Advertisement

ಪ್ರಧಾನಿ ಮೋದಿ ಆಡಳಿತಕ್ಕೆ ಸೈ ಎಂದ ಜನತೆ ; ಲೋಕಲ್‌ ಸರ್ಕಲ್ಸ್‌  ನಡೆಸಿದ ಸರ್ವೇಯಲ್ಲಿ ಬಹಿರಂಗ

04:52 AM May 29, 2020 | Hari Prasad |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರಕಾರ ಕೇಂದ್ರದಲ್ಲಿ 2ನೇ ಬಾರಿಗೆ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ‘ಲೋಕಲ್‌ ಸರ್ಕಲ್ಸ್‌’ ಎಂಬ ಸಂಸ್ಥೆ ದೇಶದ ನಾಗರಿಕರಲ್ಲಿ ಮೋದಿ ಸರಕಾರದ ಬಗ್ಗೆ ಇರುವ ಅಭಿಪ್ರಾಯವನ್ನು ಕಲೆ ಹಾಕಿದೆ.

Advertisement

ಸರ್ವೇಯಲ್ಲಿ ಪಾಲ್ಗೊಂಡಿದ್ದ ಶೇ. 62ರಷ್ಟು ಜನರು, ಮೋದಿ 2.0 ಸರಕಾರ ಜನರ ಆಶೋತ್ತರಗಳಿಗೆ ಸರಿಯಾಗಿ ಸ್ಪಂದಿಸಿದೆ ಹಾಗೂ ನಿರೀಕ್ಷೆಯನ್ನು ಮೀರಿದ ಉತ್ತಮ ಆಡಳಿತ ನೀಡುತ್ತಿದೆ ಎಂದು ಕೊಂಡಾಡಿದ್ದಾರೆ.

ದೇಶ ಲಾಕ್‌ಡೌನ್‌ ಆಗಿದ್ದ ಸಂದರ್ಭದಲ್ಲಿ ಏ. 30ರಿಂದ ಮೇ 14ರವರೆಗಿನ ಅವಧಿಯಲ್ಲಿ ದೇಶದ 280 ನಗರಗಳ 65,000 ಜನರನ್ನು ಈ ಸರ್ವೆಗೆ ಒಳಪಡಿಸಲಾಗಿತ್ತು. ಅವರಿಂದ ಬಂದ 1,27,000 ಫೀಡ್‌ಬ್ಯಾಕ್‌ಗಳ ಆಧಾರದಲ್ಲಿ ಸರ್ವೆ ವರದಿಯನ್ನು ಸಿದ್ಧಪಡಿಸಲಾಗಿದೆ.

ಸರ್ವೇಯಲ್ಲಿ ಪಾಲ್ಗೊಂಡಿದ್ದ ಶೇ. 79ರಷ್ಟು ಜನರು, ಮೋದಿಯವರ ಪ್ರಯತ್ನದಿಂದಾಗಿ, ಜಗತ್ತಿನಲ್ಲಿ ಭಾರತದ ವರ್ಚಸ್ಸು ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಹೇಳಿದ್ದರೆ, ಶೇ. 73ರಷ್ಟು ಜನರು ಮೋದಿ ಸರಕಾರವು ಉಗ್ರವಾದವನ್ನು ಮಟ್ಟಹಾಕುವಲ್ಲಿ ಯಶಸ್ವಿಯಾಗಿದೆ ಎಂದಿದ್ದಾರೆ.

ಇನ್ನು, ಶೇ. 36ರಷ್ಟು ಮಂದಿ, ದೇಶದಲ್ಲಿ 1 ವರ್ಷದಲ್ಲಿ ಅಗತ್ಯ ಸಾಮಗ್ರಿಗಳ ಬೆಲೆ ಗಣನೀಯವಾಗಿ ಇಳಿದಿದೆ ಎಂದಿದ್ದಾರೆ. ಶೇ. 43 ಜನರು ಕಳೆದೊಂದು ವರ್ಷದಲ್ಲಿ ಭಾರತದಲ್ಲಿ ಉದ್ಯಮ ಶುರು ಮಾಡಲು ಅತ್ಯುತ್ತಮ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದಿದ್ದಾರೆ. ಶೇ. 52ರಷ್ಟು ಜನರು, ತೆರಿಗೆ ಇಲಾಖೆಯ ಅನಗತ್ಯ ಕಿರಿಕಿರಿಗಳು ಇಲ್ಲವಾಗಿವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

