ಸಂಬಾಲ್ಪುರ: ಜ್ಞಾನಕ್ಕೆ ವಯಸ್ಸಿನ ಹಂಗಿಲ್ಲ ಅನ್ನೋದೇ ಇದಕ್ಕೆ! ಒಡಿಶಾದ 64 ವರ್ಷದ ವ್ಯಕ್ತಿಯೊಬ್ಬರು ನೀಟ್ ಪರೀಕ್ಷೆ ಪಾಸ್ ಮಾಡಿಕೊಂಡು, ಈ ಇಳಿವಯಸ್ಸಿ ನಲ್ಲೂ ಎಂಬಿಬಿಎಸ್ ಓದಲು ಬುರ್ಲಾದ ಸರಕಾರಿ “ವಿಮ್ಸಾರ್’ ಮೆಡಿಕಲ್ ಕಾಲೇ ಜಿನ ಮೆಟ್ಟಿಲೇರಿದ್ದಾರೆ.
ನಿವೃತ್ತ ಬ್ಯಾಂಕ್ ನೌಕರರೂ ಆಗಿರುವ ಬಾರ್ಗರ್ ಜಿಲ್ಲೆಯ ಅಟ್ಟಾಬಿರಾದ ಜಯ ಕಿಶೋರ್ ಪ್ರಧಾನ್ ಈಗ ವೈದ್ಯಕೀಯ ವಿದ್ಯಾರ್ಥಿ! ಎಸ್‌ಬಿಐನಲ್ಲಿ ಉಪ ವ್ಯವಸ್ಥಾ ಪಕರಾಗಿ ನಿವೃತ್ತರಾಗಿದ್ದ ಪ್ರಧಾನ್, ಬ್ಯಾಂಕ್ ವೃತ್ತಿಗೆ ಸೇರುವ ಮುನ್ನವೇ ವೈದ್ಯರಾಗುವ ಕನಸನ್ನಿಟ್ಟುಕೊಂಡಿದ್ದರಂತೆ.
“ಇಂಟರ್‌ಮೀಡಿಯೆಟ್ ಇನ್ ಸೈನ್ಸ್ (ಐಎಸ್ಸಿ) ಮುಗಿಸಿದಾಗ ನನಗೆ ಜೀವಶಾಸ್ತ್ರಕ್ಕೆ ಅವಕಾಶ ಸಿಗದೆ, ಬಿಎಸ್ಸಿಯಲ್ಲಿ ಭೌತಶಾಸ್ತ್ರಕ್ಕೆ ಸೇರಬೇಕಾಯಿತು. ಬಳಿಕ 1983ರಲ್ಲಿ ನಾನು ಬ್ಯಾಂಕ್ ನೌಕರನಾದೆ. ಆದರೂ, ನನ್ನ ಕನಸನ್ನು ಹಿಂಬಾಲಿಸುವುದು ನಿಲ್ಲಿಸಲಿಲ್ಲ’ ಎನ್ನುತ್ತಾರೆ, ಪ್ರಧಾನ್.
ಉಚಿತ ಚಿಕಿತ್ಸೆ ಗುರಿ: “2016ರಲ್ಲಿ ನಿವೃತ್ತನಾದ ಬಳಿಕ ಇತ್ತೀಚೆಗೆ ನೀಟ್ ಪರೀಕ್ಷೆ ಬರೆದು, ಉತ್ತೀರ್ಣನಾದೆ. ವೈದ್ಯ ತರಬೇತಿ ಪಡೆದ ಬಳಿಕ, ಬಡವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವ ಕನಸು ಹೊಂದಿದ್ದೇನೆ’ ಎನ್ನುವ ಸದುದ್ದೇಶ ಇವರದ್ದು. ಪ್ರಧಾನ್ ಅವರ ಇಬ್ಬರು ಹೆಣ್ಮಕ್ಕಳಲ್ಲಿ, ಕಿರಿಮಗಳು ನವೆಂಬರ್‌ನಲ್ಲಿ ಅಕಾಲಿಕವಾಗಿ ಮೃತಪಟ್ಟಿದ್ದಾರೆ.
ಸುಪ್ರೀಂಗೆ ಥ್ಯಾಂಕ್ಸ್
ವೈದ್ಯಕೀಯ ಕಾಲೇಜಿನ ಮೆಟ್ಟಿಲೇರಿರುವ ಪ್ರಧಾನ್ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳಿದ್ದಾರೆ. 2018ರಲ್ಲಿ ಕೋರ್ಟ್, 25 ವರ್ಷದ ಮೇಲ್ಪಟ್ಟವರೂ ನೀಟ್ ಬರೆಯಬಹುದು ಎನ್ನುವ ತೀರ್ಪು ನೀಡದಿದ್ದರೆ ನನ್ನಿಂದ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.