ಹಿರೇಕೆರೂರ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಿರೇಕೆರೂರ-ರಟ್ಟಿಹಳ್ಳಿ ತಾಲೂಕಿನ 13 ಕಾಮಗಾರಿಗಳಿಗೆ ಕರ್ನಾಟಕ ನೀರಾವರಿ ನಿಗಮದಿಂದ 7.20 ಕೋಟಿ ರೂ. ಮಂಜೂರಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.
ಇಲ್ಲಿನ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಸೇವಾಲಾಲ್ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ., ಬೀರೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ., ಉಪ್ಪಾರ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ., ಗಂಗಾಮತ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ., ಮಡಿವಾಳ ಮಾಚಿದೇವ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ., ಚಿಕ್ಕೇರೂರು ಗ್ರಾಮದಲ್ಲಿ ವೀರಭದ್ರೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ., ಹೊಸಕಟ್ಟೆ ಗ್ರಾಮದಲ್ಲಿ ಬಸವೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ., ಮಡ್ಲೂರು ಗ್ರಾಮದಲ್ಲಿ ಮುರುಘಾಮಠ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ., ಮೇದೂರು ಗ್ರಾಮದ ಬಸವೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ ರೂ. ಮಂಜೂರಾಗಿದೆ ಎಂದು ತಿಳಿಸಿದರು.
ಚಟ್ನಳ್ಳಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ 50 ಲಕ್ಷ ರೂ., ಚಟ್ನಳ್ಳಿ ಗ್ರಾಮದ ಆಂಜನೇಯ ಸಮುದಾಯ ಭವನಕ್ಕೆ 50 ಲಕ್ಷ ರೂ., ಚಟ್ನಳ್ಳಿ ಗ್ರಾಮದಲ್ಲಿ ರೈತ ಸಂಪರ್ಕ ರಸ್ತೆಗೆ 70 ಲಕ್ಷ ರೂ. ಹಾಗೂ ಪುರದಕೇರಿ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದ ಸಮೀಪ ತಡೆಗೋಡೆ ನಿರ್ಮಾಣಕ್ಕೆ 50 ಲಕ್ಷ ರೂ. ಮಂಜೂರಾಗಿದೆ ಎಂದು ವಿವರಿಸಿದರು.
ರಾಜ್ಯದ ಜನತೆಯ ಆಶೀರ್ವಾದದಿಂದ ಕೋವಿಡ್ ಸೋಂಕಿನಿಂದ ಗುಣಮುಖನಾಗಿದ್ದೇನೆ. ತಾಲೂಕಿನ ಜನತೆ ನಾನು ಗುಣಮುಖನಾಗಲೆಂದು ಪೂಜೆ, ಪುನಸ್ಕಾರ ಮಾಡಿದ್ದಾರೆ. ತಾಲೂಕಿನ ಜನತೆಯ ಋಣ ತೀರಿಸಲು ವೈಯಕ್ತಿಕವಾಗಿ ಸುಮಾರು 40 ಲಕ್ಷ ರೂ. ಮೌಲ್ಯದ 2.50 ಲಕ್ಷ ಮಾಸ್ಕ್ ಗಳನ್ನು ತಾಲೂಕಿನ ಜನತೆಗೆ ಪಕ್ಷಾತೀತವಾಗಿ ವಿತರಣೆ ಮಾಡುತ್ತೇವೆ. ಕೋವಿಡ್ ಭಯಪಡುವ ರೋಗವಲ್ಲ. ಬೇರೆ ಕಾಯಿಲೆ ಇದ್ದವರಿಗೆ ತೊಂದರೆಯಾಗಿದೆ. ಜನತೆ ಅನಗತ್ಯವಾಗಿ ಭಯಪಡುವ ಅಗತ್ಯವಿಲ್ಲ ಎಂದರು.
ಬೆಳೆ ಸಮೀಕ್ಷೆ ಯೋಜನೆ ದೇಶದಲ್ಲಿಯೇ ಪ್ರಥಮ. ಪ್ರಧಾನಮಂತ್ರಿ ಕಾರ್ಯಾಲಯ ಕೂಡ ಈ ಯೋಜನೆ ಪ್ರಶಂಸೆ ಮಾಡಿದೆ. ರೈತ ತನ್ನ ಬೆಳೆಗೆ ತಾನೇ ಪ್ರಮಾಣ ಪತ್ರ ಕೊಟ್ಟುಕೊಳ್ಳುವ ವ್ಯವಸ್ಥೆ ಜಾರಿಗೊಳಿಸಿದ್ದೇವೆ. ಬೆಳೆ ವಿಮೆ, ಬೆಂಬಲ ಬೆಲೆ, ಅತಿವೃಷ್ಟಿ, ಅನಾವೃಷ್ಟಿಗೆ 24 ರ ವರೆಗೆ ಜಾರಿಯಲ್ಲಿರುತ್ತದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾಗಿನೆಲೆ, ಕೂಡಲಸಂಗಮ ಮಾದರಿಯಲ್ಲಿ ಸರ್ವಜ್ಞ ಪ್ರಾಧಿಕಾರದ ಮೂಲಕ ಅಬಲೂರು, ಮಾಸೂರು ಗ್ರಾಮಗಳನ್ನು ಅಭಿವೃದ್ಧಿಪಡಿಸುಡುವ ಉದ್ದೇಶವಿದೆ. ಮದಗ ಮಾಸೂರು ಕೆರೆಯನ್ನು ಪ್ರಾಧಿಕಾರದ ಮೂಲಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಸೃಷ್ಟಿ ಪಾಟೀಲ, ಮಹೇಂದ್ರ ಬಡಳ್ಳಿ, ರವಿಶಂಕರ ಬಾಳಿಕಾಯಿ, ಕೆ.ಜಿ.ಪ್ರತಾಪ ಹಾಜರಿದ್ದರು.