ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯ ಘಟಕದ ತರಗತಿ ಗಳು ನೆಲ್ಯಾಡಿಯಲ್ಲಿ ತಾತ್ಕಾಲಿಕ ಬಾಡಿಗೆ ಕಟ್ಟಡದಲ್ಲಿ ಕಳೆದ ಶೈಕ್ಷಣಿಕ ವರ್ಷಾರಂಭದಲ್ಲಿ ಪ್ರಾರಂಭವಾಗಿದ್ದು, ಉದ್ದೇಶಿತ ವಿ.ವಿ. ಘಟಕಕ್ಕೆ ಮೀಸಲಿರುವ ಸ್ಥಳದಲ್ಲಿ ವಿವಿ ಘಟಕ ಕಟ್ಟಡವನ್ನು ಆರಂಭಿಸುವ ಕುರಿತು ಪೂರ್ವಭಾವಿ ಸಭೆ ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ| ಎ.ಎಂ. ಖಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೀಸಲಿ ರಿಸಿದ ಸ್ಥಳದಲ್ಲಿ ಮುಂದಿನ ಶೈಕ್ಷಣಿಕ ವರ್ಷಾರಂಭದಲ್ಲಿ ಕಟ್ಟಡವನ್ನು ರಚಿ ಸುವ ಕುರಿತು ಸ್ಥಳೀಯರು ಮತ್ತು ಜನಪ್ರತಿನಿಧಿಗಳ ಸಭೆ ಕರೆಯಲಾಗಿದೆ. ಶಾಶ್ವತ ಕಟ್ಟಡದ ಪಂಚಾಂಗವನ್ನು ನಿರ್ಮಿಸಿ, ಮೇಲ್ಗಡೆಗೆ ತಾತ್ಕಾಲಿಕ ಶೆಡ್‌ಗಳ ಮಾದರಿಯಲ್ಲಿ ಆರು ಕೊಠಡಿಗಳ ಕಟ್ಟಡವನ್ನು ರಚಿಸುವುದಾದಲ್ಲಿ ಕನಿಷ್ಠ 25 ಲಕ್ಷ ರೂ. ಬೇಕಾಗಬಹುದು. ವಿಶ್ವವಿದ್ಯಾನಿಲಯ 10 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಿದೆ. ಉಳಿದ ಹಣ ವನ್ನು ದಾನಿಗಳ ಮೂಲಕ ಕ್ರೋಡೀಕರಿ ಸಲು ಸ್ಥಳೀಯರೂ ಕೈಜೋಡಿಸಬೇಕು ಎಂದರು. ಸೋಮವಾರದಿಂದಲೇ ಕಾಮಗಾರಿ ಆರಂಭಿಸಲು ಸಭೆಯಲ್ಲಿ ಸಲಹೆ ಕೇಳಿ ಬಂತು.
ನೆಲ್ಯಾಡಿಯ ವಿಶ್ವವಿದ್ಯಾನಿಲಯ ಘಟಕ ಅನುಷ್ಠಾನ ಸಮಿತಿಯ ಕಾರ್ಯಾಧ್ಯಕ್ಷೆ, ತಾ.ಪಂ. ಸದಸ್ಯೆ ಉಷಾ ಅಂಚನ್ ಮಾತನಾಡಿ, ವಿ.ವಿ. ಘಟಕದ ಕಟ್ಟಡದ ಕಾರ್ಯಾರಂಭಕ್ಕೆ ಸ್ಥಳೀಯರು ಉತ್ಸುಕತೆ ತೋರಿದ ಸಮಯದಲ್ಲೇ ವಿವಿ ಅಧಿಕಾರಿಗಳೂ ಸ್ಪಂದಿಸಿರುವುದು ಸಂತಸದ ವಿಚಾರ. ಸ್ಥಳೀಯ ಜನಪ್ರತಿನಿಧಿಗಳು, ಎರಡೂ ಕ್ಷೇತ್ರಗಳ ಶಾಸಕರು ವಿವಿ ಘಟಕದ ಕಟ್ಟಡ ಆರಂಭಕ್ಕೆ ಕೈಜೋಡಿಸಬೇಕು ಎಂದು ವಿನಂತಿಸಿದರು.
ವೇದಿಕೆಯಲ್ಲಿ ಮಂಗಳೂರು ವಿವಿ ಕುಲಪತಿಗಳಾದ ಪ್ರೊ| ಈಶ್ವರ ಪಿ., ಕುಲಸಚಿವ (ಆಡಳಿತ) ಪ್ರೊ| ಎ.ಎಂ. ಖಾನ್, ಪರೀಕ್ಷಾಂಗ ಕುಲಸಚಿವ ಪ್ರೊ| ರವೀಂದ್ರಾಚಾರ್, ವಿ.ವಿ. ಹಣಕಾಸು ಅಧಿಕಾರಿ ಪ್ರೊ| ದಯಾನಂದ ನಾಯ್ಕ, ವಿಶೇಷಾಧಿಕಾರಿ ಪ್ರೊ| ನಾಗಪ್ಪ ಗೌಡ, ಕಾರ್ಯಕಾರಿ ಅಭಿಯಂತರ ಲವ ಡೊಂಬರ್, ನೆಲ್ಯಾಡಿ ವಿ.ವಿ. ಘಟಕದ ಕಾರ್ಯಾಧ್ಯಕ್ಷೆ ಉಷಾ ಅಂಚನ್, ಕಡಬ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ನೆಲ್ಯಾಡಿ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ಕೌಕ್ರಾಡಿ ಗ್ರಾ.ಪಂ. ಅಧ್ಯಕ್ಷ ಎಂ.ಕೆ. ಇಬ್ರಾಹಿಂ, ಕೆ.ಪಿ. ತೋಮಸ್, ರವೀಂದ್ರ ಟಿ., ಎಂ.ಕೆ. ಎಲಿಯಾಸ್, ಮಹಮ್ಮದ್ ಹನೀಫ್, ತಾ.ಪಂ. ಸದಸ್ಯೆ ಆಶಾ ಲಕ್ಷ್ಮಣ್, ಭಾಸ್ಕರ ಗೌಡ ಇಚಿಲಂಪಾಡಿ, ವಿಶ್ವನಾಥ ಶೆಟ್ಟಿ ಕುಂಡಡ್ಕ, ಅಬ್ರಹಾಂ ಮೊದಲಾದವರು ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ| ಯತೀಶ್ ಕುಮಾರ್ ಸ್ವಾಗತಿಸಿದರು. ಗಂಗಾಧರ ಶೆಟ್ಟಿ ಹೊಸಮನೆ ವಂದಿಸಿದರು.