Advertisement

ಕಲಬುರಗಿಯಲ್ಲಿ 7 ತಿಂಗಳಲ್ಲೇ 654 ಶಿಶುಗಳ ಸಾವು!

10:05 AM Nov 19, 2018 | Team Udayavani |

ಕಲಬುರಗಿ: ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಆದರೆ, ಕಲಬುರಗಿ ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಳೆದ ವರ್ಷಕ್ಕಿಂತ ಪ್ರಸಕ್ತ ಸಾಲಿನಲ್ಲಿ ನವಜಾತ ಶಿಶು ಮರಣ ಪ್ರಮಾಣ ಒಂದೂವರೆ ಪಟ್ಟು ಹೆಚ್ಚಳವಾಗಿರುವ ಆತಂಕಕಾರಿ ಅಂಶ ಬಯಲಿಗೆ ಬಂದಿದೆ.

Advertisement

ಪ್ರಸಕ್ತ 2018ರ ಏಪ್ರಿಲ್‌ನಿಂದ ಕಳೆದ ಅಕ್ಟೋಬರ್‌ ಮಾಸಾಂತ್ಯದ ಈ ಏಳು ತಿಂಗಳ ಅವಧಿಯಲ್ಲಿ ಜಿಲ್ಲಾಸ್ಪತ್ರೆಯೊಂದರಲ್ಲಿಯೇ 433ಕ್ಕೂ ಹೆಚ್ಚು ಶಿಶುಗಳು ಮೃತಪಟ್ಟಿವೆ. ಕಳೆದ ವರ್ಷ 2017ರ ಜನವರಿಯಿಂದ ಜುಲೈ ಅಂತ್ಯದವರೆಗೆ ಜಿಲ್ಲಾಸ್ಪತ್ರೆಯಲ್ಲಿ 288 ಶಿಶುಗಳು ಮೃತಪಟ್ಟಿದ್ದವು. ಇದನ್ನು ಅವಲೋಕಿಸಿದರೆ ಕಳೆದ ಬಾರಿಗಿಂತ ಪ್ರಸಕ್ತ 140ಕ್ಕೂ ಹೆಚ್ಚು ಶಿಶುಗಳು ಮೃತಪಟ್ಟಿವೆ.

ಪ್ರಸಕ್ತ ಸಾಲಿನಲ್ಲಿ ಕಳೆದ ಏಪ್ರಿಲ್‌ನಿಂದ ಅಕ್ಟೋಬರ್‌ ವರೆಗೆ ಜಿಲ್ಲೆಯಾದ್ಯಂತ ಜಿಲ್ಲಾಸ್ಪತ್ರೆಯಲ್ಲಿನ 433 ಶಿಶುಗಳು ಸೇರಿ ಒಟ್ಟು 654 ಶಿಶುಗಳು ಮೃತಪಟ್ಟಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 522 ಶಿಶುಗಳು ಮೃತಪಟ್ಟಿದ್ದನ್ನು ತಾಳೆ ಹಾಕಿದರೆ ಈ ವರ್ಷ 132 ಶಿಶುಗಳ ಸಂಖ್ಯೆ ಹೆಚ್ಚಳವಾಗಿದೆ. ಒಟ್ಟಾರೆ 654ರಲ್ಲಿ 433 ಶಿಶುಗಳು ಜಿಲ್ಲಾಸ್ಪತ್ರೆಯಲ್ಲೇ ಮೃತಪಟ್ಟಿದ್ದನ್ನು ಅವಲೋಕಿಸಿದರೆ ಜಿಲ್ಲಾಸ್ಪತ್ರೆ ಸುರಕ್ಷಿತವಿಲ್ಲವೇ ಎನ್ನುವ ಆತಂಕ ಎದುರಾಗಿದೆ. 

ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಪ್ರಮಾಣವೂ ಜಾಸ್ತಿಯಾಗಿದೆ. ಪ್ರತಿದಿನ 65ರಿಂದ 70 ಹೆರಿಗೆಗಳು ಆಗುತ್ತಿರುತ್ತವೆ. ಪ್ರಸಕ್ತ ವರ್ಷ ಮೃತಪಟ್ಟ 654 ಶಿಶುಗಳಲ್ಲಿ 433 ಶಿಶುಗಳು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ ಖಾಸಗಿ ಆಸ್ಪತ್ರೆಯಲ್ಲಿ 155, ಮನೆಯಲ್ಲಿ 59 ಹಾಗೂ 7 ಶಿಶುಗಳು ದಾರಿ ಮಧ್ಯದಲ್ಲಿ ಮೃತಪಟ್ಟಿವೆ.

