ಹೊಸದಿಲ್ಲಿ: ದೇಶದ ಒಂದು ದಿನದ ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ 60 ಸಾವಿರ ಗಡಿ ದಾಟಿದೆ. ಶನಿವಾರ ದೇಶದಲ್ಲಿ 63,489 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದ್ದು, 944 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ದೇಶದ ಒಟ್ಟು ಸೋಂಕಿತರ ಸಂಖ್ಯೆ 25,89,682ಕ್ಕೆ ಏರಿಕೆಯಾಗಿದೆ. ಇದುವರೆಗೆ 18,62, 258 ಮಂದಿ ಗುಣಮುಖರಾಗಿದ್ದು, ಇನ್ನೂ 6,77,444 ಸಕ್ರಿಯ ಪ್ರಕರಣಗಳಿವೆ.
ಶನಿವಾರ ದೇಶದಲ್ಲಿ 944 ಮಂದಿ ಸೋಂಕಿತರು ಮರಣ ಹೊಂದಿದ್ದಾರೆ. ಶುಕ್ರವಾರ ಸಾವಿನ ಪ್ರಮಾಣ ಸಾವಿರ ದಾಟಿತ್ತು. ಇದರಿಂದ ಕಲಬುರ್ಗಿಯಲ್ಲಿ ದಾಖಲಾದ ದೇಶದ ಮೊದಲ ಕೋವಿಡ್ ಸಾವಿನ ಪ್ರಕರಣದಿಂದ ಇದುವರೆಗೆ ದೇಶದಲ್ಲಿ ಒಟ್ಟು 49,980 ಮಂದಿ ಸೋಂಕಿತರು ಮರಣ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ.
ಬಿಹಾರ ರಾಜ್ಯದಲ್ಲಿ 3,536 ಹೊಸ ಸೋಂಕು ಪ್ರಕರಣಗಳು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,01,906ಕ್ಕೆ ಏರಿಕೆಯಾಗಿದೆ. ಇದರಿಂದ ಲಕ್ಷ ಸೋಂಕಿತ ಪ್ರಕರಣಗಳು ದೃಢವಾದ ಹತ್ತನೇ ರಾಜ್ಯವಾಗಿದೆ.
ಕರ್ನಾಟಕ ರಾಜ್ಯದಲ್ಲಿ ಶನಿವಾರ ದಾಖಲೆಯ 8,818 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 2,19,926ಕ್ಕೆ ಏರಿಕೆ ಕಂಡಿದೆ. ಇದುವರೆಗೆ 1,34,811 ಮಂದಿ ಗುಣಮುಖವಾಗಿದ್ದರೆ, 3831 ಮಂದಿ ಸೋಂಕಿತರು ಮರಣ ಹೊಂದಿದ್ದಾರೆ.