ಹೊಸದಿಲ್ಲಿ : ವೈರಲ್ ಆಗಿರುವ ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಸುಮಾರು 61 ಪ್ರೊಫೆಸರ್ ಗಳು ಮತ್ತು ಶಿಕ್ಷಣ ತಜ್ಞರನ್ನು ಲೈಂಗಿಕ ಕಿರುಕುಳಕೋರರು ಎಂದು ಕರೆಯಲಾಗಿದೆ.
24ರ ಹರೆಯದ ಕಾನೂನು ವಿದ್ಯಾರ್ಥಿ ರಯಾ ಸರ್ಕಾರ್ ಈ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್‌ನಲ್ಲಿ ಹೆಸರಿಸಲಾಗಿರುವ ಲೈಂಗಿಕ ಕಿರುಕುಳಕೋರ ಪ್ರೊಫೆಸರ್‌ಗಳು ಸುಮಾರು 30 ವಿವಿಗಳು, ಕಾಲೇಜುಗಳು ಹಾಗೂ ವಿದ್ಯಾಲಯಗಳಿಗೆ ಸೇರಿದವರಾಗಿದ್ದಾರೆ.
ಈ ಪೈಕಿ ಹತ್ತು ಹೆಸರು ದಿಲ್ಲಿ ವಿಶ್ವವಿದ್ಯಾಲಯದವರದಾಗಿದ್ದಾರೆ. ಇನ್ನೊಂದು ಹತ್ತು ಹೆಸರು ಜಾಧವಪುರ ವಿದ್ಯಾಲಯದವರದಾಗಿದ್ದಾರೆ. ಪಟ್ಟಿಯಲ್ಲಿರುವ ಇತರ ಲೈಂಗಿಕ ಕಿರುಕುಳಕೋರರು ಇತರ ವಿಶ್ವವಿದ್ಯಾಲಯಗಳಾದ ಅಂಬೇಡ್ಕರ್ ಯುನಿವರ್ಸಿಟಿ (ಎಯುಡಿ), ಎಫ್ ಟಿ ಐ ಐ, ಸತ್ಯಜಿತ್ ರಾಯ್ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ (ಎಸ್ ಆರ್ ಎಫ್ ಟಿ ಐ) ಮತ್ತು ಜವಾಹರಲಾಲ್ ನೆಹರು ವಿವಿಗೆ ಸೇರಿದವರಾಗಿದ್ದಾರೆ.
‘ತಾನು ಈ ಲೈಂಗಿಕ ಕಿರುಕುಳಕೋರರ ಪಟ್ಟಿಯನ್ನು ಫೇಸ್ ಬುಕ್ ನಲ್ಲಿ ಹಾಕಿರುವುದು ಇವರ ವಿರುದ್ಧ ಸಾಂಸ್ಥಿಕ ಕ್ರಮ ಜರುಗಬೇಕೆಂಬ ಕಾರಣಕ್ಕೆ ಅಲ್ಲ; ಬದಲಾಗಿ ಅಮಾಯಕ ವಿದ್ಯಾರ್ಥಿನಿಯರು ಇವರ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂಬ ಕಾರಣಕ್ಕೆ’ಎಂದು ರಯಾ ಸರ್ಕಾರ್ ಹೇಳಿದ್ದಾರೆ.
ಇದೇ ರೀತಿ ಇತರ ವಿವಿಗಳಲ್ಲಿ ಇರಬಹುದಾದ ಲೈಂಗಿಕ ಕಿರುಕುಳಕೋರರ ಬಗ್ಗೆ ಮಾಹಿತಿ ಇರುವವರು ತನಗೆ ಅದನ್ನು ಕೊಟ್ಟಲ್ಲಿ ತಾನು ಈಪಟ್ಟಿಗೆ ಅವರನ್ನು ಸೇರಿಸುವುದಾಗಿ ಕ್ಯಾಲಿಪೋರ್ನಿಯ ವಿವಿಯ ಡೇವಿಸ್ ಸ್ಕೂಲ್ ಆಫ್ ಲಾನಲ್ಲಿ ಸ್ನಾತಕೋತ್ತರ ಕಾನೂನು ವಿದ್ಯಾರ್ಥಿಯಾಗಿರುವ ಸರ್ಕಾರ್ ಹೇಳಿದ್ದಾರೆ.
ಆದರೆ ಈ ಪೋಸ್ಟ್‌ಗೆ ವ್ಯತಿರಿಕ್ತ ಪ್ರತಿಕ್ರಿಯೆ ಎಂಬಂತೆ, ಕವಿತಾ ಕೃಷ್ಣನ್ ಮತ್ತು ನಿವೇದಿತಾ ಮೆನನ್ ಸೇರಿದಂತೆ ಸುಮಾರು 14 ಸ್ತೀವಾದಿಗಳು, “ಯಾವುದೇ ವಿವರಣೆ. ಸಂದರ್ಭ, ಸಾಕ್ಷ್ಯ ಅಥವಾ ಉತ್ತರದಾಯಿತ್ವ ಇತ್ಯಾದಿ ಯಾವುದೂ ಇಲ್ಲದಿರುವ ಈ ಪೋಸ್ಟ್ ಅನ್ನು ಹಿಂದೆಗೆಯುವಂತೆ ಸರ್ಕಾರ್ ಅವರನ್ನು ಕೋರಿದ್ದಾರೆ.