Advertisement

Explainer;Mumbai ಸರಣಿ ರೈಲು ಸ್ಫೋಟಕ್ಕೆ 17 ವರ್ಷ;ಹೈಕೋರ್ಟ್ ನಲ್ಲಿ ಇನ್ನೂ ವಿಚಾರಣೆ ಬಾಕಿ!

04:00 PM Jul 11, 2023 | Team Udayavani |

ಮುಂಬೈ: ವಾಣಿಜ್ಯ ನಗರಿ ಮುಂಬೈನ ಸ್ಥಳೀಯ ರೈಲುಗಳಲ್ಲಿ ಸಂಭವಿಸಿದ್ದ ಸರಣಿ ಬಾಂಬ್‌ ಸ್ಫೋಟ ಘಟನೆ ನಡೆದು ಬರೋಬ್ಬರಿ 17 ವರ್ಷಗಳು ಕಳೆದಿದೆ. ಆದರೆ ನಾಲ್ವರು ಆರೋಪಿಗಳ ಮರಣದಂಡನೆ ಶಿಕ್ಷೆ ದೃಢಪಡಿಸುವ ವಿಚಾರಣೆ ಇನ್ನೂ ಬಾಂಬೆ ಹೈಕೋರ್ಟ್‌ ನಲ್ಲಿ ಆರಂಭವಾಗಿಲ್ಲ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಚಿಕ್ಕಮಗಳೂರು : ನಾಯಿ ನುಂಗಿ ನರಳುತ್ತಿದ್ದ 15 ಅಡಿ ಉದ್ದದ ಬೃಹತ್ ಹೆಬ್ಬಾವು ರಕ್ಷಣೆ

2006ರ ಜುಲೈ 11ರಂದು ಮುಂಬೈಯ ಪಶ್ಚಿಮ ರೈಲುಗಳಲ್ಲಿ 15 ನಿಮಿಷಗಳ ಅಂತರದಲ್ಲಿ ಸರಣಿ ಬಾಂಬ್‌ ಸ್ಫೋಟ ನಡೆದಿದ್ದು, ಘಟನೆಯಲ್ಲಿ ಒಟ್ಟು 180 ಮಂದಿ ಕೊನೆಯುಸಿರೆಳೆದಿದ್ದರು. ಚರ್ಚ್‌ ಗೇಟ್‌ ಬೊರಿವಲಿ ರೈಲಿನಲ್ಲಿ 6.20ಕ್ಕೆ ಮೊದಲ ಸ್ಫೋಟ ಸಂಭವಿಸಿತ್ತು. ನಂತರ ಅದೇ ಸಮಯಕ್ಕೆ ಬಾಂದ್ರಾ- ಖಾರ್‌ ನಡುವೆ ಸಂಚರಿಸುತ್ತಿದ್ದ ರೈಲಿನಲ್ಲಿ ಸ್ಫೋಟವಾಗಿದ್ದು, ಇನ್ನುಳಿದಂತೆ ಜೋಗೇಶ್ವರಿ, ಮಾಹೀಂ, ಮೀರಾ ರೋಡ್-ಭಯಾಂದರ್‌, ಮಾಟುಂಗಾ-ಮಾಹೀಮ್‌ ಮತ್ತು ಬೊರಿವಲಿ ರೈಲುಗಳಲ್ಲಿ ಸ್ಫೋಟ ಸಂಭವಿಸಿತು.

ಪ್ರಕರಣದ ತನಿಖೆಯನ್ನು ಭಯೋತ್ಪಾದಕ ನಿಗ್ರಹ ದಳಕ್ಕೆ (ATS) ಹಸ್ತಾಂತರಿಸಿದ ಮೇಲೆ ಎಟಿಎಸ್‌ ಇಂಡಿಯನ್‌ ಮುಜಾಹಿದೀನ್‌ ಗೆ ಸೇರಿದ 13 ಜನರನ್ನು ಬಂಧಿಸಿತ್ತು.

ಐವರಿಗೆ ಗಲ್ಲುಶಿಕ್ಷೆ ವಿಧಿಸಿದ ಮೋಕಾ ಕೋರ್ಟ್:‌

Advertisement

2015ರ ಸೆಪ್ಟೆಂಬರ್‌ ನಲ್ಲಿ ವಿಶೇಷ MCOCA ಕೋರ್ಟ್‌ ಐವರು ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ಹಾಊ ಉಳಿದ ಏಳು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಘೋಷಿಸಿತ್ತು. ವಿಚಾರಣಾ ಕೋರ್ಟ್‌ ವಿಧಿಸಿರುವ ಗಲ್ಲುಶಿಕ್ಷೆಯನ್ನು ಹೈಕೋರ್ಟ್‌ ಇನ್ನಷ್ಟೇ ಕಾಯಂಗೊಳಿಸಬೇಕಾಗಿದೆ.

ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೊಳಗಾದ ನಾಲ್ವರು ಆರೋಪಿಗಳಾದ ಮೊಹಮ್ಮದ್‌ ಫೈಸಲ್‌ ಶೇಕ್‌, ಎಹ್ತೇಶಾಮ್‌ ಸಿದ್ದಿಖಿ, ನವೀದ್‌ ಹುಸೈನ್‌ ಖಾನ್‌ ಅಸೀಫ್‌ ಖಾನ್‌ ಗೆ ಗಲ್ಲುಶಿಕ್ಷೆ ಕಾಯಂಗೊಳಿಸುವಂತೆ ಮಹಾರಾಷ್ಟ್ರ ಸರ್ಕಾರ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಒಬ್ಬ ಆರೋಪಿ ಸಾವನ್ನಪ್ಪಿದ್ದ:

ಬಾಂಬ್‌ ಸ್ಪೋಟ ಪ್ರಕರಣದಲ್ಲಿ ಮೋಕಾ ಕೋರ್ಟ್‌ ನಲ್ಲಿ ಮರಣದಂಡನೆ ಶಿಕ್ಷೆಗೊಳಗಾಗಿದ್ದ ಆರೋಪಿಗಳಲ್ಲಿ ಒಬ್ಬನಾದ ಕಮಲ್‌ ಅಹ್ಮದ್‌ ಅನ್ಸಾರಿ 2022ರಲ್ಲಿ ನಾಗ್ಪುರ್‌ ಜೈಲಿನಲ್ಲಿ ಕೋವಿಡ್‌ ನಿಂದ ಕೊನೆಯುಸಿರೆಳೆದಿದ್ದು, ಈ ಹಿನ್ನೆಲೆಯಲ್ಲಿ ಅನ್ಸಾರಿ ವಿರುದ್ಧದ ಪ್ರಕರಣ ರದ್ದುಗೊಂಡಿರುವುದಾಗಿ ವರದಿ ವಿವರಿಸಿದೆ.

ಇನ್ನುಳಿದ ಏಳು ಆರೋಪಿಗಳಾದ ತನ್ವೀರ್‌ ಅಹ್ಮದ್‌ ಅನ್ಸಾರಿ, ಮೊಹಮ್ಮದ್‌ ಮಜೀದ್‌ ಶಫಿ, ಶೇಕ್‌ ಅಲಾಮ್‌ ಶೇಕ್‌, ಮೊಹಮ್ಮದ್‌ ಸಾಜಿದ್‌ ಅನ್ಸಾರಿ, ಮುಝಾಮ್ಮಿಲ್‌ ಶೇಕ್‌, ಸೊಹೈಲ್‌ ಮೆಹಮೂದ್‌ ಶೇಕ್‌ ಮತ್ತು ಜಮೀರ್‌ ಅಹ್ಮದ್‌ ಶೇಕ್‌ ಕೂಡಾ ಜೀವಾವಧಿ ಶಿಕ್ಷೆಯ ತೀರ್ಪಿನ ವಿರುದ್ಧ ಹೈಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

2015ರಿಂದ ಶಿಕ್ಷೆಯ ಕಾಯಂಮಾತಿ ಮತ್ತು ಆರೋಪಿಗಳ ಮೇಲ್ಮನವಿ ಹೈಕೋರ್ಟ್‌ ನ 9 ವಿವಿಧ ಪೀಠಗಳ ಮುಂದೆ ಬಂದಿತ್ತಾದರೂ..ಯಾವ ಪೀಠವೂ ವಿಚಾರಣೆ ನಡೆಸಿಲ್ಲವಾಗಿತ್ತು. ಜಸ್ಟೀಸ್‌ ಅಜೆಯ್‌ ಗಡ್ಕರಿ ಮತ್ತು ಪಿಡಿ ನಾಯ್ಕ್‌ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತಾದರೂ ಈ ಪೀಠವೂ ವಿಚಾರಣೆ ನಡೆಸಲು ನಿರಾಕರಿಸಿತ್ತು ಎಂದು ವರದಿ ವಿವರಿಸಿದೆ.

ಹೈಕೋರ್ಟ್‌ ನಲ್ಲಿ ಆರೋಪಿಗಳ ಹಾಗೂ ಸರ್ಕಾರದ ಮೇಲ್ಮನವಿಯ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡುವ ಮೊದಲು ಪ್ರಾಸಿಕ್ಯೂಷನ್‌ ಮತ್ತು ಆರೋಪಿಗಳ ಪರ ವಕೀಲರ ವಾದವನ್ನು ಆಲಿಸಿ, ವಿಶೇಷ ಕೋರ್ಟ್‌ ನೀಡಿರುವ ತೀರ್ಪನ್ನು ಮರು ಓದುವ ಮೂಲಕ ತೀರ್ಪನ್ನು ನೀಡಬೇಕಾಗಿದೆ.

ಪ್ರಾಸಿಕ್ಯೂಷನ್‌ ಮತ್ತು ಆರೋಪಿಗಳ ಪರ ವಕೀಲರು ಬಾಂಬೆ ಹೈಕೋರ್ಟ್‌ ನ ಚೀಫ್‌ ಜಸ್ಟೀಸ್‌ ದೀಪಂಕರ್‌ ದತ್ತಾ ಅವರನ್ನು ಭೇಟಿಯಾಗಿ 7/11 ರೈಲು ಸ್ಫೋಟ ಪ್ರಕರಣದ ವಿಚಾರಣೆ ನಡೆಸಲು ವಿಶೇಷ ಪೀಠ ರಚಿಸುವಂತೆ ಮನವಿ ಸಲ್ಲಿಸಿದ್ದರು. ಆದರೆ ಈವರೆಗೂ ವಿಶೇಷ ಪೀಠ ರಚನೆಯಾಗಿಲ್ಲ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next