ನವದೆಹಲಿ: ಮಹಿಳಾ ಸಿಬ್ಬಂದಿಗೆ ಮಗು ಹುಟ್ಟಿದ ಕೂಡಲೇ ಅದು ಅಸುನೀಗಿದರೆ, ಅಂಥ ಸಿಬ್ಬಂದಿಗೆ 60 ದಿನಗಳ ವಿಶೇಷ ರಜೆ ನೀಡಲು ಸರ್ಕಾರ ನಿರ್ಧರಿಸಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಇದು ಅನ್ವಯವಾಗಲಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ನಿರ್ದೇಶನಾಲಯ ಶುಕ್ರವಾರ ಆದೇಶ ಹೊರಡಿಸಿದೆ.
ಮಗು ಹುಟ್ಟಿದ ಸಂದರ್ಭದಲ್ಲಿಯೇ ಅಸುನೀಗಿದರೆ, ಅದರಿಂದ ತಾಯಿಗೆ ಗಂಭೀರ ರೀತಿಯ ಆಘಾತ ಉಂಟಾಗುತ್ತದೆ. ದೀರ್ಘಾವಧಿಗೆ ಕಹಿನೆನಪು ಕಾಡುತ್ತದೆ. ಆ ದುಃಖವನ್ನು ತಾಯಿ ಮರೆಯುವಂತಾಗಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.
ಹೆರಿಗೆ ರಜೆ ಎಂದರೆ ಕೇವಲ ಮಗುವನ್ನು ಹೆತ್ತರೆ ಮಾತ್ರವೇ ಅನ್ವಯವಾಗುತ್ತದೆಯೋ ಅಥವಾ ಜನನದ ಹಂತದಲ್ಲಿ ಅಥವಾ ಜನನದ ಬಳಿಕ ಮಗು ಅಸುನೀಗಿದರೂ ರಜೆ ನೀಡಲಾಗುತ್ತದೆಯೇ ಎಂಬ ಬಗ್ಗೆ ಸಾವಿರಾರು ಮಂದಿ ಮಾಹಿತಿ ಕೋರಿದ್ದರು.
ಹೀಗಾಗಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವರ ಮಟ್ಟದಲ್ಲಿಯೇ ಈ ಬಗ್ಗೆ ಚರ್ಚೆ ನಡೆಸಲಾಯಿತು. ಅದರಿಂದ ಉಂಟಾಗುವ ದುಃಖವನ್ನು ತಡೆಯುವ ನಿಟ್ಟಿನಲ್ಲಿ 60 ದಿನಗಳ ವಿಶೇಷ ರಜೆ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಒಂದು ವೇಳೆ ಕೇಂದ್ರ ಸರ್ಕಾರಿ ಸೇವೆಯಲ್ಲಿ ಇರುವ ಮಹಿಳೆ ಹೆರಿಗೆ ರಜೆಯನ್ನು ಈಗಾಗಲೇ ಪಡೆದುಕೊಂಡಿದ್ದು, ಅದು ಮುಕ್ತಾಯದ ಹಂತದಲ್ಲಿ ಇರುವಾಗ ಶಿಶು ಅಸುನೀಗಿದರೆ, ಹೆಚ್ಚುವರಿಯಾಗಿ ರಜೆಯ ಮುಕ್ತಾಯದಿಂದ 60 ದಿನಗಳ ಕಾಲ ವಿಶೇಷ ಹೆರಿಗೆ ರಜೆ ನೀಡಲೂ ಅವಕಾಶ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.