ಅಯೋಧ್ಯೆ ಮೆಚ್ಚುಗೆ
ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದ ತೀರ್ಪು ಹೊರಬೀಳುವ ಮುನ್ನವೇ ಕೆಲವು ಧಾರ್ಮಿಕ ಮುಖಂಡರ ಜೊತೆಗೆ ಮಾತುಕತೆ ನಡೆಸಿ, ತೀರ್ಪು ಹೊರಬಿದ್ದಾಗ ಯಾವುದೇ ಗಲಾಟೆಗಳು ನಡೆಯದಂತೆ ಮುನ್ನೆಚ್ಚರಿಕೆಗಳನ್ನು ವಹಿಸಿದ್ದನ್ನು ಬಹುತೇಕ ಮಂದಿ ಮೆಚ್ಚಿಕೊಂಡಿದ್ದಾರೆ. ಶೇ. 56ರಷ್ಟು ಜನರು,ಕಳೆದೊಂದು ವರ್ಷದಲ್ಲಿ ದೇಶದಲ್ಲಿ ಧಾರ್ಮಿಕ ಸಮನ್ವಯತೆಯನ್ನು ಕಾಪಾಡಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ ಕಾಳಜಿಗೆ ಜೈ
ಜಗತ್ತಿನ ಬಹುತೇಕ ಮುಂದುವರಿದ ರಾಷ್ಟ್ರಗಳು ಕೋವಿಡ್ ನ ಈ ಕಾಲಘಟ್ಟದಲ್ಲಿ ತತ್ತರಿಸಿದ್ದರೂ, ಭಾರತ ಮಾತ್ರ ಅದರ ವಿರುದ್ಧ ಜಾಣ್ಮೆಯಿಂದ ಹೋರಾಡುವಂತೆ ಮಾಡಿದ ಕೇಂದ್ರದ ಕ್ರಮವನ್ನು ಸರ್ವೆಯಲ್ಲಿ ಪಾಲ್ಗೊಂಡಿದ್ದ ಬಹುತೇಕರು ಕೊಂಡಾಡಿದ್ದಾರೆ. ಶೇ. 59ರಷ್ಟು ಜನರು ಕೋವಿಡ್ ಪರಿಸ್ಥಿತಿಯನ್ನು ಕೇಂದ್ರ ಸರಕಾರ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದೆ ಎಂದಿದ್ದರೆ, ಶೇ. 31 ಜನರು ಈ ಸಂದರ್ಭದಲ್ಲಿ ಕೇಂದ್ರ ಕೈಗೊಂಡ ಕ್ರಮಗಳು ತೃಪ್ತಿದಾಯಕವಾಗಿವೆ ಎಂದಿದ್ದಾರೆ.

ಅತಿ ಹೆಚ್ಚು ಜನಮನ್ನಣೆ ಪಡೆದ ಅಂಶಗಳು

– ಭಯೋತ್ಪಾದನೆ ವಿರುದ್ಧ ದಿಟ್ಟ ಹೆಜ್ಜೆಗಳು

– ವಿದೇಶಗಳ ಜತೆಗೆ ಬಾಂಧವ್ಯ ವೃದ್ಧಿ

– ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ಹೆಚ್ಚಿದ್ದು

– ಮೂಲೆ ಗುಂಪಾಗಿದ್ದ ಅಥವಾ ಮಹತ್ವದ ಮಸೂದೆಗಳನ್ನು ಕಾನೂನಾಗಿ ಜಾರಿಗೆ ತಂದಿದ್ದು.

– ಕೋವಿಡ್ ಬಿಕ್ಕಟನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದು

Advertisement

Udayavani is now on Telegram. Click here to join our channel and stay updated with the latest news.

Next