ಲಕ್ನೋ: ಜಿಲ್ಲಾ ಕಾರಾಗೃಹದಲ್ಲಿ 36 ಹೊಸ ಖೈದಿಗಳಿಗೆ ಎಚ್‌ಐವಿ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇಲ್ಲಿನ ಜೈಲಿನಲ್ಲಿ ಈಗಾಗಲೇ 27 ಕೈದಿಗಳು ಎಚ್‌ಐವಿ ಪೀಡಿತರಾಗಿದ್ದು ಇದರೊಂದಿಗೆ ಲಕ್ನೋ ಜಿಲ್ಲಾ ಕಾರಾಗೃಹದಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ 63ಕ್ಕೆ ಏರಿಕೆಯಾಗಿದೆ.
ಇಷ್ಟೊಂದು ಸಂಖ್ಯೆಯಲ್ಲಿ ಎಚ್ ಐವಿ ಸೋಂಕಿತರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜೈಲು ಆಡಳಿತ ಮತ್ತು ಆರೋಗ್ಯ ಇಲಾಖೆ ಆತಂಕಕ್ಕೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ, ಯುಪಿ ಏಡ್ಸ್ ನಿಯಂತ್ರಣ ಸೊಸೈಟಿಯ ಆದೇಶದ ಮೇರೆಗೆ ಆರೋಗ್ಯ ಇಲಾಖೆಯು ಡಿಸೆಂಬರ್ 2023 ರಲ್ಲಿ ಪರೀಕ್ಷೆಯನ್ನು ನಡೆಸಿತ್ತು ಎಂದು ಲಕ್ನೋ ಜೈಲು ಅಧೀಕ್ಷಕ ಆಶಿಶ್ ತಿವಾರಿ ಹೇಳಿದ್ದಾರೆ.
ಜೈಲು ಆಡಳಿತವು ಖೈದಿಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಸಮಾಲೋಚನೆಯನ್ನು ಆರಂಭಿಸಿದ್ದು ಸೋಂಕಿತ ಖೈದಿಗಳ ಡೋಸೇಜ್ ಅನ್ನು ಸಹ ಹೆಚ್ಚಿಸಲಾಗಿದೆ ಎಂದು ಹೇಳಿದೆ.
ಲಕ್ನೋ ಜೈಲಿನ ಸೂಪರಿಂಟೆಂಡೆಂಟ್ ಆಶಿಶ್ ತಿವಾರಿ ನೀಡಿದ ಮಾಹಿತಿಯಂತೆ ಜೈಲಿಗೆ ಹೊಸದಾಗಿ ಬರುವ ಎಲ್ಲಾ ಖೈದಿಗಳನ್ನು ಮಾಸಿಕ ಆಧಾರದ ಮೇಲೆ ಏಡ್ಸ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ, ಇದಕ್ಕಾಗಿ ಪರೀಕ್ಷಾ ಕಿಟ್ ಅನ್ನು ಆರೋಗ್ಯ ಇಲಾಖೆ ಒದಗಿಸುತ್ತದೆ. ಆದರೆ ಆಗಸ್ಟ್ 2023 ರ ನಂತರ, ಪರೀಕ್ಷಾ ಕಿಟ್ ಮುಗಿದಿದೆ, ಇದರಿಂದಾಗಿ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಜೈಲಿನಲ್ಲಿ ಬಂಧಿತರಾಗಿರುವ ಖೈದಿಗಳ ಎಚ್‌ಐವಿ ಪರೀಕ್ಷೆಯನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದರು.
ನಂತರ ಡಿಸೆಂಬರ್‌ನಲ್ಲಿ ಇಡೀ ರಾಜ್ಯದಲ್ಲಿ ಶಿಬಿರಗಳನ್ನು ಆಯೋಜಿಸಲಾಗಿತ್ತು ಮತ್ತು ಎಲ್ಲಾ ಜಿಲ್ಲೆಗಳಲ್ಲಿ ಕಿಟ್‌ಗಳು ಲಭ್ಯವಾದ ನಂತರ, ಪರೀಕ್ಷೆಯನ್ನು ನಡೆಸಲಾಯಿತು, ಇದರಲ್ಲಿ ಲಖನೌ ಜೈಲಿನಲ್ಲಿರುವ 36 ಖೈದಿಗಳು ಎಚ್‌ಐವಿ ಪಾಸಿಟಿವ್ ಇರುವುದು ಕಂಡುಬಂದಿದೆ.
ಕಳೆದ 3 ತಿಂಗಳಲ್ಲಿ ಲಕ್ನೋ ಜೈಲಿನಲ್ಲಿ ದಾಖಲಾಗಿರುವ ಖೈದಿಗಳ ಸಂಖ್ಯೆ ಇದಾಗಿದ್ದು ಈ ಖೈದಿಗಳಲ್ಲಿ ಹೆಚ್ಚಿನವರು ಮಾದಕ ವ್ಯಸನಿಗಳು ಮತ್ತು ಅವರೆಲ್ಲರೂ ಸಿರಿಂಜ್‌ಗಳ ಮೂಲಕ ಮಾದಕ ದ್ರವ್ಯ ಸೇವಿಸುತ್ತಾರೆ ಎಂದು ಆಶಿಶ್ ತಿವಾರಿ ಹೇಳಿದ್ದಾರೆ.
ಇದನ್ನೂ ಓದಿ: Jharkhand; ನನ್ನ ಬಂಧನದ ಪಿತೂರಿಯಲ್ಲಿ ರಾಜಭವನವೂ ಭಾಗಿಯಾಗಿದೆ: ಹೇಮಂತ್ ಸೊರೇನ್