ಬೆಂಗಳೂರು: ರಾಜ್ಯದಲ್ಲಿ ಎರಡು ವರ್ಷಗಳಲ್ಲಿ 66 ಮಂದಿ ರೇಬಿಸ್‌ನಿಂದ ಸಾವನ್ನಪ್ಪಿದ್ದು, ಇವುಗಳಲ್ಲಿ 15 ವರ್ಷದೊಳಗಿನ ಮಕ್ಕಳ ಪ್ರಮಾಣ ಹೆಚ್ಚಿರುವುದು ಆತಂಕಕ್ಕೀಡು ಮಾಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ, ರೇಬಿಸ್ ರೋಗ ನಿರ್ಮೂಲನೆಗೆ ರಾಜ್ಯದಲ್ಲಿ ಸಮರ್ಪಕವಾಗಿ ಲಸಿಕೆಗಳು, ಔಷಧಿಗಳು, ಎಲ್ಲ ವಿಧದ ಚಿಕಿತ್ಸಾ ಸೇವೆ ಒದಗಿಸಲು ಮುಂದಾಗಿದೆ.
2022ರಲ್ಲಿ 41 ಹಾಗೂ 2023ರಲ್ಲಿ (ಜನವರಿಯಿಂದ ಜುಲೈವರಗೆ) 25 ಮಂದಿ ರೇಬಿಸ್‌ಗೆ ಬಲಿಯಾಗಿರುವುದನ್ನು ಆರೋಗ್ಯ ಇಲಾಖೆಯೇ ದೃಢಪಡಿಸಿದೆ. ಈ ಪೈಕಿ 15 ವರ್ಷದೊಳಗಿನ ಮಕ್ಕಳೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಮಕ್ಕಳಿಗೆ ನಾಯಿ ಕಚ್ಚಿದರೆ ಹೆಚ್ಚಿನ ಸಂದರ್ಭಗಳಲ್ಲಿ ಪೋಷಕರ ಅಥವಾ ಸಂಬಂಧಪಟ್ಟವರ ಗಮನಕ್ಕೆ ಬರುವುದಿಲ್ಲ. ಇದು ಕೂಡ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ವಿಶ್ವಾದ್ಯಂತ ಸಂಭವಿಸುವ ರೇಬಿಸ್ ಸಾವಿನ ಪ್ರಕರಣಗಳಲ್ಲಿ ಶೇ.36ರಷ್ಟು ಭಾರತದಲ್ಲೇ ಸಂಭವಿಸುತ್ತಿವೆ. 18 ರಿಂದ 20 ಸಾವಿರ ಮಂದಿ ಪ್ರತಿ ವರ್ಷ ದೇಶದಲ್ಲಿ ರೇಬಿಸ್ ರೋಗದಿಂದ ಸಾವನ್ನಪ್ಪುತ್ತಿರುವುದನ್ನು ರಾಷ್ಟ್ರೀಯ ರೋಗ ನಿಯಂತ್ರ ಣದ ಸಂಸ್ಥೆಯ ರಾಷ್ಟ್ರೀಯ ರೇಬಿಸ್ ನಿರ್ಮೂಲನ ಕ್ರಿಯಾ ಯೋಜನೆ ವರದಿಯಿಂದ ತಿಳಿದು ಬಂದಿದೆ.
ನಾಯಿ ಕಡಿತದಿಂದ ಶೇ.99ರಷ್ಟು ರೇಬಿಸ್: ಮನುಷ್ಯರಿಗೆ ರೇಬಿಸ್ ರೋಗವು ಶೇ.99 ನಾಯಿ ಕಡಿತದಿಂದ ಬರುತ್ತದೆ. ಇನ್ನುಳಿದಂತೆ ಬೆಕ್ಕು, ತೋಳ, ನರಿ, ಕಾಡು ಇಲಿಗಳ ಕಡಿತದಿಂದ ಶೇ.1 ಪ್ರಮಾಣದಷ್ಟು ಹರಡುತ್ತದೆ. ರೇಬಿಸ್ ಶೇ.100ರಷ್ಟು ಮಾರಣಾಂತಿಕ ಕಾಯಿಲೆ ಯಾಗಿದೆ. ಆದರೆ ಸಮಯೋಚಿತ ವೈದ್ಯಕೀಯ ಚಿಕಿತ್ಸೆಯ ಮೂಲಕ ಈ ರೋಗ ತಡೆಗಟ್ಟಬಹುದು.
ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ಕ್ರಮಗಳು: ರೇಬಿಸ್ ನಿರ್ಮೂಲನೆಗೆ ಮಾರ್ಗದರ್ಶನ ನೀಡಲು ರಾಜ್ಯ, ಜಿಲ್ಲಾ ಹಾಗೂ ಬಿಬಿಎಂಪಿ ವಲಯಗಳಲ್ಲಿ ಜಂಟಿ ಚಾಲನಾ ಸಮಿತಿ ರಚಿಸಲಾಗಿದೆ. ಬೆಂಗಳೂರು, ಮಂಗಳೂರು, ಮೈಸೂರು, ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳನ್ನು ರೇಬಿಸ್ ಮುಕ್ತ ಜಿಲ್ಲೆಗಳಾಗಿಸಲು ಕ್ರಿಯಾಯೋಜನೆ ರೂಪಿಸಲಾಗುತ್ತಿದೆ. ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮವು ಮಾನವ ಸಂಪನ್ಮೂಲ, ಸಲಕರಣೆ, ರೋಗಪತ್ತೆ, ಚಿಕಿತ್ಸೆ ಯನ್ನು ಒಳಗೊಂಡಿವೆ. ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲ ಪ್ರಾಣಿ ಕಡಿತದ ಪ್ರಕರಣಗಳು (ಹಾವು ಕಡಿತ ಹೊರತುಪಡಿಸಿ) ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ.
ರೇಬಿಸ್ ನಿರೋಧಕ ಲಸಿಕೆಯು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮೇಲ್ಮಟ್ಟದ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ. ಈ ಚಿಕಿತ್ಸೆಯು ಸಂಪೂರ್ಣ ಉಚಿತವಾಗಿದೆ. ರೇಬಿಸ್ ನಿರ್ಮೂಲನೆಗಾಗಿ ರಾಜ್ಯ ಸರ್ಕಾರಿ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್ ಎಂ)ನಿಂದ 2022-23ರಲ್ಲಿ 86.64 ಲಕ್ಷ ರೂ. ಹಾಗೂ 2023-24ರಲ್ಲಿ 87.84 ಲಕ್ಷ ರೂ.ಮೀಸಲಿಡಲಾಗಿದೆ.
ರೇಬಿಸ್ ಬಗೆಗಿನ ಮುನ್ನೆಚ್ಚರಿಕೆಗಳೇನು?:
ನಾಯಿ ಕಚ್ಚಿದ ಬಳಿಕ ತತ್ ಕ್ಷಣವೇ ಚಿಕಿತ್ಸೆ ಪಡೆಯಿರಿ.
ಈ ರೋಗದ ಬಗ್ಗೆ ನಿರ್ಲಕ್ಷ್ಯ ತೋರುವುದು ಬೇಡ.
ರೇಬಿಸ್ ಕುರಿತಾದ ಮಾಹಿತಿ ಕೊರತೆಯಿಂದ ಜೀವ ಕಳೆದುಕೊಂಡವರಿದ್ದಾರೆ.
ನಾಯಿ ಕಚ್ಚಿದ ಗಾಯವನ್ನು ಹರಿಯುವ ಸ್ವತ್ಛ ನೀರಿನಲ್ಲಿ 15 ನಿಮಿಷ ತೊಳೆಯಿರಿ.
ನಾಯಿ ಕಚ್ಚಿದರೆ ವೈದ್ಯರನ್ನು ಭೇಟಿಯಾಗಿ ಲಸಿಕೆ ಪಡೆದು ಸುರಕ್ಷಿತವಾಗಿರಿ.
ಬೆಕ್ಕು, ತೋಳ, ನರಿ, ಕಾಡು ಇಲಿಗಳ ಕಡಿತದಿಂದ ರೇಬಿಸ್