ಚಳಿಗಾಲದಲ್ಲಿ ಚರ್ಮ ಬಿರುಕು ಬಿಟ್ಟಂತೆಯೇ ತಲೆಯ ತ್ವಚೆ ಕೂಡ ಶುಷ್ಕವಾಗುತ್ತದೆ. ಆ ಪರಿಣಾಮ, ಚಳಿಗಾಲದಲ್ಲಿ ಹೊಟ್ಟಿನ ಸಮಸ್ಯೆಯೂ ಕಾಡುತ್ತದೆ. ಚರ್ಮ ಒಣಗಿ, ಸತ್ತ ಜೀವಕೋಶಗಳು ಹೆಚ್ಚಾದಂತೆ ತಲೆಹೊಟ್ಟು ಹೆಚ್ಚಾಗುತ್ತದೆ. ಆಗ ಹಣೆಯ ಮೇಲೆ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ತಲೆಹೊಟ್ಟಿನ ತಲೆಬೇನೆಯಿಂದ ಮುಕ್ತರಾಗಲು ಹೀಗೆ ಮಾಡಿ..
1. ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ಸಮ ಪ್ರಮಾಣದಲ್ಲಿ ಲಿಂಬೆರಸ ಬೆರೆಸಿ ಕೂದಲಿನ ಬುಡಕ್ಕೆ ಮಸಾಜ್ ಮಾಡಿ, ಅರ್ಧ ಗಂಟೆಯ ನಂತರ ತಲೆ ಸ್ನಾನ ಮಾಡಿ. ಕೊಬ್ಬರಿ ಎಣ್ಣೆಯಿಂದ ಕೂದಲಿಗೆ ಪೋಷಣೆ ದೊರೆತರೆ, ಲಿಂಬೆ ರಸವು ನಿರ್ಜೀವ ಚರ್ಮದ ಕಣವನ್ನು ನಿರ್ಮೂಲನೆ ಮಾಡುತ್ತದೆ.
2. ಮೆಂತ್ಯೆ ಕಾಳನ್ನು ರಾತ್ರಿ ನೆನೆಸಿಟ್ಟು, ಬೆಳಗ್ಗೆ ನೀರನ್ನೆಲ್ಲ ತೆಗೆದು ಮಿಕ್ಸರ್‌ನಲ್ಲಿ ಅರೆಯಿರಿ. ನುಣ್ಣನೆಯ ಪೇಸ್ಟ್ ಅನ್ನು ತಲೆಗೂದಲ ಬುಡಕ್ಕೆ ಲೇಪಿಸಿ, ಅರ್ಧ ಗಂಟೆಯ ನಂತರ ಸ್ನಾನ ಮಾಡಿ. ಮೆಂತ್ಯೆಯ ತುಣುಕುಗಳು ತಲೆಯಲ್ಲಿ ಉಳಿಯದಂತೆ ಕೂದಲನ್ನು ತೊಳೆಯಬೇಕು.
3. ಮೆಂತ್ಯೆಯನ್ನು ನೆನೆಸಿ ರುಬ್ಬಿಡುವಷ್ಟು ಸಮಯ ಇಲ್ಲದಿದ್ದಲ್ಲಿ, ಹುಳಿ ಮೊಸರನ್ನು ತಲೆ ಚರ್ಮಕ್ಕೆ ಹಚ್ಚಿ ಸ್ನಾನ ಮಾಡಬಹುದು. ತಲೆಹೊಟ್ಟು ಕಡಿಮೆಯಾಗುವ ತನಕ ವಾರಕ್ಕೊಮ್ಮೆಯಾದರೂ ಹುಳಿಮೊಸರಿನ ಆರೈಕೆ ಅಗತ್ಯ.
4. ಮದರಂಗಿಗೆ, ಮೊಟ್ಟೆಯ ಬಿಳಿಭಾಗ, ಲಿಂಬೆಹಣ್ಣಿನ ರಸ (ಕೂದಲಿನ ಬಣ್ಣ ಹೆಚ್ಚಲು ಬೀಟ್‌ರೂಟ್ ರಸ, ಟೀ ಅಥವಾ ಕಾಫಿ ಡಿಕಾಕ್ಷನ್ ಬೆರೆಸಬಹುದು) ಹಾಕಿ ಚೆನ್ನಾಗಿ ಕಲಸಿ. ಮಿಶ್ರಣವನ್ನು ತಲೆಗೆ ಹಚ್ಚಿಕೊಂಡು, ಒಂದು ಗಂಟೆಯ ನಂತರ ತಲೆ ಸ್ನಾನ ಮಾಡಿ.
5. ತಲೆಯನ್ನು ಒದ್ದೆ ಮಾಡಿಕೊಂಡು, ಬೇಕಿಂಗ್‌ಸೋಡಾದಿಂದ ಮಸಾಜ್ ಮಾಡಿ, ಮೂರು ನಿಮಿಷಗಳ ನಂತರ ಸ್ವತ್ಛವಾಗಿ ತಲೆ ತೊಳೆದುಕೊಳ್ಳಿ.
6. ಬೇವಿನ ಎಣ್ಣೆ ಅಥವಾ ಬೇವಿನೆಲೆಯನ್ನು ಅರೆದು ಪೇಸ್ಟ್ ಮಾಡಿ ಹಚ್ಚಿಕೊಂಡು ಒಂದರ್ಧ ಗಂಟೆಯ ನಂತರ ತಲೆ ಸ್ನಾನ ಮಾಡಿ.
ಕುಬೇರಪ್ಪ ಎಂ. ವಿಭೂತಿ, ಹರಿಹರ