ಮುಳಬಾಗಿಲು: ತಾಲೂಕಿನಲ್ಲಿ 5 ವರ್ಷಗಳ ಹಿಂದೆ ಖಾಸಗಿ ಕಂಪನಿಯೊಂದು ಸೋಲಾರ್ ವಿದ್ಯುತ್ ಘಟಕ ನಿರ್ಮಿಸುವ ನೆಪದಲ್ಲಿ 60 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದರೂ ತಾಲೂಕು ಆಡಳಿತ ಇದುವರೆಗೂ ತೆರವುಗೊಳಿಸದೇ ಇರುವುದು ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಮುಂಬೈನ ಆದಿತ್ಯಾ ಬಿರ್ಲಾ ಗ್ರೂಪ್ಸ್ ಕಂಪನಿ ಮುಳಬಾಗಿಲು ತಾಲೂಕಿನಲ್ಲಿ 20 ಮೆ.ವ್ಯಾ. ಸೋಲಾರ್ ವಿದ್ಯುತ್ ಉತ್ಪಾದಿಸಿ ಸರಬರಾಜು ಮಾಡಲು 2016ರಲ್ಲಿ ಕ್ರೆಡಲ್‌ನಿಂದ ಟೆಂಡರ್ ಪಡೆದಿತ್ತು. ಆದರೆ, ಕಂಪನಿ ಯಾವುದೇ ನಿಕರವಾದ ಗ್ರಾಮ ಮತ್ತು ಸರ್ವೆ ನಂಬರ್ ಜಮೀನಿನಲ್ಲಿ ಸೋಲಾರ್ ಘಟಕ ನಿರ್ಮಾಣ ಮಾಡುವುದಾಗಿ ಮಾಹಿತಿ ನೀಡದೇ ಉತ್ಪಾದಿಸಿದ ಸೋಲಾರ್ ವಿದ್ಯುತ್ತನ್ನು ಬೈರಕೂರು ಸಬ್‌ಸ್ಟೇಷನ್‌ಗೆ ಸರಬರಾಜು ಮಾಡಲು 7 ಕಿ.ಮೀ. ದೂರದ ತಂತಿ ಹಾಕಲು ಅನುಮತಿ ಪಡೆದಿದ್ದರು, ಕಂಪನಿಯು 2017ರಲ್ಲಿ ಬೈರಕೂರು ಹೋಬಳಿ ಪುಣ್ಯಹಳ್ಳಿ ಗ್ರಾಮದ ಪಕ್ಕದಲ್ಲಿ ಸೋಲಾರ್ ವಿದ್ಯುತ್ ಘಟಕ ನಿರ್ಮಾಣಕ್ಕೆ ಚಿಂತಿಸಿ ಘಟಕ ನಿರ್ಮಾಣದ ಗುತ್ತಿಗೆಯನ್ನು ಆಂಧ್ರಪ್ರದೇಶದ ಕರ್ನೂಲು ಮೂಲದ ಸೋಲಾರ್ ಕಿಂಗ್ ಇಂಡಿಯಾ ಕಂಪನಿಗೆ ವಹಿಸಿದ್ದರು.
ಸೋಲಾರ್ ಕಿಂಗ್ ಇಂಡಿಯಾ ಕಂಪನಿ ತಾಲೂಕಿನ ಪುಣ್ಯಹಳ್ಳಿ ಸ.ನಂ.116 ಮತ್ತು 117ರ ಎರಡೂ ಸರ್ವೆ ನಂಬರ್‌ಗಳಲ್ಲಿನ ಸುಮಾರು 60 ಎಕರೆ ಸರ್ಕಾರಿ ಜಮೀನು ಸೇರಿದಂತೆ ಪರಿಶಿಷ್ಟ ಜಾತಿ/ವರ್ಗಗಳ ರೈತರಿಗೆ ಮಂಜೂರಾಗಿದ್ದ ಖುಷ್ಕಿ ಜಮೀನನ್ನು ರೈತರಿಂದ ಜಿಪಿಎ ಮೂಲಕ ಪಡೆದಿದ್ದು, ದಲಿತ ರೈತರ ಜಮೀನು ಭೂಸ್ವಾಧೀನಕ್ಕೆ ಸರ್ಕಾರದಿಂದ ಅನುಮತಿ ಪಡೆಯದೇ, ನಿಯಮ ಉಲ್ಲಂಘನೆ ಮಾಡಿ ಸೋಲಾರ್ ಘಟಕ ನಿರ್ಮಿಸಿದ್ದರು. ಆದರೆ ಅಂದಿನ ಇಂದನ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಪಿ.ರವಿಕುಮಾರ್ ಅವರ ಆದೇಶದಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಸೋಲಾರ್ ಘಟಕ ನಿರ್ಮಾಣಕ್ಕೆ ತಡೆಯೊಡ್ಡಿ ಸಂಪೂರ್ಣ ತೆರವಿಗೆ ಸೂಚಿಸಿದ್ದರು.
