Advertisement
ಸಾರ್ಥಕ ಪ್ರಜ್ಞೆ
Related Articles
Advertisement
ಸಾರ್ಥಕ ಸೇವೆ
ಹಿರಿಯ ಗುರುಗಳ ಮಾತಿಗೆ ಬದ್ಧರಾಗಿರುವುದು ಎಂಬುದರ ಪ್ರತಿರೂಪ ಎಂಬಂತೆ ಸನ್ಯಾಸವಾಗಿ 35 ವರ್ಷಗಳ ಕಾಲವೂ ಅಧಿಕಾರವನ್ನು ಬಯಸದೆ ನಿಸ್ಪೃಹವಾಗಿ ಬದುಕಿದರು. ಗುರುಗಳ ಬಗೆಗೆ ಅವರ ಹಣೆಯಲ್ಲಿ ಎಂದು ಅಸಹನೆಯ ಗೆರೆ ಮೂಡಲಿಲ್ಲ. ಅಸಹನೆ ತೋರಿ, ಗುರುಗಳನ್ನು ನಿಂದಿಸಿದವರ ಬಗ್ಗೆ ಎಂದೂ ಸಹಿಸಿಕೊಳ್ಳಲಿಲ್ಲ. ಗುರುಗಳ ಕಾರ್ಯಭಾರದ ನಡುವೆ ತಾನಂದು ಕೊಂಡದ್ದು ನಡೆಯದಾಗ ಮುಖ ಬಾಡಲಿಲ್ಲ. ಗುರುಗಳ ಅಗತ್ಯಕ್ಕೆ ಸದಾ ಊರುಗೋಲಾಗಿ ಜೊತೆಗಿದ್ದವರು. ತನ್ನ ಸಂಚಾರದ ಅನೇಕ ಕಾರ್ಯಕ್ರಮಗಳನ್ನು ಗುರುಗಳಿಗಾಗಿಯೇ ಬದಲಾಯಿಸಿಕೊಳ್ಳುತ್ತಿದ್ದರು. ಎಲ್ಲದಕ್ಕಿಂತಲೂ ಮಿಗಿಲಾಗಿ ಯಾರು ಮಾಡಲಾಗದ ಎಂದು ಮರೆಯಲಾಗದ ಅವರ ತ್ಯಾಗವೆಂದರೆ ಪರ್ಯಾಯ ಪೀಠದಲ್ಲಿ ಪಂಚಮ ಪೂಜಾ ದೀಕ್ಷೆಯನ್ನು ಗುರುಗಳಿಗೆ ಒದಗಿಸಿದ್ದು. ತನ್ನ ಆಯುಷ್ಯದಲ್ಲಿ ಐದು ದಶಕಗಳು ಕಳೆದು ಹೋಗಿವೆ. ಪೂಜಾ ದೀಕ್ಷೆಯ ಅವಕಾಶ ಮತ್ತೊದಗುವುದೋ ತಿಳಿಯದು. ಆದರು ಅನುಕ್ಷಣವು ಗುರುಗಳ ಒಡನೆ ಇದ್ದು ಗುರುಗಳಿಂದ ಪಂಚಮ ಮಹಾ ಪರ್ಯಾಯ ಪೂಜೆಯ ಉತ್ಸವವನ್ನು ನಡೆಸಿಕೊಟ್ಟರು. ಗುರುಗಳು ಯಾವಾಗಲೂ ನಾವು ಮತ್ತು ನಮ್ಮ ಶಿಷ್ಯರು ಸೇರಿ ನಡೆಸಿದ ಪರ್ಯಾಯ ಎಂದೇ ಹೇಳುತ್ತಿದ್ದರು. ತನ್ನ ಶಿಷ್ಯನ ಬಗ್ಗೆ ಯಾವಾಗಲೂ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದರು. ಅಂತಹ ಸಾರ್ಥಕ ಸೇವೆಯ ಫಲವಾಗಿ ರಾಮಜನ್ಮ ಭೂಮಿಯ ಟ್ರಸ್ಟ್ ನ ವಿಶ್ವಸ್ಥ ಮಂಡಳಿಯ ಸದಸ್ಯತ್ವ ಒದಗಿತು. ದಕ್ಷಿಣ ಭಾರತದ ಏಕ ಮಾತ್ರ ವ್ಯಕ್ತಿಯಾಗಿ ಶ್ರೀಗಳು ಅಯೋಧ್ಯೆಯ ರಾಮಚಂದ್ರನ ಪೀಠದಲ್ಲಿ ನಮ್ಮೆಲ್ಲರನ್ನು ಪ್ರತಿನಿಧಿಸುತ್ತಿದ್ದಾರೆ. ತನ್ನ ಅವಸಾನದ ಮುನ್ನವೇ ತನ್ನ ಶಿಷ್ಯನ ಹೆಸರನ್ನು ಮಂಡಳಿಯ ಸದಸ್ಯತ್ವ ಪಟ್ಟಿಯಲ್ಲಿ ಸೇರಿಸಲು ಶಿಫಾರಸು ಮಾಡಿದ್ದರು ಎಂಬುವುದು ತಿಳಿದಿದ್ದೆ ಬಳಿಕ. ಗುರುಗಳ ಸೇವೆ ಎಂದೂ ವ್ಯರ್ಥವಾಗಿಲ್ಲ.
