ಲಾಹೋರ್: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಜಮಾನ್ ಪಾರ್ಕ್ ನಿವಾಸದಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಆರು ಶಂಕಿತ ಭಯೋತ್ಪಾದಕರನ್ನು ಬಂಧಿಸಿರುವುದಾಗಿ ಪಾಕಿಸ್ತಾನದ ಪಂಜಾಬ್ ಪೊಲೀಸರು ಹೇಳಿದ್ದಾರೆ.
ಬಂಧಿತ ಭಯೋತ್ಪಾದಕರು ಕೋರ್ ಕಮಾಂಡರ್ ನಿವಾಸ ಧ್ವಂಸ ಮತ್ತು ದಾಳಿ ಪ್ರಕರಣದಲ್ಲಿ ಭಾಗಿಯಾದವರು ಎಂದು ಪೊಲೀಸರು ತಿಳಿಸಿದ್ದಾರೆ.
ಇದರೊಂದಿಗೆ, ಬಂಧಿತರ ಸಂಖ್ಯೆ 14 ಕ್ಕೆ ತಲುಪಿದೆ. ಗುರುವಾರ ಹೆಚ್ಚಿನ ಸಂಖ್ಯೆಯ ಪಂಜಾಬ್ ಪೊಲೀಸರು ಲಾಹೋರ್‌ನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮನೆಯನ್ನು ಸುತ್ತುವರೆದಿದ್ದಾರೆ. “ಭಯೋತ್ಪಾದಕರನ್ನು” ಬಂಧಿಸಲು ಶುಕ್ರವಾರ ಯಾವುದೇ ಸಮಯದಲ್ಲಿ ಭದ್ರತಾ ಕಾರ್ಯಾಚರಣೆಯನ್ನು ಪ್ರಾರಂಭಿಸಬಹುದು.
ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಮುಖ್ಯಸ್ಥರು ಭಯೋತ್ಪಾದಕರನ್ನು ಹಸ್ತಾಂತರಿಸುವ ಗಡುವನ್ನು ಪೂರೈಸಲು ವಿಫಲರಾದ ಕಾರಣ ಖಾನ್ ಅವರ ಜಮಾನ್ ಪಾರ್ಕ್ ನಿವಾಸದಲ್ಲಿ ಯಾವುದೇ ಸಮಯದಲ್ಲಿ ಪೊಲೀಸ್ ಕ್ರಮವನ್ನು ನಿರೀಕ್ಷಿಸಲಾಗಿದೆ ಎಂದು ಉಸ್ತುವಾರಿ ಪಂಜಾಬ್ ಸರ್ಕಾರ ಹೇಳಿದೆ.
ಮೇ 9 ರಂದು ಸೇನಾ ನೆಲೆಗಳ ಮೇಲಿನ ದಾಳಿಯಲ್ಲಿ ಭಾಗಿಯಾಗಿರುವ ಶಂಕಿತ 8 ಜನರನ್ನು ಜಮಾನ್ ಪಾರ್ಕ್ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹಸನ್ ಭಟ್ಟಿ ಗುರುವಾರ ಹೇಳಿದ್ದಾರೆ.