ಅಂದಿನ ತಹಶೀಲ್ದಾರ್ ಬಿ.ಎನ್.ಪ್ರವೀಣ್ ನಂಗಲಿ ಪೊಲೀಸರ ಸಹಕಾರದೊಂದಿಗೆ ನಿರ್ಮಾಣಗೊಂಡಿದ್ದ ಸೋಲಾರ್ ಘಟಕವನ್ನು ಜೆಸಿಬಿಗಳಿಂದ ತೆರವುಗೊಳಿಸಿದ್ದರು. ಆದರೆ ಆ ವೇಳೆ ಕಿಂಗ್ ಸೋಲಾರ್ ಇಂಡಿಯಾ ಕಂಪನಿ ಒತ್ತುವರಿ ಮಾಡಿಕೊಂಡಿರುವ ಸುಮಾರು 60 ಎಕರೆ ಸರ್ಕಾರಿ ಜಮೀನು ಇಂದಿಗೂ ಆದಿತ್ಯ ಬಿರ್ಲಾ ಗ್ರೂಪ್ ಅಧೀನದಲ್ಲೇ ಇದೆ. ಕೋಟ್ಯಾಂತರ ರೂ. ಬೆಲೆ ಬಾಳುವ ಜಮೀನನ್ನು ಇದುವರೆಗೂ ತಾಲೂಕು ಆಡಳಿತ ತೆರವುಗೊಳಿಸಿ ವಶಕ್ಕೆ ಪಡೆದುಕೊಳ್ಳದಿರುವುದು ಸಾರ್ವಜನಿಕರ ಚರ್ಚೆಗೆ ಕಾರಣವಾಗಿದೆ.
ಮುಂಬೈನ ಆದಿತ್ಯಾ ಬಿರ್ಲಾ ಗ್ರೂಪ್ಸ್ , ಆಂಧ್ರದ ಸೋಲಾರ್ ಕಿಂಗ್ ಇಂಡಿಯಾ ಕಂಪನಿಗಳು ಕೋಟ್ಯಾಂತರ ರೂ.ಗಳು ಮೌಲ್ಯದ ಸುಮಾರು 60 ಎಕರೆಗೂ ಅಧಿಕ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು, ತೆರವುಗೊಳಿಸಲು ತಾಲೂಕು ಆಡಳಿತಕ್ಕೆ ಇದುವರೆಗೂ ಎರಡು ಸಾರಿ ಅರ್ಜಿ ನೀಡಿದ್ದರೂ ತೆರವುಗೊಳಿಸದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.
●ದೇವರಾಜ್, ಪುಣ್ಯಹಳ್ಳಿ ಗ್ರಾಮದ ಮುಖಂಡ
ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ ಕುರಿತಂತೆ ಪುಣ್ಯಹಳ್ಳಿ ಗ್ರಾಮಸ್ಥರು ಕಳೆದ ವರ್ಷ ತಾಲೂಕು ಕಚೇರಿಗೆ ನೀಡಿರುವ ಅರ್ಜಿ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ರಾಜಸ್ವ ನಿರೀಕ್ಷಕರೊಂದಿಗೆ ಚರ್ಚಿಸಿ ಮಾಹಿತಿ ಪಡೆದು ತಹಶೀಲ್ದಾರ್ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
●ಡಿ.ಟಿ.ವೆಂಕಟೇಶಯ್ಯ, ಬೈರಕೂರು ಉಪ ತಹಶೀಲ್ದಾರ್
ಮುಂಬೈ, ಆಂಧ್ರ ಮೂಲಕ ಕಂಪನಿಗಳಿಂದ ಆಗಿರುವ ಭೂಮಿ ಒತ್ತುವರಿ ಕುರಿತು ತಮಗೆ ಮಾಹಿತಿ ಇಲ್ಲ. ತಹಶೀಲ್ದಾರ್ ಜತೆಗೆ ಚರ್ಚೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗುವುದು. ಅಕ್ರವಾಗಿದ್ದರೆ ಅಗತ್ಯವಾಗಿ ಕ್ರಮ ವಹಿಸಲಾಗುವುದು.
●ವೆಂಕಟ್‌ರಾಜಾ, ಜಿಲ್ಲಾಧಿಕಾರಿ
ಎಂ.ನಾಗರಾಜಯ್ಯ,