ಸಾರ್ಥಕ ಶಿಕ್ಷಣ
ಶಿಕ್ಷಣವೆಂದರೆ ನಮ್ಮತನವನ್ನು ಮರೆತು ಪರಕೀಯರಾಗುವುದಿಲ್ಲ. ನಮ್ಮತನವನ್ನು ಉಳಿದುಕೊಂಡೆ ಇಂದಿನ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವುದು. ವಿದೇಶಗಳಲ್ಲಿ ಮುಖ ಮಾಡುವುದನ್ನು ಹೆಗ್ಗಳಿಕೆ ಎಂಬಂತೆ ಬಿಂಬಿಸುವ ಇಂದಿನ ಶಿಕ್ಷಣದ ಕೊಳ್ಳುಬಾಕ ಸಂಸ್ಕೃತಿಗೆ ಮಾರಿಕೊಳ್ಳುವ ಅಪಾಯವನ್ನು ಶ್ರೀಗಳು ಸುಮಾರು ಎರಡು ದಶಕಗಳ ಹಿಂದೆಯೇ ಗುರುತಿಸಿದ್ದರು. ಪ್ರಾಚೀನ-ನವೀನ ಎರಡೂ ಶಿಕ್ಷಣವನ್ನು ಒಂದೇ ವೇದಿಕೆಯಲ್ಲಿ ಕೊಡುವ ಪ್ರಯತ್ನವಾಗಿ ಶ್ರೀಗಳ ನೇತೃತ್ವದಲ್ಲಿ ಪ್ರಹ್ಲಾದ ಗುರುಕುಲ ಜನ್ಮ ತಾಳಿತು. ದೇಹ-ಆತ್ಮದಂತಿರುವ ಲೌಕಿಕ-ಅಧ್ಯಾತ್ಮ ಸಮ್ಮಿಳಿತ ಶಿಕ್ಷಣ ಇವತ್ತಿನ ತುರ್ತು ಎಂಬುದು ಈಗಿನ ಶಿಕ್ಷಣತಜ್ಞರು ಸಹಕಾರಗಳಿಗೆ ಶಿಫಾರಸು ಮಾಡುತ್ತಿದ್ದಾರೆ. ಭಾರತೀಯ ತತ್ವಜ್ಞಾನ, ಪ್ರಾಚೀನ ಇತಿಹಾಸ ವಿಜ್ಞಾನಗಳ ಜೊತೆಗೆ ಇಂದಿನ ಪ್ರಶ್ನಿಸುವ ಪ್ರಯೋಗಶೀಲ ವಾತಾವರಣ ಜೊತೆ ಕೂಡಿದರೆ ಹೆಮ್ಮೆಯ ಭಾರತ ತಲೆಯೆತ್ತುತ್ತದೆ. ಸ್ವಾವಲಂಬಿ ಪೀಳಿಗೆ ಮುಂದಿನದಾಗುತ್ತದೆ. ಇಂದಿನ ಈ ಬಗೆಯ ಪ್ರಯೋಗಗಳಿಗೆ ಪ್ರಹ್ಲಾದ ಗುರುಕುಲ ಮಾದರಿ ಎನಿಸಿತು.
