ಹುಬ್ಬಳ್ಳಿ: ಲಾಕ್‌ಡೌನ್ ಹಾಗೂ ಕೋವಿಡ್ ಭೀತಿಯಿಂದ ಪ್ರಯಾಣಿಕರಿಲ್ಲದ ಪರಿಣಾಮ ಸಂಕಷ್ಟದಲ್ಲಿದ್ದ ಬಸ್ ನಿಲ್ದಾಣಗಳ ವಾಣಿಜ್ಯ ಮಳಿಗೆಗಳ ಬಾಡಿಗೆ ಮನ್ನಾ ಹಾಗೂ ವಿನಾಯ್ತಿ ನೀಡುವ ಮೂಲಕ ಅಂಗಡಿಕಾರರ ಹಿತ ಚಿಂತನೆಗೆ ವಾಯವ್ಯ ಸಾರಿಗೆ ಸಂಸ್ಥೆ ಮುಂದಾಗಿದ್ದು, ಕಳೆದ ನಾಲ್ಕು ತಿಂಗಳ 7.15 ಕೋಟಿ ರೂ. ಬಾಡಿಗೆ ಮನ್ನಾ ಮಾಡಿದೆ.
ಸಂಸ್ಥೆಯ ವ್ಯಾಪ್ತಿಯಲ್ಲಿ ಶೇ.63 ಅನುಸೂಚಿಗಳು ಕಾರ್ಯಾಚರಣೆಗೊಳ್ಳುತ್ತಿದೆ. ಕಳೆದ 15 ದಿನದಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡಿದ್ದರೂ ನಿರೀಕ್ಷಿತ ಮಟ್ಟ ತಲುಪಿಲ್ಲ. ಇನ್ನುನಿಲ್ದಾಣಕ್ಕೆ ಬರುವ ಪ್ರಯಾಣಿಕರು ಸೋಂಕಿನ ಭಯದಿಂದ ಅಂಗಡಿ ಹಾಗೂ ಹೋಟೆಲ್‌ಗಳಲ್ಲಿ ವ್ಯಾಪಾರಕ್ಕೆ ಮುಂದಾಗುತ್ತಿಲ್ಲ. ಹೀಗಾಗಿ ದುಬಾರಿ ಬಾಡಿಗೆ ಆಧಾರದಲ್ಲಿ ಅಂಗಡಿಗಳನ್ನು ಗುತ್ತಿಗೆ ಪಡೆದು ಜೀವನ ನಡೆಸುತ್ತಿರುವ ವ್ಯಾಪಾರಿಗಳ ಹಿತ ಚಿಂತನೆ ಕಾಪಾಡುವ ನಿಟ್ಟಿನಲ್ಲಿ ಸಂಸ್ಥೆ ವ್ಯಾಪ್ತಿಯಲ್ಲಿನ ಅಂಗಡಿ, ಕ್ಯಾಂಟೀನ್ ವ್ಯಾಪಾರಿಗಳಿಗೆ ಭಾರೀ ಪ್ರಮಾಣದಲ್ಲಿ ವಿನಾಯಿತಿ ನೀಡಿದೆ.
ವಾಯವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯ 9 ವಿಭಾಗಗಳಲ್ಲಿ 1173 ವಾಣಿಜ್ಯ ಮಳಿಗೆಗಳಿದ್ದು ಇವುಗಳಿಂದ ಪ್ರತಿ ತಿಂಗಳು ಸಂಸ್ಥೆಗೆ 1.83 ಕೋಟಿ ರೂ. ಬಾಡಿಗೆ ರೂಪದಲ್ಲಿ ಆದಾಯವಿದೆ. ಮೂರು ತಿಂಗಳ ಸಂಪೂರ್ಣ ಮನ್ನಾ ಹಾಗೂ ಒಂದು ತಿಂಗಳ ವಿನಾಯಿತಿ ನೀಡಿರುವುದರಿಂದ ಸಂಸ್ಥೆಗೆ 7.15 ಕೋಟಿ ರೂ. ವಾಣಿಜ್ಯ ಆದಾಯ ಖೋತಾಗಿದೆ. ಸಂಕಷ್ಟ ಸ್ಥಿತಿಯಲ್ಲಿ ವ್ಯಾಪಾರಿಗಳ ಬಗ್ಗೆ ಸಂಸ್ಥೆ ಕಾಳಜಿ ತೋರಿದ್ದು, ಏಪ್ರಿಲ್, ಮೇ ಹಾಗೂ ಜುಲೈ ತಿಂಗಳ ಬಾಡಿಯನ್ನು ಶೇ.100 ಮನ್ನಾ ಮಾಡಿದೆ. ಜೂನ್ ತಿಂಗಳ ಬಾಡಿಗೆಯಲ್ಲಿ ಶೇ.10 ಮಾತ್ರ ಪಾವತಿಸುವಂತೆ ಸೂಚಿಸಿದೆ. ಆಗಸ್ಟ್ ತಿಂಗಳಲ್ಲಿ ಅಂಗಡಿಗಳ ಮಾಲೀಕರು ಶೇ.15 ಹಾಗೂ ಕ್ಯಾಂಟಿನ್, ಹೋಟೆಲ್‌ಗಳ ಮಾಲೀಕರು ಶೇ.10 ಮಾತ್ರ ತಿಂಗಳ ಪರವಾನಗಿ ಶುಲ್ಕ (ಬಾಡಿಗೆ) ನೀಡಲು ಅವಕಾಶ ಕಲ್ಪಿಸಲಾಗಿದೆ. ಬಸ್ ನಿಲ್ದಾಣಗಳ ಕ್ಯಾಂಟಿನ್ ಹಾಗೂ ಅಂಗಡಿಗಳ ವ್ಯಾಪಾರ ಇಲ್ಲವಾಗಿದ್ದು, ಶೇ.70 ರಿಂದ 80 ರಷ್ಟು ಬಾಡಿಗೆ ವಿನಾಯಿತಿ ನೀಡಬೇಕೆಂದು ಬಾಡಿಗೆದಾರರು ಮನವಿ ಮಾಡಿದ್ದರು. ಆದರೆ ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಮೂರು ತಿಂಗಳ ಸಂಪೂರ್ಣ ಮನ್ನಾ ಹಾಗೂ ಜೂನ್ ಹಾಗೂ ಆಗಸ್ಟ್ ತಿಂಗಳಲ್ಲಿ ಶೇ.90 ರಿಂದ 85 ರವರೆಗೆ ವಿನಾಯಿತಿ ನೀಡಲಾಗಿದೆ. ಇದರಿಂದ ವ್ಯಾಪಾರವಿಲ್ಲದೆ ಅಂಗಡಿ ಪರವಾನಗಿ ರದ್ದುಪಡಿಸಿ ಠೇವಣಿ ಹಣ ವಾಪಸ್ ನೀಡುವಂತೆ ವಿಭಾಗೀಯ ಕಚೇರಿಗಳಿಗೆ ಅಲೆದಾಡುತ್ತಿದ್ದ ಅಂಗಡಿಕಾರರಿಗೆ ದೊಡ್ಡ ಸಂಕಷ್ಟ ದೂರವಾದಂತಾಗಿದೆ.
