ಲಿಂಗಸುಗೂರು: ಬಸವಸಾಗರಜಲಾಶಯದಿಂದ ಕಳೆದ 4 ತಿಂಗಳಿಂದ ಒಟ್ಟು 647 ಟಿಎಂಸಿ ಅಡಿ ನೀರು ಕ್ರಸ್ಟ್ ಗೇಟ್‌ಗಳ ಮೂಲಕ ಆಂಧ್ರದ ಪಾಲಾಗಿರುವುದು ಬೆಳಕಿಗೆ ಬಂದಿದೆ.
ಈ ವರ್ಷ ಜುಲೈ ಮೊದಲ ವಾರದಲ್ಲಿ ಕೃಷ್ಣಾ ಕಣಿವೆ ಹಾಗೂ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟು, ಘಟಪ್ರಭಾ, ಮಲಪ್ರಭಾ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸುರಿದ ಮಳೆಯಿಂದ ಬಸವಸಾಗರ ಜಲಾಶಯಕ್ಕೆ ಒಟ್ಟಾರೆ 663 ಟಿಎಂಸಿ ಅಡಿ ನೀರು ಒಳಹರಿವು ಬಂದಿದ್ದು, ಸುಮಾರು4 ತಿಂಗಳುಗಳ ಕಾಲ ಸುಮಾರು 647 ಟಿಎಂಸಿ ಅಡಿ ನೀರನ್ನು ಜಲಾಶಯಕ್ಕೆ ಅನುಗುಣವಾಗಿ ಕಾಯ್ದುಕೊಂಡು ಹೆಚ್ಚುವರಿಯಾಗಿ ಕ್ರಸ್ಟ್ ಗೇಟ್‌ಗಳ ಮೂಲಕ ಕೃಷ್ಣೆಗೆ ಹರಿಬಿಡಲಾಗಿದೆ.
ಈ ನಿಟ್ಟಿನಲ್ಲಿ ಜಲಾಶಯವನ್ನು ಇನ್ನೂ 1 ಮೀಟರ್ ಎತ್ತರವಾಗಿ ನಿರ್ಮಿಸಿದರೆ ರಾಯಚೂರು, ಯಾದಗಿರಿ, ಕಲಬುರಗಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಲಕ್ಷಾಂತರ ರೈತರಿಗೆ ಏತ ನೀರಾವರಿ ಯೋಜನೆಗಳ ಮೂಲಕ ನೀರಾವರಿ ಸೌಲಭ್ಯ ಒದಗಿಸಬಹುದು. ಆದರೆ, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಾರ ಪ್ರಮಾಣದ ನೀರು ಆಂಧ್ರದ ಪಾಲಾಗಿರುವುದು ರಾಜ್ಯದ ಅನ್ನದಾತರ ದುರದೃಷ್ಟಕರ.
ಇನ್ನಾದರೂ ರಾಜ್ಯ ಸರಕಾರ ಎಚ್ಚೆತ್ತು ಪ್ರತಿವರ್ಷ ಪೊಲಾಗುತ್ತಿರುವ ಅಪಾರ ಪ್ರಮಾಣದ ನೀರನ್ನು ಸಂಗ್ರಹ ಮಾಡಲು ಮುಂದಾಗಬೇಕಿದೆ. ಕಳೆದ ವರ್ಷವೂ ಕೂಡಾ ನೆರೆ ಬಂದು ಅಪಾರ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಜಲಾಶಯ ಗರಿಷ್ಠ ನೀರಿನ ಮಟ್ಟವು 492.252 ಮೀಟರ್ ಸಂಗ್ರಹ ಸಾಮರ್ಥ್ಯದಲ್ಲಿ ಪ್ರಸ್ತುತ 492.180 ಮೀಟರ್ ಇದೆ.
ಕಳೆದ 4 ತಿಂಗಳಿಂದ ಬಸವಸಾಗರ ಜಲಾಶಯಕ್ಕೆ ಸುಮಾರು 663 ಟಿಎಂಸಿ ಅಡಿ ನೀರು ಒಳಹರಿವಿದ್ದು, ಇದೇ ನೀರನ್ನು ಕಾಯ್ದುಕೊಂಡು ಸುಮರು 647 ಟಿಎಂಸಿ ಅಡಿ ನೀರನ್ನು ಕೃಷ್ಣಾ ನದಿಗೆ ಕ್ರಸ್ಟ್ ಗೇಟಗಳ ಮೂಲಕ ಹರಿಬಿಡಲಾಗಿದೆ.
-ಎಸ್.ರಂಗರಾಮ್, ಮುಖ್ಯ ಅಭಿಯಂತರ ನಾರಾಯಣಪುರ ವೃತ್ತ