ಸಾರ್ಥಕ ಬದುಕು
ಕೃಷಿ ಕುಟುಂಬದ ಹಿನ್ನೆಲೆಯ ಶ್ರೀಗಳು ನಿರಂತರ ಕ್ರಿಯಾಶೀಲರು. ಸಂಸ್ಕೃತ, ಕನ್ನಡ, ತುಳು, ಇಂಗ್ಲಿಷ್, ತೆಲುಗು, ತಮಿಳು, ಒರಿಯಾ, ಮಲೆಯಾಳಂ ಭಾಷೆಗಳನ್ನು ಬಲ್ಲವರು. ಕುದುರೆಯ ಸವಾರಿ ಮಾಡುತ್ತಾರೆ. ಹಗ್ಗ, ಗಳುಗಳ ಸಹಾಯವಿಲ್ಲದೆ ಸರಸರನೆ ಮರ ಏರುತ್ತಾರೆ. ಬೈಕ್ ಓಡಿಸುತ್ತಾರೆ. ಪದಗಳ ಅರ್ಥ ವಿಮರ್ಶೆ ಶ್ರೀಗಳ ಅಚ್ಚುಮೆಚ್ಚಿನ ಸಂಗತಿಗಳಲ್ಲೊಂದು. ಏಟಾಗಿ ತೊಂದರೆಗಳಿಗೊಳಗಾದ ಹಾವು, ಹಕ್ಕಿ, ಜಿಂಕೆ ಮೊದಲಾದ ಜೀವಿಗಳಿಗೆ ಚಿಕಿತ್ಸೆ ನೀಡಿ ಸುರಕ್ಷಿತ ಜಾಗಕ್ಕೆ ಬಿಟ್ಟಿದ್ದಾರೆ. ಆಹಾರ ನಿಯಮದೊಂದಿಗೆ ಯೋಗಪಟುವಾಗಿ ದೇಹದ ದಾರ್ಡ್ಯವನ್ನು ಕಾಯ್ದುಕೊಂಡಿದ್ದಾರೆ. ಯತಿಧರ್ಮಕ್ಕೆ ಚ್ಯುತಿಯಾಗದಂತೆ ನೇಮ ಸಂಪ್ರದಾಯಗಳ ಪಾಲಿಸುತ್ತಲೇ ಸಮಾಜಕ್ಕೆ ನೆರವಾಗುತ್ತಿದ್ದಾರೆ. ಸಾಮಾಜಿಕ ಪಿಡುಗುಗಳ ನಿವಾರಣೆಗಾಗಿ ದನಿಯಾಗಿದ್ದಾರೆ. ಧರ್ಮದ ಅವಹೇಳನಕಾರಿ ಮಾತುಗಳನ್ನು ಖಂಡಿಸುತ್ತಾರೆ. ಬೀಡಾಡಿ, ಗಾಯಕ್ಕೊಳಗಾದ, ಮುದಿ ಹೋರಿ, ಹಸು, ಕೋಣಗಳನ್ನು ನಿರ್ವ್ಯಾಜವಾಗಿ ನೋಡಿಕೊಳ್ಳುತ್ತಿರುವುದು ಎಂದಿಗೂ ಬೆಲೆ ಕಟ್ಟಲಾಗದ ಕೆಲಸ. ಎರಡು ಸಾವಿರಕ್ಕೆ ಹತ್ತಿರದಷ್ಟು ಹಸುಗಳ ಆರೈಕೆಗಾಗಿ ತಲೆ ಎತ್ತಿರುವ ಕೃಷ್ಣದೇಗುಲ, ಸರೋವರದಿಂದೊಡಗೂಡಿದ ‘ನೀಲಾವರ ಗೋಶಾಲೆ’ ತೀರ್ಥಕ್ಷೇತ್ರವೇ ಆಗಿದೆ. ಸಂಗೀತ ಇವರ ಆಸಕ್ತಿಯ ವಿಷಯವಾಗಿದೆ. ತುಳಸಿ ಸಂಕೀರ್ತನೆ ಕುಣಿತವನ್ನು ನೂರಾರು ಹುಡುಗರಿಗೆ ಹೇಳಿಕೊಟ್ಟು ಮನೆಮನೆಗಳಲ್ಲಿ ಹಬ್ಬಿಸಿದ್ದಾರೆ. ಪರಿಸರ ತಜ್ಞರೂ ಆಗಿ ಕೃಷಿಯ ಕಾರ್ಯದಲ್ಲಿ ಅಪಾರ ತಿಳುವಳಿಕೆ ಹೊಂದಿದ್ದಾರೆ. ಸಾರ್ಥಕ ಬದುಕನ್ನು ಸಾಗಿಸಲು ಬೇಕಾದ ನೂರಾರು ಸಾಧಕ ಜೀವಿಗಳೊಂದಿಗೆ ಕಾಲ ಕಳೆದಿದ್ದಾರೆ. ಇವರ ಅರವತ್ತು ಸಂವತ್ಸರಗಳು ಮುಂದಿನ ಪೀಳಿಗೆಗೂ ಅನುಭವದ ಮೂಟೆಯನ್ನೆ ಹೊತ್ತು ನಿಂತಿದೆ. ಇಂಥವರ ಬದುಕು ಸಂಸ್ಕೃತಿಯ ಹೊನಲನ್ನು ಇನ್ನೂ ಹೆಚ್ಚಿಸಿದೆ. ಇಲ್ಲಿ ಬನ್ನಂಜೆ ಗೋವಿಂದಾಚಾರ್ಯರ ಪಂಚತಂತ್ರದ ಕನ್ನಡದ ಅವತರಣಿಕೆಯ ಮಾತು ಸ್ಮರಣೀಯ..
ಒಂದಷ್ಟು ಕಳಕೊಂಡು ಕಿಂಚಿತ್ತು ಉಳಿಸುವುದು ಜಾಣತನಕೊಂದು ಕೆಸರು.
ಚೂರು ಕಳಕೊಂಡು ನೂರು ಉಳಿಸಿದರೆ ಜಾಣತನವೆಂದು ಹೆಸರು
ಲೇಖನ: ಕೃಷ್ಣರಾಜ ಕುತ್ಪಾಡಿ