ಆಗಸ್ಟ್ ತಿಂಗಳವರೆಗೆ ಮಾತ್ರ ವಿನಾಯಿತಿ ನೀಡಲಾಗಿದ್ದು, ಇದೀಗ ಶೇ.63 ಅನುಸೂಚಿಗಳು ಕಾರ್ಯಾಚರಣೆಗೆ ತಲುಪಿದ್ದರೂ ಪ್ರಯಾಣಿಕರು ವ್ಯಾಪಾರಕ್ಕೆ ಮುಂದಾಗುತ್ತಿಲ್ಲ. ಹೀಗಾಗಿ ಸೆಪ್ಟಂಬರ್ ತಿಂಗಳ ನಂತರದಲ್ಲಿ ಬಾಡಿಗೆ ಕಟ್ಟುವುದಾದರೂ ಹೇಗೆ ? ಯಥಾಸ್ಥಿತಿಗೆ ಬರುವವರೆಗೂ ಒಂದಿಷ್ಟು ವಿನಾಯಿತಿ ನೀಡಬೇಕು ಎನ್ನುವುದು ವ್ಯಾಪಾರಿಗಳ ಅಳಲಾಗಿದೆ. ಆದರೆ ಸಂಸ್ಥೆ ನಷ್ಟದಲ್ಲಿದ್ದು, ಇನ್ನಷ್ಟು ತಿಂಗಳ ವಿನಾಯಿತಿ ಅಥವಾ ಮನ್ನಾ ಮಾಡುವುದರಿಂದ ಮತ್ತಷ್ಟು ನಷ್ಟವಾಗಲಿದೆ ಎಂಬುದು ಸಂಸ್ಥೆ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಲಾಕ್‌ಡೌನ್ ಹಾಗೂ ಪ್ರಯಾಣಿಕರ ಕೊರತೆ ಹಿನ್ನೆಲೆಯಲ್ಲಿ ವ್ಯಾಪಾರಿಗಳಿಗೆ ತೊಂದರೆಯಾಗಬಾರದು ಎನ್ನುವ ಕಾರಣದಿಂದ ವಿನಾಯಿತಿ ಹಾಗೂ ಮನ್ನಾ ನಿರ್ಧಾರ ಕೈಗೊಂಡಂತೆ ಸಂಸ್ಥೆಯ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳ ಪರವಾನಗಿ ಪಡೆದವರಿಗೆ ಈ ಅವಕಾಶ ಕಲ್ಪಿಸಲಾಗಿದೆ. ಇನ್ನೂ ಹೆಚ್ಚಿನ ವಿನಾಯಿತಿ ನೀಡಲು ಬೇಡಿಕೆ ಸಲ್ಲಿಸಿದ್ದಾರೆ. ಮುಂದಿನ ಬೆಳವಣಿಗೆ ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು.
–ಕೃಷ್ಣ ಬಾಜಪೇಯಿ, ವ್ಯವಸ್ಥಾಪಕ ನಿರ್ದೇಶಕ, ವಾಕರಸಾ ಸಂಸ್ಥೆ
ದುಬಾರಿ ಬೆಲೆಯಲ್ಲಿ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಪಡೆದು ಲಾಕ್‌ಡೌನ್ ಹಾಗೂ ಕೋವಿಡ್ ದಿಂದ ವ್ಯಾಪಾರ ಇಲ್ಲದೆ ಸಾಕಷ್ಟು ಸಮಸ್ಯೆಯಲ್ಲಿದ್ದೆವು. ಕೆಲವರು ಅಂಗಡಿಗಳನ್ನು ಬಂದ್ ಮಾಡಿ ಠೇವಣಿ ಪಡೆಯಬೇಕು ಎನ್ನುವ ಚಿಂತನೆ ಮಾಡಿದ್ದರು. ಶೇ.70-80 ವಿನಾಯಿತಿ ನೀಡುವಂತೆ ಮನವಿ ಮಾಡಿದ್ದೆವು. ಆದರೆ ಸಾರಿಗೆ ಸಂಸ್ಥೆಯಿಂದ ಶೇ.90 ವಿನಾಯಿತಿ ದೊರೆತಿರುವುದು ಸಾಕಷ್ಟು ಅನುಕೂಲವಾಗಿದೆ. ಸೆಪ್ಟೆಂಬರ್ ನಂತರದ ಮುಂದೇನು ಎನ್ನುವ ಆತಂಕವೂ ಇದೆ.
–ವೀರೇಶ ಉಪ್ಪಿನ, ವ್ಯಾಪಾರಿ
-ಹೇಮರಡ್ಡಿ ಸೈದಾಪುರ