Advertisement

65% ಆದಾಯ ಉ.ಕರ್ನಾಟಕಕ್ಕೆ: ಸಿಎಂ

06:00 AM Jul 24, 2018 | Team Udayavani |

ರಾಮನಗರ: ಬೆಂಗಳೂರಿನಿಂದ ಬೊಕ್ಕಸಕ್ಕೆ ಬರುತ್ತಿರುವ ಆದಾಯದ ಪೈಕಿ ಶೇ.65 ರಷ್ಟು ಹಣ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ವ್ಯಯವಾಗುತ್ತಿದೆ. ಇಷ್ಟಿದ್ದರೂ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದೆ. ಸಾಧ್ಯವಾದರೇ ಪ್ರತ್ಯೇಕ ರಾಜ್ಯ ಮಾಡಿಕೊಳ್ಳಿ. ಅದು ಹೇಗೆ ಅಭಿವೃದ್ಧಿ ಮಾಡ್ತಿರೋ ನೋಡೋಣ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭಾವುಕರಾಗಿ ಸವಾಲು ಎಸೆದರು.

Advertisement

ಚನ್ನಪಟ್ಟಣದಲ್ಲಿ ಸೋಮವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಬಿಜೆಪಿ ಹಾಗೂ ತಮ್ಮನ್ನು ಟೀಕಿಸುವ ಮಂದಿಗೆ ಖಡಕ್‌ ಉತ್ತರ ನೀಡಿದರು.

ತಾವು ಬಜೆಟ್‌ನಲ್ಲಿ ಕೈಗೊಂಡ ಸಾಲ ಮನ್ನಾ ಯೋಜನೆ ಲಾಭ ಹೆಚ್ಚಿನ ರೀತಿಯಲ್ಲಿ ಉತ್ತರ ಕರ್ನಾಟಕದ ರೈತರಿಗೆ ಆಗಿದೆ. ಆದರೂ, ತಮ್ಮನ್ನು ಉತ್ತರ ಕರ್ನಾಟಕದ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.

ಉ.ಕ. ಜಿಲ್ಲೆಗಳನ್ನು ತಾವು ನಿರ್ಲಕ್ಷಿಸುತ್ತಿರುವುದಾಗಿ ನಿತ್ಯ  ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಲೇ ಇದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ತಮ್ಮನ್ನು ಉತ್ತರ ಕರ್ನಾಟಕ ಜಿಲ್ಲೆಗಳ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.  ಎಚ್‌.ಡಿ.ದೇವೇಗೌಡರು ಹಾಗೂ ತಾವು ತಮ್ಮ ಆಡಳಿತಾವಧಿಯಲ್ಲಿ ಯಾವ್ಯಾವ ಕಾರ್ಯಕ್ರಮ ಕೊಟ್ಟಿದ್ದೇವೆ ಎಂಬುದರ ಚರ್ಚೆಗೆ ತಾವು ಸಿದ್ಧ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

ಬೆಳಗಾವಿಯಲ್ಲಿ 450 ಕೋಟಿ ರೂ. ವೆಚ್ಚದಲ್ಲಿ ಸುವರ್ಣ ಸೌಧ ನಿರ್ಮಾಣಕ್ಕೆ ತಾವು ಕಾರಣ. ಅಲ್ಲಿ ಇದೀಗ ವಿಧಾನಸಭಾ ಕಲಾಪ ನಡೆಯುತ್ತಿದೆ. ಆ ಭಾಗದ ಅಭಿವೃದ್ಧಿಗೆ ಈ ಸೌಧ ಕಾರಣವಾಗಿದೆ. ಬೆಳಗಾವಿ ಜಿಲ್ಲಾ ಜನರಿಂದ ಕನಿಷ್ಠ ಸೌಜನ್ಯವನ್ನು ತಾವು ನಿರೀಕ್ಷಿಸಿದ್ದಾಗಿ ತಿಳಿಸಿದರು.

Advertisement

ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡುವುದಾಗಿ ಕೆಲವರು ಹೇಳುತ್ತಿದ್ದಾರೆ, ಬೆಂಗಳೂರಿನ ಆದಾಯದ ಶೇ.60ರಷ್ಟನ್ನು ಉತ್ತರ ಕರ್ನಾಟಕದ ಅಭಿವೃದ್ದಿಗೆ ನೀಡುತ್ತಿದ್ದೇವೆ. ಬೆಂಗಳೂರಿನಲ್ಲಿ ಕೈಗಾರಿಕೆಗಾಗಿ ಭೂಮಿ ಕಳೆದುಕೊಂಡು ಕಾರ್ಖಾನೆ ಮುಂದೆ ತನ್ನ ಜಮೀನಿನಲ್ಲೇ ಜವಾನನಾಗಿ ಕರ್ತವ್ಯನಿರ್ವಹಿಸುವವನ ಸ್ಥಿತಿ ನನಗೆ ಗೊತ್ತಿದೆ. ಅವರ ಸ್ಥಿತಿ ಶ್ರೀರಾಮುಲು, ಉಮೇಶ್‌ ಕತ್ತಿಗೆ ಗೊತ್ತಿಲ್ಲ, ಪ್ರತ್ಯೇಕ ರಾಜ್ಯ ಮಾಡುವವರು ಏಕೀಕರಣಕ್ಕಾಗಿ ಏತಕ್ಕೆ ಹೋರಾಟ ಮಾಡಬೇಕಿತ್ತು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next