Advertisement

ಸಯಾನ್‌ ಜಿಎಸ್‌ಬಿ ಸೇವಾ ಮಂಡಲ ಹರಿಸೇವೆ

05:50 PM Jun 21, 2019 | Vishnu Das |

ಮುಂಬಯಿ: ಶ್ರೀ ಕಾಶೀ ಮಠ ಸಂಸ್ಥಾನದ ವೃಂದಾವನಸ್ಥ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಸನ್ಯಾಸ ದೀಕ್ಷಾ ಅಮೃತ ಮಹೋತ್ಸವ ಹರಿದ್ವಾರದಲ್ಲಿ ಭಾಗವಹಿಸಿದವರಿಗೆ ಮತ್ತು ಇತರರಿಗೆ ಜೂ. 16 ರಂದು ಜಿಎಸ್‌ಬಿ ಸೇವಾ ಮಂಡಲವು ಶ್ರೀ ಗುರುಗಣೇಶ ಪ್ರಸಾದ ಸಭಾಗೃಹದಲ್ಲಿ ಹರಿಸೇವೆಯನ್ನು ಆಯೋಜಿಸಿತು. ಬೆಳಗ್ಗೆ 9.30 ಕ್ಕೆ ಹರಿಸೇವೆ ಪೂಜೆ ಪ್ರಾರಂಭಗೊಂಡಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Advertisement

ಇದೇ ಸಂದರ್ಭದಲ್ಲಿ ಸೇವಾ ಮಂಡಲದ 65 ನೇ ವಾರ್ಷಿಕ ಗಣೇಶೋತ್ಸವದ ಪೂರ್ವ ತಯಾರಿಯ ಪ್ರಥಮ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು. ವೈಧಿಕರಾದ ವಿಜಯ ಭಟ್‌ ಅವರು ಪ್ರಾರ್ಥನೆಗೈದರು. ಸೇವಾ ಮಂಡಲದ ಅಧ್ಯಕ್ಷ ರಮೇಶ್‌ ಭಂಡಾರ್ಕರ್‌ ಅವರು ಸ್ವಾಗತಿಸಿ, ಸಭೆಯಲ್ಲಿ ಪ್ರಸ್ತುತ ವರ್ಷದ ಗಣೇಶೋತ್ಸವದ ಆಯೋಜನಾ ಸಮಿತಿಯ ಪ್ರಧಾನ ಸಂಚಾಲಕರಾಗಿ ಡಾ| ಭುಜಂಗ ಪೈ, ಸಹ ಸಂಚಾಲಕರಾಗಿ ಜಿ. ದಾಮೋದರ ರಾವ್‌, ರಘುನಂದನ್‌ ಕಾಮತ್‌, ನ್ಯಾಯವಾದಿ ಎಂ. ವಿ. ಕಿಣಿ, ಗಣೇಶ್‌ ಯು. ಪ್ರಭು ಅವರನ್ನು ನೇಮಿಸಲಾಗಿದೆ ಎಂದು ನುಡಿದು, ಗಣೇಶೋತ್ಸವ ಸಂಭ್ರಮದ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು.

ಸಹ ಸಂಚಾಲಕ ದಾಮೋದರ ರಾವ್‌ ಅವರು ಮಾತನಾಡಿ, ಮಂಡಲದ ಕಳೆದ ವರ್ಷದ ಗಣೇಶೋತ್ಸವದ ಗಳಿಕೆ. ಖರ್ಚು ಇತ್ಯಾದಿ ವಿಷಯಗಳ ವರದಿಯನ್ನು ವಾಚಿಸಿದರು. ಈ ವರ್ಷ ಗಣೇಶೋತ್ಸವದಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಪೂಜಾ ಸೇವೆ, ಪ್ರಚಾರ ಹಾಗೂ ಇನ್ನಿತರ ಮೂಲಕ ಧನಸಂಗ್ರಹ ಮಾಡುವ ಬಗ್ಗೆ ತಿಳಿಸಿದರು.

