಾರ್‌ನ ಖಾಯಂ ನಿವಾಸಿಯಾಗಲು, ಅಲ್ಲಿನ ಉಚಿತ ಆರೋಗ್ಯ ಸೇವೆ ಹಾಗೂ ಶಿಕ್ಷಣವನ್ನು ಬಯಸಿದರೆ, 7.4 ಕೋಟಿ ರೂಪಾಯಿಗಳ ಆಸ್ತಿ ಖರೀದಿಸಬೇಕು.
ಇದೇ ರೀತಿಯ ಅವಕಾಶ ಗಲ್ಫ್ ಇತರ ಭಾಗಗಳಲ್ಲೂ ಇದೆಯಾದರೂ, ಅದು ಇನ್ನೂ ದುಬಾರಿ. ದುಬಾೖಯಲ್ಲಿ ನೀವು 10 ವರ್ಷ ನಿವಾಸಿ ವೀಸಾ ಪಡೆಯಲು ಬಯಸಿದರೆ 20 ಕೋಟಿ ರೂಪಾಯಿಗಳಷ್ಟು ಹೂಡಿಕೆ ಮಾಡಬೇಕು. ಇದರಲ್ಲಿ 40 ಪ್ರತಿಶತದಷ್ಟು ಹಣವನ್ನು ಸ್ಥಿರಾಸ್ತಿ ಖರೀದಿಗೆ ವಿನಿಯೋಗಿಸಬೇಕು. ಆದರೆ ಈ ರೀತಿಯ ನಿಯಮಗಳು ಜಾಗತಿಕವಾಗಿ ಟೀಕೆಗೂ ಒಳಗಾಗುತ್ತವೆ. ಭ್ರಷ್ಟರು ಮತ್ತು ಮನಿ ಲಾಂಡರಿಂಗ್ ಮಾಡುವವರನ್ನು ಇವು ಸೆಳೆಯುತ್ತವೆ ಎನ್ನುವ ಆರೋಪವಿದೆ.