 ಆತಂಕಕಾರಿ ಸೆಪ್ಟೆಂಬರ್‌ ತಿಂಗಳು: ಶಿಶು ಮರಣ ಸೆಪ್ಟೆಂಬರ್‌ ತಿಂಗಳಲ್ಲಿ ಹೆಚ್ಚಾಗಿವೆ. ಈ ತಿಂಗಳೊಂದರಲ್ಲಿಯೇ 117 ಶಿಶುಗಳು ಮೃತಪಟ್ಟಿವೆ. ಇದರಲ್ಲಿ 70 ಶಿಶುಗಳು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟರೆ, 10 ಬಸವೇಶ್ವರ ಆಸ್ಪತ್ರೆ, 9 ಸಂಗಮೇಶ್ವರ ಆಸ್ಪತ್ರೆ, ಕೆಬಿಎನ್‌ದಲ್ಲಿ 2, ಶಹಾ ಮಕ್ಕಳ ಆಸ್ಪತ್ರೆಯಲ್ಲಿ 13 ಹಾಗೂ ಚಿರಂಜೀವಿ ಆಸ್ಪತ್ರೆಯಲ್ಲಿ 4 ಶಿಶುಗಳು ಮೃತಪಟ್ಟಿವೆ. ಇನ್ನುಳಿದ 9 ಶಿಶುಗಳು ದಾರಿ ಮಧ್ಯದಲ್ಲಿ ಹಾಗೂ ಮನೆಯಲ್ಲಿ ಮೃತಪಟ್ಟಿವೆ. ಅಕ್ಟೋಬರ್‌ನಲ್ಲಿ ಜಿಲ್ಲೆಯಾದ್ಯಂತ 91 ಶಿಶುಗಳು ಮೃತಪಟ್ಟಿದ್ದು, ಇದರಲ್ಲಿ ಜಿಲ್ಲಾಸ್ಪತ್ರೆಯಲ್ಲಿ 59 ಶಿಶುಗಳು, ಬಸವೇಶ್ವರ ಆಸ್ಪತ್ರೆಯಲ್ಲಿ 7, ಸಂಗಮೇಶ್ವರ ಆಸ್ಪತ್ರೆಯಲ್ಲಿ 14, ಶಹಾ ಮಕ್ಕಳ ಆಸ್ಪತ್ರೆಯಲ್ಲಿ 4 ಹಾಗೂ ಚಿರಂಜೀವಿ ಆಸ್ಪತ್ರೆಯಲ್ಲಿ 4 ಶಿಶುಗಳು ಮೃತಪಟ್ಟರೆ ಮೂರು ಶಿಶುಗಳು ದಾರಿ ಮಧ್ಯದಲ್ಲಿ ಮೃತಪಟ್ಟಿವೆ.

Advertisement

ಹೆರಿಗೆಯಾದ ನಂತರ ತಾಯಿ ಮರಣ ಪ್ರಮಾಣದಲ್ಲೂ ಏರಿಕೆಯಾಗಿದೆ. ಪ್ರಸಕ್ತ ವರ್ಷ ಏಪ್ರಿಲ್‌ ನಿಂದ ಅಕ್ಟೋಬರ್‌ವರೆಗೂ 33 ತಾಯಂದಿಯರು ಮೃತಪಟ್ಟಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ 18, ಖಾಸಗಿ ಆಸ್ಪತ್ರೆಯಲ್ಲಿ 8, ದಾರಿ ನಡುವೆ 6 ಹಾಗೂ ಮನೆಯಲ್ಲಿ ಒಬ್ಬರು ತಾಯಿ ಮೃತಪಟ್ಟಿದ್ದಾರೆ. ಇದು ಕಳೆದ ವರ್ಷದ ಅವಧಿಗಿಂತ ಒಂದು ಸಂಖ್ಯೆ ಹೆಚ್ಚಳವಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. 

ಶಿಶು ಸಾವಿಗೆ ಕಾರಣ ಏನು?: ಜಿಲ್ಲಾಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಾತ್ರಿ ಸಮಯದಲ್ಲಿ ಬಾಣಂತನಕ್ಕೆ ಬರುವ ಮಹಿಳೆಯರಿಗೆ ತುರ್ತಾಗಿ ವೈದ್ಯಕೀಯ ಸೇವೆ ದೊರೆಯದಿರುವುದು ಕಾರಣವಾಗಿರಬಹುದು. ಅಲ್ಲದೇ ಪ್ರಸೂತಿಯಾದ ನಂತರ ಶಿಶುಗಳ ಆರೋಗ್ಯದಲ್ಲಿ ಏನಾದರೂ ಏರುಪೇರು ಕಂಡು ಬಂದಲ್ಲಿ ನವಜಾತ ಶಿಶುಗಳ ತುರ್ತು ಚಿಕಿತ್ಸಾ ಘಟಕದಲ್ಲಿ ಒಂದೇ ಬೆಡ್‌ ಮೇಲೆ ಮೂರ್‍ನಾಲ್ಕು ಮಕ್ಕಳನ್ನು ಮಲಗಿಸಿ ಚಿಕಿತ್ಸೆ ಕೊಡುತ್ತಿರುವುದರಿಂದ ಒಂದು ಮಗುವಿನ ಸೊಂಕು ಮತ್ತೂಂದು ಮಗುವಿಗೆ ತಗಲುತ್ತಿರುವುದೇ ಶಿಶುಗಳ ಸಾವಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. 

ಪ್ರಸಕ್ತ ವರ್ಷ ಒಂದು ತಿಂಗಳು ಅದು ಸೆಪ್ಟೆಂಬರ್‌ ತಿಂಗಳ ಅವಧಿಯಲ್ಲಿಯೇ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಶಸ್ತ್ರಚಿಕಿತ್ಸಾ (ಸಿಜೇರಿಯನ್‌) ಘಟಕ ಬಂದ್‌ ಆಗಿತ್ತು. ಇದರ ಪರಿಣಾಮ ಸಾಮಾನ್ಯ ಹೆರಿಗೆಗಳನ್ನು ಮಾಡಲಾಯಿತು. ಪರಿಣಾಮ ಶಿಶುಗಳಿಗೆ ತೊಂದರೆಯಾದ ಪರಿಣಾಮವೂ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಲು ಕಾರಣ ಎಂಬುದಾಗಿ ವಿಶ್ಲೇಷಿಸಬಹುದಾಗಿದೆ. ಒಟ್ಟಾರೆ ವರ್ಷದಿಂದ ವರ್ಷಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಶಿಶು ಮರಣ ಪ್ರಮಾಣ ಹೆಚ್ಚಳವಾಗುತ್ತಲೇ ಇದೆ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವುದು ಆರೋಗ್ಯ ಇಲಾಖೆ ಕಾರ್ಯವಾಗಿದೆ.

„ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next