ಧಾರವಾಡ: ನಗರದ ಏಳು ಖಾಸಗಿ ಆಸ್ಪತ್ರೆಗಳ ವೈದ್ಯರು ಸೇರಿ ಜಿಲ್ಲಾ ನ್ಯಾಯಾಲಯದ ಎದುರಿನ ಇರಕಲ್ ಕಟ್ಟಡದ ಶ್ರೇಯಾ ಆಸ್ಪತ್ರೆಯ ಒಂದು ಭಾಗದಲ್ಲಿ ಯುನಿಟಿ ಹಾಸ್ಪಿಟಲ್ ಹೆಸರಿನಲ್ಲಿ ಪ್ರತ್ಯೇಕವಾಗಿ ಕೋವಿಡ್ ಚಿಕಿತ್ಸೆಗೆ ಮೀಸಲಿಡಲು 65 ಹಾಸಿಗೆಗಳ ಆಸ್ಪತ್ರೆ ಒದಗಿಸಲು ಮುಂದೆ ಬಂದಿದ್ದು, ಉಳಿದ ಆಸ್ಪತ್ರೆಗಳನ್ನು ನಾನ್ ಕೋವಿಡ್ ಚಿಕಿತ್ಸೆಗೆ ಬಳಸಲು ತೀರ್ಮಾನಿಸಿದ್ದಾರೆ.
ಶ್ರೇಯಾ ಆಸ್ಪತ್ರೆಯ ಡಾ|ಸತೀಶ ಇರಕಲ್, ಶ್ರವ್ಯ ಆಸ್ಪತ್ರೆಯ ಡಾ|ಎಸ್. ಆರ್.ಜಂಬಗಿ, ರಾಮನಗೌಡರ ಆಸ್ಪತ್ರೆಯ ಡಾ|ಪ್ರಕಾಶ ರಾಮನಗೌಡರ, ಅಮರಜ್ಯೋತಿ ಆಸ್ಪತ್ರೆಯ ಡಾ|ಜ್ಯೋತಿಪ್ರಕಾಶ ಸುಲ್ತಾನಪುರಿ, ಅಮೃತ ನರ್ಸಿಂಗ್ ಹೋಂನ ಡಾ| ಅಮೃತ ಮಹಾಬಲಶೆಟ್ಟಿ, ಗಲಗಲಿ ನರ್ಸಿಂಗ್ ಹೋಂನ ಡಾ|ಅಮಿತ್ ಗಲಗಲಿ, ಮಂಗಳಾ ಹೆರಿಗೆ ಆಸ್ಪತ್ರೆಯ ಡಾ|ಶಿಶಿರ್ ದೇವರಾಜು ಅವರನ್ನೊಳಗೊಂಡ ತಂಡ ಜಂಟಿಯಾಗಿ ಯುನಿಟಿ ಆಸ್ಪತ್ರೆ ಸ್ಥಾಪಿಸಿ ಅದನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲು ನಿರ್ಧರಿಸಿದ್ದಾರೆ.
ನಗರದ ಡಿಸಿ ಕಚೇರಿಯ ಸಭಾಂಗಣದಲ್ಲಿ ಈ ಕುರಿತು ನಡೆದ ಸಭೆಯಲ್ಲಿ ಈ ಕುರಿತು ಲಿಖೀತ ಮಾಹಿತಿ ಮತ್ತು ಪ್ರಸ್ತಾವನೆ ಸಲ್ಲಿಸಿದ ಖಾಸಗಿ ವೈದ್ಯರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿ ಯುನಿಟಿ ಆಸ್ಪತ್ರೆ ನೋಂದಣಿಯಾದರೆ, ಕೋವಿಡ್ ಸೋಂಕಿತರಿಗೆ ಸರ್ಕಾರ ನಿರ್ಧರಿಸಿದ ದರದಲ್ಲಿ ಚಿಕಿತ್ಸೆ ಒದಗಿಸಲು ಸಿದ್ಧವಿದ್ದೇವೆ. ವೈದ್ಯರು, ನರ್ಸ್ ಹಾಗೂ ಸಹಾಯಕ ಸಿಬ್ಬಂದಿಗೆ ವಿಮಾ ಸೌಲಭ್ಯ ನೀಡಬೇಕು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ಮಾಸಿಕವಾಗಿ ವೈದ್ಯಕೀಯ ಶುಲ್ಕ ಪಾವತಿಯಾಗುವಂತೆ ಕ್ರಮ ವಹಿಸಬೇಕೆಂದು ಜಿಲ್ಲಾ ಧಿಕಾರಿಗಳಿಗೆ ಮನವಿ ಮಾಡಿದರು.
ಖಾಸಗಿ ವೈದ್ಯರ ಈ ಕ್ರಮವನ್ನು ಸ್ವಾಗತಿಸಿದ ಡಿಸಿ ನಿತೇಶ ಪಾಟೀಲ,ಕೋವಿಡ್ ಚಿಕಿತ್ಸೆಗೆ ಮೀಸಲಿಡಲು ಆರಂಭಿಸಲಾಗುತ್ತಿರುವ ಯುನಿಟಿ ಹಾಸ್ಪಿಟಲ್‌ಗೆ ಅಗತ್ಯವಿರುವ ಕೆಪಿಎಂಇ ನೋಂದಣಿ, ಟ್ರೇಡ್ ಲೈಸೆನ್ಸ್, ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿರಾಕ್ಷೇಪಣಾ ಪತ್ರ ಒದಗಿಸಲು ಆದ್ಯತೆ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಹೊಸ ಆಸ್ಪತ್ರೆಗೆ ಸಂಬಂಧಿಸಿದ ಪ್ರಾಧಿಕಾರದಿಂದ ಅನುಮೋದನೆ ಪಡೆಯುವ ಕ್ರಮಗಳನ್ನು ವಿವರಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ|ಯಶವಂತ ಮದೀನಕರ್ ಈ ನಿಟ್ಟಿನಲ್ಲಿ ತ್ವರಿತ ಸ್ಪಂದನೆಗೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.