ಮುಂಬಯಿ: ಕೊರೊನಾ ನಿರ್ಬಂಧಗಳ ಸಡಿಲಿಕೆಯಿಂದಾಗಿ ಮುಂಬಯಿ ಮಹಾನಗರಕ್ಕೆ ಮೇಲ್ ಮತ್ತು ಎಕ್‌ಪ್ರಸ್ ಮೂಲಕ ಆಗಮನ ಮತ್ತು ನಿರ್ಗಮಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, 2021ರ ಡಿಸೆಂಬರ್‌ನಲ್ಲಿ ಮುಂಬಯಿ ಮಹಾನಗರಕ್ಕೆ 63 ಲಕ್ಷ ಪ್ರಯಾಣಿಕರು ಎಕ್ಸ್‌ಪ್ರೆಸ್ ರೈಲುಗಳ ಮೂಲಕ ಆಗಮಿಸಿದ್ದಾರೆ. ಮುಂಬಯಿಗೆ ಆಗಮಿಸುವ ಒಟ್ಟು ಪ್ರಯಾಣಿಕರ ಪೈಕಿ ಮಧ್ಯ ಮಾರ್ಗದಲ್ಲಿ 42 ಲಕ್ಷ ಎಂದು ಮಧ್ಯ ರೈಲ್ವೇ ತಿಳಿಸಿದೆ.
ಇದರ ಪರಿಣಾಮ ಮುಂಬಯಿ ಸಹಿತ ಇತರ ಮಹಾನಗರ ಪ್ರದೇಶಗಳಲ್ಲಿ ಈ ಪ್ರಯಾಣಿಕರ ಕೊರೊನಾ ತಪಾಸಣೆ ನಡೆಸುವುದು ಆಡಳಿತಕ್ಕೆ ಸವಾಲಾಗಿದೆ. ಈ ಸಂಖ್ಯೆ ಇನ್ನೂ ಹೆಚ್ಚಿದ್ದು, ಮಹಾನಗರ ಪಾಲಿಕೆ ಕೊರೊನಾ ಪರೀಕ್ಷೆಗೆ ಹೆಚ್ಚಿನ ಒತ್ತು ನೀಡಲು ಆರಂಭಿಸಿದೆ.
ಕೊರೊನಾ ಎರಡನೇ ಅಲೆ ಕಡಿಮೆ ಯಾಗುತ್ತಿದ್ದಂತೆಯೇ ರಾಜ್ಯ ಸರಕಾರ ಹಲವು ನಿರ್ಬಂಧಗಳನ್ನು ಸಡಿಲಿಸಿತ್ತು. ನಿರ್ಬಂಧಗಳು ಸಡಿಲಗೊಂಡಂತೆ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ವಲಸಿಗರ ಸಂಖ್ಯೆ ಹೆಚ್ಚಾಯಿತು. ಮಧ್ಯ ರೈಲ್ವೇ ಪ್ರಕಾರ 2021ರ ಡಿಸೆಂಬರ್‌ನಲ್ಲಿ 39 ಲಕ್ಷ ಪ್ರಯಾಣಿಕರು ಮುಂಬಯಿ ನಿಂದ ಊರುಗಳಿಗೆ ತೆರಳಿದ್ದರೆ, 42 ಲಕ್ಷ ಪ್ರಯಾಣಿಕರು ಮುಂಬಯಿ ಮಹಾ ನಗರಕ್ಕೆ ಮರಳಿದ್ದಾರೆ.
ರಾಜ್ಯದ ಮೂಲೆ ಮೂಲೆಗಳಿಂದ ಉತ್ತರ ಭಾರತಕ್ಕೆ ತೆರಳುವ ಹಾಗೂ ಅಲ್ಲಿಂದ ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಪಶ್ಚಿಮ ರೈಲ್ವೇ ಪ್ರಕಾರ ಕಳೆದ ತಿಂಗಳಲ್ಲಿ 20,89,632 ಮಂದಿ ಪ್ರಯಾಣಿಕರು ಮೇಲ್ ಮತ್ತು ಎಕ್ಸ್‌ಪ್ರೆಸ್ ಮೂಲಕ ಮುಂಬಯಿಯಿಂದ ಹೊರಗೆ ಪ್ರಯಾಣಿಸಿದ್ದಾರೆ. 21,83,373 ಪ್ರಯಾಣಿಕರು ಮುಂಬಯಿಗೆ ಮರಳಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೊರೊನಾ ತಪಾಸಣೆಗೆ ಒತ್ತು:
ಮಧ್ಯ ರೈಲ್ವೇಯ ಸಿಎಸ್‌ಎಂಟಿ, ಎಲ್‌ಟಿಟಿ, ದಾದರ್, ಪನ್ವೇಲ್ ನಿಲ್ದಾಣಗಳಲ್ಲಿ ಮತ್ತು ಪಶ್ಚಿಮ ರೈಲ್ವೇಯ ಮುಂಬಯಿ ಸೆಂಟ್ರಲ್, ಬಾಂದ್ರಾ ಟರ್ಮಿನಸ್, ವಸಾಯಿಯಲ್ಲಿ ಇಳಿಯುವ ಪ್ರಯಾಣಿಕರ ಕೊರೊನಾ ಪರೀಕ್ಷೆಗೆ ಅವರನ್ನು ಸರತಿ ಸಾಲಿನಲ್ಲಿ ನಿಲ್ಲಿಸಲಾಗುತ್ತಿದೆ. ಮುಂಬಯಿಯ ಏಳು ನಿಲ್ದಾಣಗಳ ವ್ಯಾಪ್ತಿಯಲ್ಲಿ ಮನಪಾ ವತಿಯಿಂದ ಮೇಲ್ ಮತ್ತು ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಮೊದಲ ಬಾರಿಗೆ ಪ್ರಯಾಣಿಸುವವರ ಪರೀಕ್ಷೆಗೆ ಒತ್ತು ನೀಡಲಾಗುತ್ತಿದೆ. ಆನಂತರ ಮಹಾರಾಷ್ಟ್ರದಿಂದ ಬರುವ ರೈಲುಗಳ ಪ್ರಯಾಣಿಕರನ್ನು ಪರೀಕ್ಷಿಸಲಾಗುತ್ತಿದೆ ಎಂದು ಮುಂಬಯಿ ಮನಪಾ ಹೆಚ್ಚುವರಿ ಆಯುಕ್ತ ಸುರೇಶ್ ಕಾಕಾನಿ ತಿಳಿಸಿದ್ದಾರೆ.