ಇನ್ನೋರ್ವ ಸಹ ಸಂಚಾಲಕ ಗಣೇಶ್‌ ಪ್ರಭು ಅವರು ಮಾತನಾಡಿ, ನಮ್ಮ ಗಣೇಶೋತ್ಸವದ ಪ್ರಧಾನ ಅರ್ಚಕರಾಗಿದ್ದ ಬಂಟ್ವಾಳ ಕೃಷ್ಣ ಭಟ್‌ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಅವರು ಗಣೇಶೋತ್ಸವವು ಅದ್ದೂರಿಯಾಗಿ ನಡೆಯಲು ವೈಧಿಕ ವೃಂದದೊಂದಿಗೆ ಕ್ಲಪ್ತ ಸಮಯದಲ್ಲಿ ಪೂಜೆಗಳನ್ನು ನಿರ್ವಹಿಸುವುದರೊಂದಿಗೆ ಸಮಯ ಪಾಲನೆಯಲ್ಲಿ ಸೇವೆ ಸಲ್ಲಿಸಿದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಸೇವಾ ಮಂಡಲದ ಟ್ರಸ್ಟಿ ಆರ್‌. ಜಿ. ಭಟ್‌ ಅವರು ಮಾತನಾಡಿ, ಜಿಎಸ್‌ಬಿ ಗಣೇಶೋತ್ಸವವು ಮುಂಬಯಿ ಹಾಗೂ ಹೊರನಾಡಿನಲ್ಲಿ ಖ್ಯಾತಿ ಪಡೆದಿದೆ. ಈ ಮೂಲಕ ನಮ್ಮ ಸಮಾಜದ ಹೆಸರು ಉನ್ನತ ಸ್ಥಾನಕ್ಕೇರಿದೆ. ಇಲ್ಲಿಯ ಶಿಸ್ತು ಉಲ್ಲೇಖನೀಯ ಎಂದು ನುಡಿದು, ಸೇವಾ ಮಂಡಲದ ಗಣೇಶೋತ್ಸವ ಸಮಿತಿಯ ದಿವಂಗತರಾದ ಮಾಧವ ಪುರಾಣಿಕ್‌, ಬಂಟ್ವಾಳ್‌ ಕೃಷ್ಣ ಭಟ್‌ ಮತ್ತು ದಿನೇಶ್‌ ಪೈ ಅವರು ಸಲ್ಲಿಸಿದ ಸೇವೆಯನ್ನು ವಿವರಿಸಿ, ಜಿಎಸ್‌ಬಿ ಹೆಸರು ಇಂದು ಖ್ಯಾತಿ ಪಡೆಯಲು ಮುಖ್ಯವಾಗಿ ಈ ಮೂವರು ಕಾರಣಕರ್ತರಾಗಿದ್ದಾರೆ ಎಂದರು.

Advertisement

ವೈದಿಕರಾದ ವಿಜಯ ಭಟ್‌ ಅವರು ಮಾತನಾಡಿ, ಐವತ್ತು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಸೇವಾ ಮಂಡಲದ ಗಣೇಶೋತ್ಸವದಲ್ಲಿ ಇತರ ಅರ್ಚಕರೊಂದಿಗೆ ಶ್ರೀ ಮಹಾಗಣಪತಿಯ ಪೂಜೆಯಲ್ಲಿ ಪಾಲ್ಗೊಂಡಿದ್ದೇನೆ. ಈ ವರ್ಷದಿಂದ ಗಣೇಶೋತ್ಸವದಲ್ಲಿ ತನ್ನ ನೇತೃತ್ವದಲ್ಲಿ ಸರ್ವ ಪೂಜೆಗಳನ್ನು ವೈಧಿಕ ವೃಂದದ ಸಹಕಾರದೊಂದಿಗೆ ಮಾಡುವ ಜವಾಬ್ದಾರಿ ವಹಿಸುವೆ ಎಂದು ನುಡಿದು, ಸರ್ವರ ಸಹಕಾರ ಅಗತ್ಯವಾಗಿದೆ ಎಂದರು.

ಸೇವಾ ಮಂಡಲದ ಪ್ರಧಾನ ಕಾರ್ಯದರ್ಶಿ ಶಿವಾನಂದ ಭಟ್‌ ಅವರು ವಂದಿಸಿದರು. ಮುಂದಿನ ಸಮಾಲೋಚನಾ ಸಭೆಯು ಜೂ. 29 ರಂದು ಸಂಜೆ 7.30 ಕ್ಕೆ ಜಿಎಸ್‌ಬಿ ಸೇವಾ ಮಂಡಲ, ಶ್ರೀಗಣೇಶ ಪ್ರಸಾದ ಸಭಾಗೃಹ, ಸಯಾನ್‌ ಪೂರ್ವ ಇಲ್ಲಿ ಜರಗಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next